ಆರ್ಥಿಕ ಮುಗ್ಗಟ್ಟು: ಪಾಕಿಸ್ತಾನ ತೊರೆದು ಉತ್ತರ ಪ್ರದೇಶದಲ್ಲಿ ಜೀವನ ನಡೆಸಲು ಮುಂದಾಗಿದ್ದಾರೆ ಪಾಕ್ ಹಿಂದೂಗಳು!

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನದಲ್ಲಿ ಜೀವನ ದಿನೇ ದಿನೇ ದುಸ್ತರವಾಗುತ್ತಿದ್ದು ಇದೇ ಕಾರಣಕ್ಕೆ ಪಾಕಿಸ್ತಾನ ಮೂಲದ 15 ಮಂದಿ ಹಿಂದೂಗಳು ಭಾರತದ ಉತ್ತರ ಪ್ರದೇಶದಲ್ಲಿ ಜೀವನ ಕಟ್ಟಿಕೊಳ್ಳುವ ಮಹದಾಸೆಯಿಂದ ಭಾರತಕ್ಕೆ ಆಗಮಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನದಲ್ಲಿ ಜೀವನ ದಿನೇ ದಿನೇ ದುಸ್ತರವಾಗುತ್ತಿದ್ದು ಇದೇ ಕಾರಣಕ್ಕೆ ಪಾಕಿಸ್ತಾನ ಮೂಲದ 15 ಮಂದಿ ಹಿಂದೂಗಳು ಭಾರತದ ಉತ್ತರ ಪ್ರದೇಶದಲ್ಲಿ ಜೀವನ ಕಟ್ಟಿಕೊಳ್ಳುವ ಮಹದಾಸೆಯಿಂದ ಭಾರತಕ್ಕೆ ಆಗಮಿಸಿದ್ದಾರೆ.

ಆರ್ಥಿಕ ಸಂಕಷ್ಟದಿಂದ ಪಾರಾಗಲು ಭಾರತಕ್ಕೆ ಬಂದ ತಿಂಗಳುಗಳ ಬಳಿಕ ಪಾಕಿಸ್ತಾನದ ಎರಡು ಹಿಂದೂ ಕುಟುಂಬಗಳ 15 ಸದಸ್ಯರು ಕೆಲಸ ಹುಡುಕಿಕೊಂಡು ಬದುಕನ್ನು ಕಟ್ಟಿಕೊಳ್ಳುವ ನಿರೀಕ್ಷೆಯಲ್ಲಿ ಉತ್ತರ ಪ್ರದೇಶಕ್ಕೆ ಆಗಮಿಸಿದ್ದು, ದೆಹಲಿಯಿಂದ ಉತ್ತರ ಪ್ರದೇಶದ ಚಿತ್ರಕೂಟದ ರೈಲಿನಲ್ಲಿ ಇಲ್ಲಿಗೆ ಬಂದ ಒಂದು ದಿನದ ನಂತರ ಕುಟುಂಬಗಳನ್ನು ಶನಿವಾರ ಸಂಗ್ರಾಮಪುರ ಗ್ರಾಮದ ಪಂಚಾಯತ್ ಭವನಕ್ಕೆ ಸ್ಥಳಾಂತರಿಸಲಾಯಿತು.

ಪಾಕ್ ಮೂಲದ ಕುಟುಂಬಗಳು ಗ್ರಾಮಕ್ಕೆ ಆಗಮಿಸುತ್ತಲೇ ಸ್ಥಳೀಯರು ಅವರನ್ನು ನೋಡಲು ಗುಂಪು ಸೇರಿದ್ದು, ಜನರನ್ನು ನಿಭಾಯಿಸಲು ಪಂಚಾಯತ್ ಭವನದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.  "ಆಗಸ್ಟ್ 4 ರಂದು, ಪಾಕಿಸ್ತಾನದ ಎರಡು ಹಿಂದೂ ಕುಟುಂಬಗಳ 15 ಸದಸ್ಯರು ಕೆಲಸ ಮತ್ತು ತಂಗಲು ಸ್ಥಳವನ್ನು ಹುಡುಕಲು ಕೆಲವು ಸ್ಥಳೀಯ 'ಅಖಾರಾ'ಗಳ ಸಹಾಯದಿಂದ ದೆಹಲಿಯಿಂದ ರೈಲಿನಲ್ಲಿ ಇಲ್ಲಿಗೆ ಬಂದರು" ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವೃಂದಾ ಶುಕ್ಲಾ ಹೇಳಿದ್ದಾರೆ. 

