ನವದೆಹಲಿ: ಪುಲ್ವಾಮಾ ದಾಳಿ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ ಎಂದು ಹೇಳಿದೆ.
ಈ ಬಗ್ಗೆ ಖಾಸಗಿ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅಮಿತ್ ಶಾ ಅವರು, ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಹೇಳಿಕೆಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ‘ಪುಲ್ವಾಮಾ ದಾಳಿ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ನೀಡಿರುವ ಹೇಳಿಕೆಯ ಸತ್ಯಾಸತ್ಯತೆಯನ್ನು ಪ್ರಶ್ನಿಸಬೇಕಿದೆ’ ಎಂದು ಹೇಳಿದ್ದಾರೆ.
ಪುಲ್ವಾಮಾ ದಾಳಿ ಬಗ್ಗೆ ದೇಶದ ಜನರ ಮುಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವುದೇ ಸತ್ಯ ಮುಚ್ಚಿಟ್ಟಿಲ್ಲ. ಅದರ ಅಗತ್ಯವೂ ಸರ್ಕಾರಕ್ಕೆ ಇಲ್ಲ ಎಂದು ಹೇಳಿದ್ದಾರೆ.
ಪುಲ್ವಾಮಾ ದಾಳಿಗೆ ಕೇಂದ್ರ ಗೃಹ ಸಚಿವಾಲಯ ಮತ್ತು ಸಿಆರ್‌ಪಿಎಫ್ ಅದಕ್ಷತೆಯೇ ಕಾರಣ. ಯೋಧರ ಪ್ರಯಾಣಕ್ಕೆ ವಿಮಾನ ಕೇಳಿದರೂ ಗೃಹ ಸಚಿವಾಲಯ ನೀಡಿರಲಿಲ್ಲ. ಇದು ಸರ್ಕಾರದ ದೊಡ್ಡ ಲೋಪ. ಈ ಬಗ್ಗೆ ಏನನ್ನೂ ಮಾತನಾಡಬಾರದು ಎಂದು ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ನನಗೆ ತಾಕೀತು ಮಾಡಿದ್ದರು ಎಂದು ಮಲ್ಲಿಕ್ ಆರೋಪಿಸಿದ್ದರು. ಆಗ ರಾಜನಾಥ್ ಸಿಂಗ್ ಕೇಂದ್ರದ ಗೃಹ ಸಚಿವರಾಗಿದ್ದರು.
2019ರ ಫೆಬ್ರುವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಬಳಿ ಉಗ್ರರು ನಡೆಸಿದ ದಾಳಿಗೆ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾಗಿದ್ದರು. ಪಾಕಿಸ್ತಾನ ಮೂಲದ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯು ಈ ದಾಳಿ ಹೊಣೆ ಹೊತ್ತಿತ್ತು. ‘ಈ ದಾಳಿಗೆ ಸರ್ಕಾರದ ಲೋಪವೇ ಕಾರಣ. ಯೋಧರು ಪ್ರಯಾಣಿಸಬೇಕಿದ್ದ ಮಾರ್ಗದ ಸುರಕ್ಷತೆಯ ತಪಾಸಣೆಯೂ ನಡೆದಿರಲಿಲ್ಲ’ ಎಂದು ಮಲ್ಲಿಕ್, ‘ದಿ ವೈರ್’ ಪೋರ್ಟಲ್‌ಗೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದರು. ಅವರ ಈ ಹೇಳಿಕೆಯು ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ.
Advertisement