ಅಕ್ರಮ ಹಣ ವರ್ಗಾವಣೆ ಪ್ರಕರಣ: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಬಿಡುಗಡೆ ಸುಪ್ರೀಂಕೋರ್ಟ್ ನಕಾರ, 5 ದಿನಗಳ ಕಾಲ ಇ ಡಿ ವಶಕ್ಕೆ

ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಜೂನ್‌ನಲ್ಲಿ ಬಂಧಿತರಾಗಿರುವ ಡಿಎಂಕೆ ನಾಯಕ ಹಾಗೂ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಅವರ ಬಿಡುಗಡೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಸೆಂಥಿಲ್ ಬಾಲಾಜಿ (ಸಂಗ್ರಹ ಚಿತ್ರ)
ಸೆಂಥಿಲ್ ಬಾಲಾಜಿ (ಸಂಗ್ರಹ ಚಿತ್ರ)

ನವದೆಹಲಿ: ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಜೂನ್‌ನಲ್ಲಿ ಬಂಧಿತರಾಗಿರುವ ಡಿಎಂಕೆ ನಾಯಕ ಹಾಗೂ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಅವರ ಬಿಡುಗಡೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.

ಆಗಸ್ಟ್ 12ರವರೆಗೆ 5 ದಿನಗಳ ಕಾಲ ಬಾಲಾಜಿ ಅವರನ್ನು ಜಾರಿ ನಿರ್ದೇಶನಾಲಯದ (ಇ ಡಿ) ವಶಕ್ಕೆ ನೀಡಿ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ಪೀಠ ಆದೇಶಿಸಿದೆ.

ಬಾಲಾಜಿ ಮತ್ತು ಅವರ ಪತ್ನಿ ಸಲ್ಲಿಸಿದ್ದ ಎರಡು ಅರ್ಜಿಗಳಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ. ಇದರ ಜೊತೆಗೆ ಸಚಿವರ ಬಿಡುಗಡೆ ಪ್ರಶ್ನಿಸಿ ಇ ಡಿ ಸಲ್ಲಿಸಿದ್ದ ಮನವಿಯನ್ನು ಸಹ ನ್ಯಾಯಾಲಯ ಆಲಿಸಿತು. ಪ್ರಕರಣದ ತೀರ್ಪನ್ನು ಆಗಸ್ಟ್ 2ರ ಬುಧವಾರದಂದು ಸುಪ್ರೀಂ ಕೋರ್ಟ್ ಕಾಯ್ದಿರಿಸಿತ್ತು.

ಮದ್ರಾಸ್ ಹೈಕೋರ್ಟ್ ಈ ಹಿಂದೆ ಸಚಿವರನ್ನು ಬಿಡುಗಡೆ ಮಾಡುವುದರ ವಿರುದ್ಧ ತೀರ್ಪು ನೀಡಿತ್ತು ಈ ಹಿನ್ನೆಲೆಯಲ್ಲಿ ಸಚಿವರು ಹಾಗೂ ಅವರ ಪತ್ನಿ ಎಸ್‌ ಮೇಘಲಾ ಅವರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

ಈ ಮಧ್ಯೆ ಬಾಲಾಜಿ ಪತ್ನಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ಪುರಸ್ಕರಿಸುವಲ್ಲಿಯೂ ಹೈಕೋರ್ಟ್‌ ಎಡವಿದೆ ಎಂದು ಸುಪ್ರೀಂ ಕೋರ್ಟ್‌ಗೆ ಇ ಡಿ ಅರ್ಜಿ ಸಲ್ಲಿಸಿತ್ತು. ಬಾಲಾಜಿ ಮತ್ತು ಅವರ ಪತ್ನಿ ಸಲ್ಲಿಸಿದ್ದ ಅರ್ಜಿಗಳ ಜೊತೆಗೆ ಇಡಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಆಲಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com