ಅಂತೆಯೇ ಪರಿಶೀಲನೆಯ ನಂತರ, ಕುಟುಂಬಗಳನ್ನು ಸಂಗ್ರಾಮ್‌ಪುರ ಗ್ರಾಮದ ಪಂಚಾಯತ್ ಭವನಕ್ಕೆ ಸ್ಥಳಾಂತರಿಸಲಾಯಿತು. ಹದಿನೈದು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ಅಲ್ಲಿ ನಿಯೋಜಿಸಲಾಗಿದೆ. ಈ ಪೈಕಿ ಒಂದು ಕುಟುಂಬ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತಕ್ಕೆ ಬಂದಿದ್ದು, ಅವರ ವೀಸಾ ಅವಧಿ ಮುಗಿದಿದೆ. ಇತರ ಕುಟುಂಬವು ಈ ವರ್ಷ ಮೇ ತಿಂಗಳಲ್ಲಿ ಬಂದಿದ್ದು, ಅವರ ವೀಸಾಗಳು ಶೀಘ್ರದಲ್ಲೇ ಮುಕ್ತಾಯಗೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.

ಪರಿಶೀಲನೆಯ ವೇಳೆ, ಉದ್ಯೋಗ ಮತ್ತು ತಂಗಲು ಸ್ಥಳವನ್ನು ಹುಡುಕಿಕೊಂಡು ಭಾರತಕ್ಕೆ ಬಂದಿದ್ದೇವೆ ಎಂದು ಎರಡು ಕುಟುಂಬಗಳು ಪೊಲೀಸರಿಗೆ ತಿಳಿಸಿದ್ದು, ಅವರಿಗೆ ದೀರ್ಘಾವಧಿಯ ವೀಸಾ ಬೇಕು. ಪಾಕಿಸ್ತಾನದ ಪ್ರಜೆಗಳ ಬಳಿ ವೀಸಾ ವಿಸ್ತರಣೆಗೆ ಅಗತ್ಯವಾದ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ ಮತ್ತು ಅವರ ನಿರ್ದೇಶನಗಳನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಚಕ್ರಪಾಣಿ ತ್ರಿಪಾಠಿ ಮಾತನಾಡಿ, ಪಂಚಾಯತ್ ಭವನದಲ್ಲಿ ನೆಲೆಸಿರುವ ಪಾಕಿಸ್ತಾನಿ ಹಿಂದೂ ಕುಟುಂಬಗಳಿಗೆ ಆಹಾರ ನೀಡುವಂತೆ ಗ್ರಾಮದ ಮುಖ್ಯಸ್ಥರನ್ನು ಕೋರಲಾಗಿದೆ. ಪಾಕಿಸ್ತಾನದಲ್ಲಿ ನಿರುದ್ಯೋಗ ಮತ್ತು ಹಣದುಬ್ಬರ ಇರುವುದರಿಂದ ಭಾರತಕ್ಕೆ ಬಂದಿದ್ದೇವೆ ಎಂದು ರಾಕೇಶ್ ಕುಮಾರ್ ಮತ್ತು ಸಂತೋಷ್ ಕುಮಾರ್ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.

ಅವರು ದೆಹಲಿಯಲ್ಲಿ ತಮ್ಮ ಸಂಬಂಧಿಕರೊಂದಿಗೆ ಕೆಲವು ದಿನಗಳ ಕಾಲ ಇದ್ದರು. ಈ ಕುಟುಂಬಗಳು ಭಾರತದಲ್ಲಿ ನೆಲೆಸಲು ಬಯಸುತ್ತಿದ್ದು, ವೀಸಾ ವಿಸ್ತರಣೆಯನ್ನು ಕೋರಿ ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನರ್‌ಗೆ ಪತ್ರ ಬರೆದಿದ್ದಾರೆ. ಎರಡು ಕುಟುಂಬಗಳನ್ನು ಇಲ್ಲಿಗೆ ಕರೆತಂದ ಸಂಗ್ರಾಮಪುರದ ಸಮಾಜ ಸೇವಕ ಕಮಲೇಶ್ ಕುಮಾರ್ ಪಟೇಲ್ ಅವರನ್ನು 10 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ, ಅಮೆರಿಕ ಡಾಲರ್‌ಗೆ ಹೋಲಿಸಿದರೆ ಪಾಕಿಸ್ತಾನದ ರೂಪಾಯಿ ತನ್ನ ಮೌಲ್ಯದಲ್ಲಿ ನಾಟಕೀಯ ಕುಸಿತ ಕಂಡಿದೆ. ನಗದು ಕೊರತೆಯಿರುವ ಪಾಕಿಸ್ತಾನದ ಆರ್ಥಿಕತೆಯು ಕಳೆದ ಹಲವು ವರ್ಷಗಳಿಂದ ಕುಸಿತದ ಹಾದಿಯಲ್ಲಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com