ನಾಪತ್ತೆಯಾಗಿದ್ದ 9 ವರ್ಷದ ಬಾಲಕಿಯ ಶವ ಕಟ್ಟಡದ ನೀರಿನ ತೊಟ್ಟಿಯಲ್ಲಿ ಪತ್ತೆ!
ಥಾಣೆ(ಮಹಾರಾಷ್ಟ್ರ): ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಒಂಬತ್ತು ವರ್ಷದ ಬಾಲಕಿ ನಾಪತ್ತೆಯಾದ ಎರಡು ದಿನಗಳ ನಂತರ ಆಕೆಯ ಕೊಳೆತ ಶವವನ್ನು ಆಕೆಯ ಮನೆಯ ಸಮೀಪವಿರುವ ಕಟ್ಟಡದ ನೀರಿನ ಟ್ಯಾಂಕ್‌ನಿಂದ ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಿವಂಡಿ ತಹಸಿಲ್‌ನ ಬಾಲಕಿ ಏಪ್ರಿಲ್ 3ರಂದು ನಾಪತ್ತೆಯಾಗಿದ್ದಳು ಮತ್ತು ಆಕೆಯ ಶವ ಬುಧವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಿವಂಡಿಯ ಶಾಂತಿನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, 'ಬಾಲಕಿಯು ಅಮ್ಜಾದಿಯಾ ಶಾಲೆಯ ಬಳಿ ಇರುವ ಕಿರಾಣಿ ಅಂಗಡಿಯಲ್ಲಿ ಮೊಟ್ಟೆಗಳನ್ನು ಖರೀದಿಸಲು ತನ್ನ ಮನೆಯಿಂದ ಹೊರಹೋಗಿದ್ದಳು. ಆದರೆ, ಆಕೆ ಮನೆಗೆ ಹಿಂತಿರುಗಿರಲಿಲ್ಲ. ಆಕೆಯ ಕುಟುಂಬಸ್ಥರು ಸಾಕಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಹೀಗಾಗಿ ನಾಪತ್ತೆ ದೂರು ದಾಖಲಿಸಲಾಗಿತ್ತು.
ತನಿಖೆ ವೇಳೆ ಬಾಲಕಿಯ ಮೃತದೇಹ ಸ್ಥಳೀಯ ಕಟ್ಟಡವೊಂದರ ನೀರಿನ ತೊಟ್ಟಿಯಲ್ಲಿ ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ದುರ್ವಾಸನೆ ಬರುತ್ತಿದ್ದುದನ್ನು ಗಮನಿಸಿದ ನಿವಾಸಿಗಳು ನೀರಿನ ತೊಟ್ಟಿಯನ್ನು ಪರಿಶೀಲಿಸಿದಾಗ ಮೃತದೇಹ ಕೊಳೆತ ಸ್ಥಿತಿಯಲ್ಲಿತ್ತು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತದೇಹ ಪತ್ತೆಯಾದ ಬಳಿಕ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