ದೇಶವನ್ನು ವಿಭಜಿಸಲು ಭಾರತ ವಿರೋಧಿ ಶಕ್ತಿಗಳ ಪ್ರಯತ್ನವನ್ನು ಸರ್ದಾರ್ ಪಟೇಲ್ ವಿಫಲಗೊಳಿಸಿದರು: ಅಮಿತ್ ಶಾ

ದೇಶವನ್ನು ವಿಭಜಿಸಲು ಭಾರತ ವಿರೋಧಿ ಶಕ್ತಿಗಳ ಪ್ರಯತ್ನಗಳ ಹೊರತಾಗಿಯೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ತಮ್ಮ ದೂರದೃಷ್ಟಿಯಿಂದ ಬಲಿಷ್ಠ ಮತ್ತು ಅಖಂಡ ಭಾರತದ ಕನಸನ್ನು ನನಸಾಗಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.
ಅಮಿತ್ ಶಾ
ಅಮಿತ್ ಶಾ

ನವದೆಹಲಿ: ದೇಶವನ್ನು ವಿಭಜಿಸಲು ಭಾರತ ವಿರೋಧಿ ಶಕ್ತಿಗಳ ಪ್ರಯತ್ನಗಳ ಹೊರತಾಗಿಯೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ತಮ್ಮ ದೂರದೃಷ್ಟಿಯಿಂದ ಬಲಿಷ್ಠ ಮತ್ತು ಅಖಂಡ ಭಾರತದ ಕನಸನ್ನು ನನಸಾಗಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.

ಸರ್ದಾರ್ ಪಟೇಲ್ ಅವರ ಪರಂಪರೆಯನ್ನು ಅಳಿಸಲು ಹಲವಾರು ವರ್ಷಗಳು ನಡೆದ ಪ್ರಯತ್ನಗಳ ಹೊರತಾಗಿಯೂ, ಅಖಂಡ ಭಾರತದ ಸೃಷ್ಠಿಗಾಗಿ ಅವರು ನೀಡಿದ ದೊಡ್ಡ ಕೊಡುಗೆಗಳಿಗಾಗಿ ಭಾರತದ ಜನರು ಅವರನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ ಎಂದು ಅವರು ಹೇಳಿದರು.

ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 147 ನೇ ಜನ್ಮದಿನದ ಸ್ಮರಣಾರ್ಥ ಕಾರ್ಯಕ್ರಮದ ಚಾಲನೆ ನೀಡುವಾಗ ಶಾ ಮಾತನಾಡಿದರು.

ರಾಜಧಾನಿಯಲ್ಲಿ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಿಂದ ಆರಂಭವಾದ 'ರನ್ ಫಾರ್ ಯೂನಿಟಿ'ಯಲ್ಲಿ ಕ್ರೀಡಾ ಪಟುಗಳು, ಕ್ರೀಡಾ ಉತ್ಸಾಹಿಗಳು ಮತ್ತು ಕೇಂದ್ರ ಪೊಲೀಸ್ ಪಡೆಗಳ ಸಿಬ್ಬಂದಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

'ಆ ಸಮಯದಲ್ಲಿಯೂ ಭಾರತ ವಿರೋಧಿ ಶಕ್ತಿಗಳು ದೇಶವನ್ನು ವಿಭಜಿಸಲು ಎಲ್ಲಾ ರೀತಿಯಿಂದ ಪ್ರಯತ್ನಿಸಿದರು. ಆದರೆ, ಸರ್ದಾರ್ ಪಟೇಲ್ ತಮ್ಮ ದೂರದೃಷ್ಟಿ ಮತ್ತು ರಾಜಕೀಯ ಚಾಣಾಕ್ಷತೆಯ ಮೂಲಕ ಜುನಾಗಢ, ಜಮ್ಮು ಮತ್ತು ಕಾಶ್ಮೀರ ಮತ್ತು ಹೈದರಾಬಾದ್ ಅನ್ನು ಭಾರತದ ಒಕ್ಕೂಟದ ಅಡಿಯಲ್ಲಿ ಹೇಗೆ ತಂದರು ಎಂಬುದನ್ನು ನಾವು ನೋಡಿದ್ದೇವೆ' ಎಂದರು.

ಪಟೇಲ್ ಇಲ್ಲದಿದ್ದರೆ ಬಲಿಷ್ಠ ಮತ್ತು ಅಖಂಡ ಭಾರತ ಕನಸು ನನಸಾಗಲು ಸಾಧ್ಯವಾಗುತ್ತಿರಲಿಲ್ಲ. ಇಂದಿನ ಭಾರತವನ್ನು ರೂಪಿಸುವಲ್ಲಿ ಸರ್ದಾರ್ ಪಟೇಲರು ಪ್ರಮುಖ ಪಾತ್ರ ವಹಿಸಿದ್ದು, ಭಾರತದ ಕನಸನ್ನು ನನಸಾಗಿಸಲು ಅವರ ಕೊಡುಗೆ ಅಪಾರವಾಗಿದೆ. ಜನರು ಪಟೇಲ್ ಹೆಸರನ್ನು ತೆಗೆದುಕೊಂಡಾಗಲೆಲ್ಲಾ ಅವರ ಮನಸ್ಸಿಗೆ ಭಾರತದ ನಕ್ಷೆ ಬರುತ್ತದೆ ಮತ್ತು ಪಟೇಲ್ ಇಲ್ಲದಿದ್ದರೆ ಬೃಹತ್ ಮತ್ತು ಬಲಿಷ್ಠ ಭಾರತ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ ಎಂದು ಗೃಹ ಸಚಿವರು ಹೇಳಿದರು.

