ಪಕ್ಷದ ಕಾರ್ಯಕರ್ತರ ಇಚ್ಛೆಗೆ ಬದ್ಧ; ಕೊನೆಯ ಬಾರಿಗೆ ರಾಹುಲ್ ಮನವೊಲಿಸಲು ಪ್ರಯತ್ನಿಸುವೆ: ಅಶೋಕ್ ಗೆಹ್ಲೋಟ್

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ ಎಂಬ ಬಗ್ಗೆ ಪಕ್ಷದ ಕಾರ್ಯಕರ್ತರ ಇಚ್ಛೆಗೆ ಬದ್ಧರಾಗಿರುತ್ತೇನೆ. ಆದರೆ, ರಾಹುಲ್ ಗಾಂಧಿಯವರನ್ನು ಈ ಹುದ್ದೆಗೆ ಒಪ್ಪಿಸಲು ಕೊನೆಯ ಪ್ರಯತ್ನ ಮಾಡುವುದಾಗಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಭಾನುವಾರ ಹೇಳಿದ್ದಾರೆ.
ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್
Updated on

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ ಎಂಬ ಬಗ್ಗೆ ಪಕ್ಷದ ಕಾರ್ಯಕರ್ತರ ಇಚ್ಛೆಗೆ ಬದ್ಧರಾಗಿರುತ್ತೇನೆ. ಆದರೆ, ರಾಹುಲ್ ಗಾಂಧಿಯವರನ್ನು ಈ ಹುದ್ದೆಗೆ ಒಪ್ಪಿಸಲು ಕೊನೆಯ ಪ್ರಯತ್ನ ಮಾಡುವುದಾಗಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಭಾನುವಾರ ಹೇಳಿದ್ದಾರೆ.

ಜೈಪುರದಿಂದ ಇಂದು ದೆಹಲಿಗೆ ಬಂದಿಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್, ಕಾಂಗ್ರೆಸ್ ಅನ್ನು ಬಲಪಡಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. ಪಕ್ಷ ಮತ್ತು ಹೈಕಮಾಂಡ್ ನನಗೆ ಎಲ್ಲವನ್ನೂ ನೀಡಿದೆ. ನಾನು 40-50 ವರ್ಷಗಳಿಂದ ಹುದ್ದೆಗಳಲ್ಲಿದ್ದೇನೆ. ನನಗೆ ಯಾವುದೇ ಹುದ್ದೆ ಮುಖ್ಯವಲ್ಲ. ಪಕ್ಷ ನನಗೆ ನೀಡುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಒಂದು ವೇಳೆ ಅವರು ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರೆ, ಮುಖ್ಯಮಂತ್ರಿ ಹುದ್ದೆಯನ್ನೂ ಉಳಿಸಿಕೊಳ್ಳುವರೇ ಎಂಬ ಬಗ್ಗೆ ಉತ್ತರಿಸಿದ ಅವರು, 'ರಾಜ್ಯದಲ್ಲಿ ಒಬ್ಬ ಸಚಿವರು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ನಿಂತರೆ, ಆ ವ್ಯಕ್ತಿ ಸಚಿವರಾಗಿ ಉಳಿಯಬಹುದು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಹೇಳಿದರು.

ನಾನು ಮುಖ್ಯಮಂತ್ರಿಯಾಗಿಯೂ ಇರುತ್ತೇನೆಯೇ ಅಥವಾ ಇಲ್ಲವೇ ಎಂಬುದನ್ನು ಸಮಯವೇ ನಿರ್ಧರಿಸಲಿದೆ. ನನ್ನಿಂದ ಪಕ್ಷಕ್ಕೆ ಲಾಭವಾಗುವ ರೀತಿಯಲ್ಲೇ ನಾನು ಉಳಿಯಲು ಬಯಸುತ್ತೇನೆ. ನಾನು ಹಿಂದೆ ಸರಿಯುವುದಿಲ್ಲ. ನಾನು ಕೊನೆಯ ಬಾರಿಗೆ ರಾಹುಲ್ ಗಾಂಧಿ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇನೆ. ಅವರು ಒಪ್ಪದಿದ್ದರೆ, ನಾನು ಹೈಕಮಾಂಡ್ ಆದೇಶವನ್ನು ಅನುಸರಿಸುತ್ತೇನೆ' ಎಂದರು.

