ಗುಜರಾತ್​ ಸೇತುವೆ ದುರಂತ: ಮೃತರ ಸಂಖ್ಯೆ 141ಕ್ಕೆ ಏರಿಕೆ; ಹಲವರು ನಾಪತ್ತೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಗುಜರಾತ್​ನ ಮೊರ್ಬಿಯ ನವೀಕರಣಗೊಂಡ ಶತಮಾನಗಳಷ್ಟು ಹಳೆಯದಾದ ಸೇತುವೆ ಕುಸಿದು ಬಿದ್ದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 141ಕ್ಕೆ ಏರಿಕೆಯಾಗಿದ್ದು, ಈ ವರೆಗೂ 177ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.
ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳು.
ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳು.

ಮೊರ್ಬಿ(ಗುಜರಾತ್​): ಗುಜರಾತ್​ನ ಮೊರ್ಬಿಯ ನವೀಕರಣಗೊಂಡ ಶತಮಾನಗಳಷ್ಟು ಹಳೆಯದಾದ ಸೇತುವೆ ಕುಸಿದು ಬಿದ್ದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 141ಕ್ಕೆ ಏರಿಕೆಯಾಗಿದ್ದು, ಈ ವರೆಗೂ 177ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೇನೆ, ನೌಕಾಪಡೆ, ವಾಯುಪಡೆ, ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ದುರಂತ ಕುರಿತು ಗುಜರಾತ್ ರಾಜ್ಯದ ಗೃಹ ಸಚಿವ ಹರ್ಷ್ ಸಂಘ್ವಿ ಅವರು ಮಾಹಿತಿ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಐಜಿಪಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ ನೌಕಾಪಡೆ, ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ), ವಾಯುಪಡೆ ಮತ್ತು ಭೂಸೇನೆ ತ್ವರಿತವಾಗಿ ಸ್ಥಳಕ್ಕೆ ಆಗಿಮಿಸಿ ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಿದರು ಎಂದು ಹೇಳಿದ್ದಾರೆ.

ಘಟನೆಯ ನಂತರ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್, ಗೃಹ ಖಾತೆ ರಾಜ್ಯ ಸಚಿವ ಹರ್ಷಭಾಯ್ ಸಾಂಘ್ವಿ, ಸಚಿವ ಬ್ರಿಜೇಶ್ಭಾಯಿ ಮೆರ್ಜಾ ಮತ್ತು ರಾಜ್ಯ ಸಚಿವ ಶ್ರೀ ಅರವಿಂದಭಾಯಿ ರೈಯಾನಿ ಅವರು ಮಧ್ಯರಾತ್ರಿ ಘಟನಾ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯನ್ನು ಖುದ್ದು ಪರಿಶೀಲಿಸಿದರು.

ಜಿಲ್ಲಾಡಳಿತದ ವಿವರಗಳ ಪ್ರಕಾರ, ದುರಂತ ಸಂಭವಿಸುತ್ತಿದ್ದಂತೆಯೇ ಕೂಡಲೇ ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಇದಲ್ಲದೇ ಬೇರೆ ಕಡೆಯಿಂದಲೂ ರಕ್ಷಣಾ ಪಡೆಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದರು. ವಿವಿಧ ಆರೋಗ್ಯ ಕೇಂದ್ರಗಳು, ರಾಜ್‌ಕೋಟ್ ಪಿಡಿಯು ಆಸ್ಪತ್ರೆ ಮತ್ತು ಸುರೇಂದ್ರನಗರ ಸಿವಿಲ್ ಆಸ್ಪತ್ರೆಯ ಸುಮಾರು 40 ವೈದ್ಯರು ಗಾಯಾಳುಗಳಿಗೆ ಮೊರ್ಬಿ ಸಿವಿಲ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯನ್ನು ನೀಡುತ್ತಿದ್ದಾರೆಂದು ಮಾಹಿತಿ ನೀಡಿದರು.

ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕರೆತರಲು ರಾಜ್‌ಕೋಟ್, ಜಾಮ್‌ನಗರ, ಜುನಾಗಢ್ ಮೆಟ್ರೋಪಾಲಿಟನ್ ಪುರಸಭೆ ಮತ್ತು ಮೊರ್ಬಿ ಪುರಸಭೆಯಿಂದ ತುರ್ತು ಆಂಬುಲೆನ್ಸ್‌ಗಳು ಸ್ಥಳಕ್ಕೆ ಆಗಮಿಸಿ ರಾತ್ರಿಯಿಡೀ ಸಂಚಾರ ನಡೆಸಿದವು. ಹಲವಾರು ಖಾಸಗಿ ಆಂಬ್ಯುಲೆನ್ಸ್‌ಗಳು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com