ಸ್ವಾತಂತ್ರ್ಯದ ಸಮಯದಲ್ಲಿ ಎಲ್ಲಾ ರಾಜಪ್ರಭುತ್ವದ ರಾಜ್ಯಗಳನ್ನು ಭಾರತದ ಒಕ್ಕೂಟದ ಅಢಿಯಲ್ಲಿ ತರುವುದು ಸವಾಲಾಗಿತ್ತು. ಸರ್ದಾರ್ ಪಟೇಲ್ ಅವರೆಲ್ಲರನ್ನೂ ಭಾರತದ ಒಕ್ಕೂಟದ ಅಡಿಯಲ್ಲಿ ತಂದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಬಲಿಷ್ಠ, ಸ್ವಾವಲಂಬಿ ಮತ್ತು ಸಮೃದ್ಧಿಯಾಗಲು ಮುನ್ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕಳೆದ ಎಂಟು ವರ್ಷಗಳಲ್ಲಿ ದೇಶವು ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ ಎಂದು ಹೇಳಿದರು.

'2047ರ ವೇಳೆಗೆ, ನಾವು ಸರ್ದಾರ್ ಪಟೇಲ್ ಅವರು ಊಹಿಸಿದಂತೆ ಭಾರತವನ್ನು ರೂಪಿಸಲು ಸಾಧ್ಯವಾಗುತ್ತದೆ. ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ದೇಶವು ತನ್ನ 100ನೇ ಸ್ವಾತಂತ್ರ್ಯದ ವರ್ಷವನ್ನು ಆಚರಿಸುವ 2047ರ ವೇಳೆಗೆ ಭಾರತವನ್ನು ವಿಶ್ವದ ಅತ್ಯಂತ ಬಲಿಷ್ಠ ಮತ್ತು ಅತ್ಯಂತ ಶ್ರೀಮಂತ ರಾಷ್ಟ್ರವನ್ನಾಗಿ ಮಾಡುವ ಪ್ರತಿಜ್ಞೆಯನ್ನು ಪ್ರತಿಯೊಬ್ಬ ನಾಗರಿಕರು ತೆಗೆದುಕೊಳ್ಳುತ್ತಾರೆ' ಎಂದು ಅವರು ಹೇಳಿದರು.

ಗುಜರಾತ್‌ನಲ್ಲಿ ಸೇತುವೆ ಕುಸಿದು ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಶಾ ಭಾಷಣ ಆರಂಭಿಸಿದರು.

ನಿನ್ನೆ (ಭಾನುವಾರ) ಗುಜರಾತ್‌ನಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ನಾನು ನನ್ನ ವಿಷಾಧವನ್ನು ವ್ಯಕ್ತಪಡಿಸುತ್ತೇನೆ ಮತ್ತು ಹತ್ತಿರದ ಹಾಗೂ ಆತ್ಮೀಯರನ್ನು ಕಳೆದುಕೊಂಡವರ ಕುಟುಂಬಕ್ಕೆ ನನ್ನ ಸಂತಾಪಗಳು. ಅಗಲಿದ ಆತ್ಮಗಳಿಗೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ'  ಎಂದು ಹೇಳಿದರು.
ಶಾ ಅವರು ಓಟದಲ್ಲಿ ಭಾಗವಹಿಸಿದವರಿಗೆ ಏಕತೆಯ ಪ್ರತಿಜ್ಞೆಯನ್ನು ಬೋಧಿಸಿದರು.

ಧ್ವಜಾರೋಹಣ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಎಸ್ ಜೈಶಂಕರ್, ಮೀನಾಕ್ಷಿ ಲೇಖಿ ಮತ್ತು ನಿಸಿತ್ ಪ್ರಮಾಣಿಕ್, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಮತ್ತು ಇತರರು ಉಪಸ್ಥಿತರಿದ್ದರು.

ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ಸಂರಕ್ಷಿಸಲು ಮತ್ತು ಬಲಪಡಿಸಲು ಕೇಂದ್ರ ಸರ್ಕಾರವು 2014 ರಿಂದ ಅಕ್ಟೋಬರ್ 31 ಅನ್ನು 'ರಾಷ್ಟ್ರೀಯ ಏಕತಾ ದಿವಸ್' ಅಥವಾ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸುತ್ತಿದೆ. ಪಟೇಲ್ ಅವರು ಅಕ್ಟೋಬರ್ 31, 1875 ರಂದು ಗುಜರಾತ್‌ನ ನಾಡಿಯಾಡ್‌ನಲ್ಲಿ ಜನಿಸಿದರು.

ಭಾರತದ ಮೊದಲ ಗೃಹಮಂತ್ರಿ ಮತ್ತು ಉಪ ಪ್ರಧಾನಮಂತ್ರಿಯಾಗಿ 560ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಭಾರತದ ಒಕ್ಕೂಟಕ್ಕೆ ವಿಲೀನಗೊಳಿಸಿದ ಕೀರ್ತಿ ಪಟೇಲ್ ಅವರಿಗೆ ಸಲ್ಲುತ್ತದೆ.

ಈ ಆಚರಣೆಯ ಅಂಗವಾಗಿ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಈ ವೇಳೆ ಭಾರತದ ಏಕೀಕರಣಕ್ಕೆ ಸರ್ದಾರ್ ಪಟೇಲ್ ಅವರ ಕೊಡುಗೆಯನ್ನು ಸ್ಮರಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com