ಹೈದರಾಬಾದ್‌ನಲ್ಲಿ ಮತ್ತೆ ಭಾರಿ ಮಳೆ; ನಗರದಾದ್ಯಂತ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಸವಾರರು
ಭಾರಿ ಮಳೆಯಿಂದಾಗಿ ಹಲವೆಡೆ ಜಲಾವೃತವಾಗಿದೆ. ಟೋಲಿಚೌಕಿ ಮೇಲ್ಸೇತುವೆ ಬಳಿ ಮೆಹದಿಪಟ್ನಂ ಕಡೆಗೆ ಸಾಗುವ ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ರಸ್ತೆಗಳೆಲ್ಲ ಜಲಾವೃತವಾಗಿರುವುದರಿಂದ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು.
Published: 27th September 2022 11:31 AM | Last Updated: 27th September 2022 11:31 AM | A+A A-

ಭಾರಿ ಮಳೆಯಿಂದಾಗಿ ಸೋಮವಾರ ಉಂಟಾಗಿದ್ದ ಟ್ರಾಫಿಕ್ ಜಾಮ್
ಹೈದರಾಬಾದ್: ರಾಜ್ಯ ರಾಜಧಾನಿಯ ಹಲವು ಭಾಗಗಳಲ್ಲಿ ಸೋಮವಾರ ಭಾರಿ ಮಳೆಯಾಗಿದೆ. ಕಳೆದ ಕೆಲವು ವಾರಗಳಿಂದ ಬಿಡುವು ಕೊಟ್ಟಿದ್ದ ಮಳೆ ಇದೀಗ ಅಬ್ಬರದೊಂದಿಗೆ ಹೈದರಾಬಾದ್‌ಗೆ ಮರಳಿದೆ. ರಾತ್ರಿ 8 ಗಂಟೆಯವರೆಗೆ ನಾಂಪಲ್ಲಿಯಲ್ಲಿ ಅತಿ ಹೆಚ್ಚು ಅಂದರೆ 9.3 ಸೆಂ.ಮೀ., ಎಲ್‌ಬಿ ನಗರ (8.6 ಸೆಂ.ಮೀ.), ಮೆಹದಿಪಟ್ನಂ (8.4 ಸೆಂ.ಮೀ.), ಖೈರತಾಬಾದ್ (7.6 ಸೆಂ.ಮೀ.) ಮತ್ತು ಆಸಿಫ್‌ನಗರ (7.6 ಸೆಂ.ಮೀ.) ಮಳೆ ದಾಖಲಾಗಿದೆ.
ಭಾರಿ ಮಳೆಯಿಂದಾಗಿ ಹಲವೆಡೆ ಜಲಾವೃತವಾಗಿದೆ. ಟೋಲಿಚೌಕಿ ಮೇಲ್ಸೇತುವೆ ಬಳಿ ಮೆಹದಿಪಟ್ನಂ ಕಡೆಗೆ ಸಾಗುವ ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ರಸ್ತೆಗಳೆಲ್ಲ ಜಲಾವೃತವಾಗಿರುವುದರಿಂದ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು.

ಖೈರತಾಬಾದ್ ಮೆಟ್ರೋ ನಿಲ್ದಾಣದ ಬಳಿಯೂ ಇದೇ ಪರಿಸ್ಥಿತಿ ಇದ್ದು, ಎರಡು ಅಡಿ ಎತ್ತರಕ್ಕೆ ನೀರು ನಿಂತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಮೂಸರಂಬಾಗ್ ಸೇತುವೆಯೂ ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ವಿಪತ್ತು ನಿರ್ವಹಣಾ ಪಡೆ (ಡಿಆರ್‌ಎಫ್) ತಂಡಗಳು ನೀರನ್ನು ತೆರವುಗೊಳಿಸಲು ಮುಂದಾಗಿವೆ. ಓಲ್ಡ್ ಸಿಟಿಯ ಓಸ್ಮಾನ್ ಗುಂಜ್‌ನಂತಹ ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗಿರುವುದು ವರದಿಯಾಗಿದೆ.
ನಗರದಾದ್ಯಂತ ಟ್ರಾಫಿಕ್ ಜಾಮ್
ಭಾರಿ ಮಳೆಯಿಂದಾಗಿ ಹಲವೆಡೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪಂಜಾಗುಟ್ಟ ಜಂಕ್ಷನ್, ನಾಗಾರ್ಜುನ ಸರ್ಕಲ್, ಅಬಿಡ್ಸ್, ನಾಂಪಲ್ಲಿ, ಖೈರತಾಬಾದ್, ಮೆಹದಿಪಟ್ನಂ ಮತ್ತು ಲಕ್ಡಿಕಾಪುಲ್‌ನಲ್ಲಿ ಟ್ರಾಫಿಕ್ ಉಂಟಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: ಭಾರೀ ಮಳೆ, ಸಿಡಿಲಿಗೆ 36 ಮಂದಿ ಸಾವು
ಜಂಟಿ ಆಯುಕ್ತ (ಸಂಚಾರ) ಎ.ವಿ.ರಂಗನಾಥ್ ಮಾತನಾಡಿ, ಭಾರಿ ಮಳೆಯಿಂದಾಗಿ ರಸ್ತೆಗಳೆಲ್ಲ ಜಲಾವೃತವಾಗಿದ್ದು, ನಗರದಾದ್ಯಂತ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. 'ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದೂಡಲು ವಿನಂತಿಸಲಾಗಿದೆ, ಇಲ್ಲದಿದ್ದರೆ ಅವರು ಗಂಭೀರ ಟ್ರಾಫಿಕ್ ಜಾಮ್‌ಗಳಲ್ಲಿ ಸಿಲುಕಬಹುದು' ಎಂದು ಎಚ್ಚರಿಕೆ ನೀಡಿದ್ದಾರೆ.
ಈಮಧ್ಯೆ, ಮುಂದಿನ ನಾಲ್ಕು ದಿನಗಳ ಕಾಲ ತೆಲಂಗಾಣದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.