ಗುರುಗ್ರಾಮ: ನುಹ್ ಮತ್ತು ಗುರುಗ್ರಾಮ ಜಿಲ್ಲೆಗಳಲ್ಲಿ ಭುಗಿಲೆದ್ದ ಕೋಮುಗಲಭೆಗಳ ತನಿಖೆಗಾಗಿ ಹರಿಯಾಣ ಪೊಲೀಸರು 44 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಮತ್ತು 139 ಆರೋಪಿಗಳನ್ನು ಬಂಧಿಸಿದ್ದಾರೆ.
ಎರಡೂ ಜಿಲ್ಲೆಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಪೊಲೀಸರು ಮತ್ತು ಕೇಂದ್ರ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.
ಹರಿಯಾಣದ ನುಹ್‌ನಲ್ಲಿ ಸೋಮವಾರ (ಜುಲೈ 31) ವಿಎಚ್‌ಪಿ ಆಯೋಜಿಸಿದ್ದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಇಬ್ಬರು ಹೋಮ್ ಗಾರ್ಡ್‌ಗಳು ಸೇರಿದಂತೆ ಏಳು ಮಂದಿ ಸಾವಿಗೀಡಾಗಿದ್ದಾರೆ. ಗುರುಗ್ರಾಮಕ್ಕೂ ಘರ್ಷಣೆ ಹರಡಿತು. ನಂತರ ನುಹ್‌ನಲ್ಲಿ ಕರ್ಫ್ಯೂ ವಿಧಿಸಲಾಯಿತು.
ಇದರೊಂದಿಗೆ ಆಗ ಇಂಟರ್‌ನೆಟ್ ಕೂಡ ಬ್ಯಾನ್ ಆಗಿತ್ತು. ನುಹ್, ಗುರುಗ್ರಾಮ, ಫರಿದಾಬಾದ್, ಪಲ್ವಾಲ್ ಮತ್ತು ಜಜ್ಜರ್ ಜಿಲ್ಲೆಗಳಲ್ಲಿ ಸೆಕ್ಷನ್ 144 ಇನ್ನೂ ಜಾರಿಯಲ್ಲಿದೆ. ನುಹ್‌ನಲ್ಲಿ, ಕರ್ಫ್ಯೂ ಅನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಸಡಿಲಿಸಲಾಗಿದೆ.
ಗಲಭೆಗೆ ಕಾರಣರಾದವರು ಮತ್ತು ಭಾಗಿಯಾದವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಈವರೆಗೆ 44 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು 139 ಮಂದಿಯನ್ನು ಬಂಧಿಸಲಾಗಿದೆ.
ನುಹ್‌ನಲ್ಲಿ ದಾಖಲಾದ ಪ್ರಕರಣಗಳ ತನಿಖೆಗಾಗಿ 10 ವಿಶೇಷ ತನಿಖಾ ತಂಡಗಳನ್ನು (ಎಸ್‌ಐಟಿ) ರಚಿಸಲಾಗುವುದು. ಈ ಎಸ್‌ಐಟಿಗಳು ತಲಾ ಐದು ಎಫ್‌ಐಆರ್‌ಗಳ ಬಗ್ಗೆ ತನಿಖೆ ನಡೆಸುತ್ತವೆ. ಮೋನು ಮನೇಸರ್ ಅವರಂತಹ ಗೋರಕ್ಷಕರು ಪೋಸ್ಟ್ ಮಾಡಿದ ಪ್ರಚೋದನಕಾರಿ ವಿಡಿಯೋಗಳ ಬಗ್ಗೆಯೂ ಅವರು ತನಿಖೆ ನಡೆಸುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನುಹ್ ಜನರನ್ನು ಪ್ರಚೋದಿಸಿದ ಆರೋಪ ಎದುರಿಸುತ್ತಿರುವ ಮೋನು ಮತ್ತು ಇತರ ಗೋರಕ್ಷಕರು ಘರ್ಷಣೆಯ ನಂತರ ತಲೆಮರೆಸಿಕೊಂಡಿದ್ದಾರೆ.
ನುಹ್‌ನ ಉಪ ಆಯುಕ್ತ ಪ್ರಶಾಂತ್ ಪನ್ವಾರ್ ಮಾತನಾಡಿ, ನುಹ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಭಾರಿ ಸಂಖ್ಯೆಯ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಮುಂದಿನ ಆದೇಶದವರೆಗೂ ಶಿಕ್ಷಣ ಸಂಸ್ಥೆಗಳು ಮುಚ್ಚಿರುತ್ತವೆ ಎಂದು ಹೇಳಿದರು.
ಸದ್ಯ ನುಹ್‌ನಲ್ಲಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಮತ್ತು ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ತಲೆಮರೆಸಿಕೊಂಡಿರುವವರನ್ನು ಬಂಧಿಸಲು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಇದಲ್ಲದೆ, ಜಿಲ್ಲಾಢಳಿತವು ನುಹ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು 10 ಡ್ಯೂಟಿ ಮ್ಯಾಜಿಸ್ಟ್ರೇಟ್‌ಗಳು ಮತ್ತು ಆರು ವಿಶೇಷ ಡ್ಯೂಟಿ ಮ್ಯಾಜಿಸ್ಟ್ರೇಟ್‌ಗಳನ್ನು ಪ್ರದೇಶವಾರು ನೇಮಿಸಿದೆ.
ಸ್ಥಳದಲ್ಲಿರುವ ಭಾರಿ ಪೊಲೀಸರ ತಂಡ ದಿನವಿಡೀ ಪ್ರಮುಖ ಸ್ಥಳಗಳಲ್ಲಿ ಗಸ್ತು ತಿರುಗುತ್ತದೆ. ಪ್ರಮುಖ ಪ್ರದೇಶಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಗಳ ತಂಡಗಳು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ಕಣ್ಣಿಟ್ಟಿವೆ. ತಪ್ಪು ಮಾಹಿತಿ ಹರಡುವಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ನುಹ್ ಎಸ್‌ಪಿ ನರೇಂದ್ರ ಸಿಂಗ್ ಬಿಜರ್ನಿಯಾ ಹೇಳಿದ್ದಾರೆ.
Advertisement