ಕಾಜಿರಂಗ ನೈಟ್ ಸಫಾರಿ ವಿವಾದ: ಸದ್ಗುರು ವಿರುದ್ಧ FIR; ಕಾನೂನು ಉಲ್ಲಂಘನೆಯಾಗಿಲ್ಲ ಎಂದ ಅಸ್ಸಾಂ ಸಿಎಂ

ಕಾನೂನು ಉಲ್ಲಂಘಿಸಿ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಜೀಪ್‌ ಚಾಲನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಹೇಳಿದ್ದಾರೆ.
ಸಿಎಂ ಹಿಮಂತ ಶರ್ಮಾ ಮತ್ತು ಜಗ್ಗಿ ವಾಸುದೇವ್
ಸಿಎಂ ಹಿಮಂತ ಶರ್ಮಾ ಮತ್ತು ಜಗ್ಗಿ ವಾಸುದೇವ್

ಗುವಾಹತಿ: ಕಾನೂನು ಉಲ್ಲಂಘಿಸಿ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಜೀಪ್‌ ಚಾಲನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗಿಲ್ಲ ಎಂದು ಹೇಳಿದ್ದಾರೆ.

ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ ವೇಳೆ ಜೀಪ್‌ ಚಾಲನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಧಾರ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಮತ್ತು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮ ವಿರುದ್ಧ ಎಫ್ಐಆರ್ ದಾಖಲಾಗಿದೆ. 

ಈಶಾ ಫೌಂಡೇಶನ್‌ನ ಸದ್ಗುರು ಜಗ್ಗಿ ವಾಸುದೇವ್‌ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಶನಿವಾರ ರಾತ್ರಿ ವಾಹನ ಚಲಾಯಿಸಿದರು ಎಂಬ ಕಾರಣಕ್ಕೆ ಅವರಿಬ್ಬರ ವಿರುದ್ಧ ಉದ್ಯಾನ ಬಳಿಯ ಎರಡು ಗ್ರಾಮಗಳ ಇಬ್ಬರು ನಿವಾಸಿಗಳು ಎಫ್‌ಐಆರ್‌ ದಾಖಲಿಸಿದ್ದಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನ್ನು ಪ್ರವಾಸಿಗರಿಗಾಗಿ ಶನಿವಾರ ತೆರೆಯಲಾಗಿತ್ತು. ಅದೇ ದಿನ ರಾತ್ರಿ ಸದ್ಗುರು ಜಗ್ಗಿ ವಾಸುದೇವ್ ಅವರು ಉದ್ಯಾನದ ಒಳಗೆ ಜೀಪ್‌ ಚಾಲನೆ ಮಾಡಿದ್ದಾರೆ, ಅವರ ಪಕ್ಕ ಸಿಎಂ ಹಿಮಂತ ಅವರು ಕುಳಿತಿದ್ದರು. ಅಸ್ಸಾಂ ಸಂಪುಟ ಸಚಿವ ಜಯಂತ ಮಲ್ಲ ಬರೂಆ ಮತ್ತಿತರರು ಕೂಡಾ ಜೀಪ್‌ನಲ್ಲಿ ರಾತ್ರಿ ಉದ್ಯಾನದಲ್ಲಿ ಸಂಚರಿಸಿದ್ದರು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸೋನೇಶ್ವರ್‌ ನಾರಾ ಮತ್ತು ಪ್ರವೀಣ್‌ ಪೆಗು ಎಂಬುವವರು ಅಸ್ಸಾಂನ ಗೋಲಘಾಟ್‌ ಜಿಲ್ಲೆಯ ಬೊಕಾಕಾಟ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಾಷ್ಟ್ಪೀಯ ಉದ್ಯಾನವನದಲ್ಲಿ ರಾತ್ರಿ ಸಫಾರಿ ವನ್ಯಜೀವಿ ಸಂರಕ್ಷಣೆ ಕಾಯ್ದೆ, 1972ರ ಉಲ್ಲಂಘನೆಯಾಗಿದೆ ಎಂದು ಎಫ್ಐಆರ್‌ನಲ್ಲಿ ದೂರುದಾರರು ಉಲ್ಲೇಖಿಸಿದ್ದಾರೆ. ‘ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಉದ್ಯಾನದೊಳಗೆ ಜೀಪ್‌ ಸಂಚಾರವನ್ನು ನಿಷೇಧಿಸಲಾಗಿದೆ. ಆದರೂ ಸದ್ಗುರು ಮತ್ತು ಹಿಮಂತ ಅವರು ಜೀಪ್‌ ಚಾಲನೆ ಮಾಡಿದ್ದಾರೆ. ಅವರಿಗಾಗಿ ಕಾನೂನು ಸಡಿಲಿಸುವುದು ಕಾಜಿರಂಗ ಮತ್ತು ಅಲ್ಲಿಯ ಪ್ರಾಣಿಗಳ ಸಂರಕ್ಷಣೆಗೆ ವಿಪತ್ತು ಉಂಟುಮಾಡುತ್ತದೆ. ಕಾನೂನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಅವರಿಬ್ಬರನ್ನು ಬಂಧಿಸಿ ಕರ್ತವ್ಯ ಪ್ರಜ್ಞೆ ಮೆರೆಯಬೇಕು. ಅವರಿಬ್ಬರೂ ಸಾರ್ವಜನಿಕರಿಗೆ ಕ್ಷಮೆ ಯಾಚಿಸುವಂತೆ ಕಾನೂನಿನಡಿ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಹೇಳಿದ್ದಾರೆ. 

ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗಿಲ್ಲ ಎಂದ ಅಸ್ಸಾಂ ಸಿಎಂ
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅಸ್ಸಾಂ ಸಿಎಂ ಹಿಮಂತ ಅವರು, ಉದ್ಯಾನವನದಲ್ಲಿ ನಾವು ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡಿಲ್ಲ. ರಾತ್ರಿ ವೇಳೆ ಜನರು ಉದ್ಯಾನವನಕ್ಕೆ ಭೇಟಿ ನೀಡಬಾರದು ಎಂಬ ಕಾನೂನು ಇಲ್ಲ. ವನ್ಯಜೀವಿ ಕಾನೂನಿನ ಪ್ರಕಾರ, ವಾರ್ಡನ್ ರಾತ್ರಿಯೂ ಸಂರಕ್ಷಿತ ಪ್ರದೇಶಕ್ಕೆ ಪ್ರವೇಶಿಸಲು ಅನುಮತಿ ನೀಡಬಹುದು. ರಾತ್ರಿಯಲ್ಲಿ ಜನರು ಪ್ರವೇಶಿಸುವುದನ್ನು ಯಾವುದೇ ಕಾನೂನು ತಡೆಯುವುದಿಲ್ಲ. ನಿನ್ನೆ, ಈ ಋತುವಿಗಾಗಿ ನಾವು ಉದ್ಯಾನವನದ ಔಪಚಾರಿಕ ಉದ್ಘಾಟನೆ ಮಾಡಿದ್ದೇವೆ.ಈಗ ಸದ್ಗುರು ಮತ್ತು ಶ್ರೀ ಶ್ರೀ ರವಿಶಂಕರ್ ಆಗಮಿಸಿದ್ದಾರೆ. ಅವರು ಲಕ್ಷಗಟ್ಟಲೆ ಅನುಯಾಯಿಗಳನ್ನು ಹೊಂದಿರುವುದರಿಂದ, ಈ ಬಾರಿ ಪ್ರವಾಸಿ ಋತುವು ಕಾಜಿರಂಗಕ್ಕೆ ಉತ್ತಮವಾಗಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಶರ್ಮಾ ಭಾನುವಾರ ರಾತ್ರಿ ಸುದ್ದಿಗಾರರಿಗೆ ತಿಳಿಸಿದರು.