ನೂತನವಾಗಿ ಆಯ್ಕೆಯಾದ ಉಪಾಧ್ಯಕ್ಷ ಜಗದೀಪ್ ಧನಕರ್ ಅವರಿಗೆ ಮುಖ್ಯಮಂತ್ರಿಗಳು ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ ಬಳಿಕ ನಡೆದ ಸಭೆಯಲ್ಲಿ ಅವರ ಘೋಷಣೆಯ ನಂತರ, ಅನೇಕ ಶಾಸಕರು ರಾಜಸ್ಥಾನದ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವರನ್ನು ವಿನಂತಿಸುತ್ತಿರುವುದು ಕಂಡುಬಂದಿತುಯ. ಅದಕ್ಕೆ ಉತ್ತರಿಸಿದ ಗೆಹ್ಲೋಟ್, 'ನಾನು ಏನೇ ಆದರೂ, ನಾನು ನಿಮ್ಮಿಂದ ದೂರ ಉಳಿಯುವುದಿಲ್ಲ. ನನ್ನ ಕೊನೆ ಉಸಿರು ಇರುವವರೆಗೂ ನಾನು ರಾಜಸ್ಥಾನಕ್ಕೆ ಸೇವೆ ಸಲ್ಲಿಸುತ್ತೇನೆ' ಎಂದರು.

ಶಶಿ ತರೂರ್ ಅವರೊಂದಿಗಿನ ನಿರೀಕ್ಷಿತ ಸ್ಪರ್ಧೆಯ ಬಗ್ಗೆ ಕೇಳಿದಾಗ, 'ಪಕ್ಷದ ಆಂತರಿಕ ಪ್ರಜಾಪ್ರಭುತ್ವಕ್ಕೆ ಉತ್ತಮವಾದ ಸ್ಪರ್ಧೆ ನಡೆಯಬೇಕು' ಎಂದು ಗೆಹ್ಲೋಟ್ ಹೇಳಿದರು.

ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರು ಸೋಮವಾರ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಈ ವೇಳೆ ಚುನಾವಣೆಯಲ್ಲಿ ತಾನು ತಟಸ್ಥವಾಗಿರುತ್ತೇನೆ ಎಂದು ಕಾಂಗ್ರೆಸ್ ಅಧ್ಯಕ್ಷರು ತರೂರ್ ಅವರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಸಂಜೆ ಗೆಹ್ಲೋಟ್ ಅವರು ದೆಹಲಿಯಿಂದ ಕೊಚ್ಚಿಗೆ ಪ್ರಯಾಣಿಸಲಿದ್ದು, ಅಲ್ಲಿ ಅವರು ರಾಹುಲ್ ಗಾಂಧಿಯನ್ನು ಭೇಟಿಯಾಗಲಿದ್ದಾರೆ ಮತ್ತು ಕಾಂಗ್ರೆಸ್ ಪಕ್ಷದ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಭಾರತ್ ಜೋಡೋ ಯಾತ್ರೆಗೆ ಸಾಂಕೇತಿಕವಾಗಿ ಸೇರಿಕೊಳ್ಳಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಪ್ರಮುಖ ದಿನಾಂಕಗಳು

ಸೆಪ್ಟೆಂಬರ್ 24 ರಿಂದ 30: ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ

ಅಕ್ಟೋಬರ್ 1: ನಾಮಪತ್ರಗಳ ಪರಿಶೀಲನೆ

ಅಕ್ಟೋಬರ್ 8: ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ

ಅಕ್ಟೋಬರ್ 17: ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ ಈ ದಿನಾಂಕದಂದು ಚುನಾವಣೆ ನಡೆಯುತ್ತದೆ

ಅಕ್ಟೋಬರ್ 19: ಮತಗಳ ಎಣಿಕೆ. ಅಗತ್ಯವಿದ್ದರೆ, ಫಲಿತಾಂಶ ಘೋಷಣೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com