ಏತನ್ಮಧ್ಯೆ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಮಾರ್ಗಸೂಚಿಯನ್ನು ರೂಪಿಸಲು ಮತ್ತು ಅದರ ಬೆಳವಣಿಗೆಯನ್ನು ವೇಗಗೊಳಿಸಲು ನೀಲನಕ್ಷೆಯನ್ನು ರಚಿಸಲು ಮತ್ತು ಅದನ್ನು ಎಲ್ಲಾ ಕ್ಷೇತ್ರಗಳಲ್ಲಿ ಮಾದರಿಯನ್ನಾಗಿ ಮಾಡಲು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಮತ್ತು ಸದ್ಗುರು ವಾಸುದೇವ್ ಅವರೊಂದಿಗೆ ಸಂಪುಟ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಶನಿವಾರ ಕಾಜಿರಂಗದಲ್ಲಿ ರಾಜ್ಯದ, ಇತರ ರಾಜ್ಯಗಳ ಅಧಿಕಾರಿಗಳು, ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಹಿಮಂತ ಶರ್ಮಾ ಮತ್ತು ವಾಸುದೇವ್ ಶನಿವಾರ ಕಾಜಿರಂಗದಲ್ಲಿ ಮೂರು ದಿನಗಳ ಚಿಂತನ ಶಿಬಿರವನ್ನು ಉದ್ಘಾಟಿಸಿದರು. ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರ ಆಯೋಜಿಸಿದ್ದ ‘ಚಿಂತನ ಶಿಬಿರ’ದಲ್ಲಿ ಸದ್ಗುರು ಅವರು ಶನಿವಾರ ಪಾಲ್ಗೊಂಡು ಮಾತನಾಡಿದ್ದರು. ಮಣ್ಣಿನ ಬಳಕೆ ಮತ್ತು ಕೃಷಿ ಪದ್ಧತಿ ಕುರಿತು ಅಸ್ಸಾಂ ಸರ್ಕಾರದ ಜೊತೆ ಒಪ್ಪಂದವನ್ನೂ ಮಾಡಿಕೊಂಡಿದ್ದರು. 

ನಂತರ, ಮುಖ್ಯಮಂತ್ರಿ ಶರ್ಮಾ ಅವರು ವಾಸುದೇವ್ ಅವರೊಂದಿಗೆ ಕಾಜಿರಂಗದ ಮಿಹಿಮುಖ್‌ನಲ್ಲಿ ಮೂರು ಘೇಂಡಾಮೃಗಗಳ ಪ್ರತಿಮೆಗಳನ್ನು ಅನಾವರಣಗೊಳಿಸಿದರು. ಈ ಘೇಂಡಾಮೃಗಗಳ ಪ್ರತಿಮೆಗಳನ್ನು ಘೇಂಡಾಮೃಗದ ಕೊಂಬುಗಳಿಂದ ಸಂಗ್ರಹಿಸಿದ ಚಿತಾಭಸ್ಮವನ್ನು ಬಳಸಿ ರಚಿಸಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 22 ರಂದು, ಅಸ್ಸಾಂ ಸರ್ಕಾರವು 2479 ಘೇಂಡಾಮೃಗಗಳ ಕೊಂಬುಗಳ ದಾಸ್ತಾನುಗಳನ್ನು ಬೆಂಕಿಗಾಹುತಿ ಮಾಡಿ ಇತಿಹಾಸ ನಿರ್ಮಿಸಿತ್ತು. ಕಳ್ಳ ಬೇಟೆಗಾರರು ಮತ್ತು ಅಕ್ರಮ ಕೊಂಬಿನ ವ್ಯಾಪಾರಿಗಳಿಗೆ ಘೇಂಡಾಮೃಗಗಳ ಕೊಂಬುಗಳಿಗೆ ಔಷಧೀಯ ಮೌಲ್ಯವಿಲ್ಲ ಎಂದು ಬಲವಾದ ಸಂದೇಶವನ್ನು ಈ ಮೂಲಕ ರವಾನಿಸಲಾಗಿತ್ತು. ಹೀಗೆ ರಚಿಸಲಾದ ಘೇಂಡಾಮೃಗದ ಪ್ರತಿಮೆಗಳು ಅಸ್ಸಾಂನ ಹೆಮ್ಮೆಯನ್ನು ನಿಸ್ವಾರ್ಥವಾಗಿ ರಕ್ಷಿಸುವವರ ಪ್ರಯತ್ನ ಮತ್ತು ಸಮರ್ಪಣೆಯನ್ನು ಅಮರಗೊಳಿಸುವ ಪ್ರಯತ್ನವಾಗಿದೆ ಸರ್ಕಾರಿ ಮೂಲಗಳು ತಿಳಿಸಿವೆ.

ಶನಿವಾರ, ಅಸ್ಸಾಂ ಮುಖ್ಯಮಂತ್ರಿ ಸದ್ಗುರು ವಾಸುದೇವ್ ಅವರೊಂದಿಗೆ ಈ ಋತುವಿಗಾಗಿ ಕಾಜಿರಂಗ ರಾಷ್ಟ್ರೀಯ ಉದ್ಯಾನವನವನ್ನು ಪ್ರವಾಸಿಗರಿಗೆ ತೆರೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com