ಸೂರ್ಯಯಾನ: ಆದಿತ್ಯಾ-ಎಲ್ 1 ಉಡಾವಣೆಗೆ ಭರದ ಸಿದ್ಧತೆ, ವಾಹಕ ತಪಾಸಣೆ ಪೂರ್ಣ; ಇಸ್ರೊ ಮಾಹಿತಿ

ಚಂದ್ರಯಾನ 3 ಯಶಸ್ಸಿನ ಬೆನ್ನಲ್ಲೇ ಇಸ್ರೋ ಉಡಾವಣೆ ಮಾಡುತ್ತಿರುವ ಸೂರ್ಯನ ಕುರಿತ ಅಧ್ಯಯನದ ಆದಿತ್ಯಾ ಎಲ್ 1 ಉಪಗ್ರಹ ಯೋಜನೆಯ ಸಿದ್ಧತೆ ಬಹುತೇಕ ಪೂರ್ಣವಾಗಿದ್ದು, ವಾಹಕ ತಪಾಸಣೆ ಕಾರ್ಯ ಕೂಡ ಪೂರ್ಣವಾಗಿದೆ.
ಆದಿತ್ಯಾ-ಎಲ್ 1 ಉಡಾವಣೆಗೆ ಭರದ ಸಿದ್ಧತೆ
ಆದಿತ್ಯಾ-ಎಲ್ 1 ಉಡಾವಣೆಗೆ ಭರದ ಸಿದ್ಧತೆ

ಬೆಂಗಳೂರು: ಚಂದ್ರಯಾನ 3 ಯಶಸ್ಸಿನ ಬೆನ್ನಲ್ಲೇ ಇಸ್ರೋ ಉಡಾವಣೆ ಮಾಡುತ್ತಿರುವ ಸೂರ್ಯನ ಕುರಿತ ಅಧ್ಯಯನದ ಆದಿತ್ಯಾ ಎಲ್ 1 ಉಪಗ್ರಹ ಯೋಜನೆಯ ಸಿದ್ಧತೆ ಬಹುತೇಕ ಪೂರ್ಣವಾಗಿದ್ದು, ವಾಹಕ ತಪಾಸಣೆ ಕಾರ್ಯ ಕೂಡ ಪೂರ್ಣವಾಗಿದೆ.

ಹೌದು.. ಸೂರ್ಯನ ಬಾಹ್ಯ ವಾತಾವರಣದ ಅಧ್ಯಯನಕ್ಕಾಗಿ ಇಸ್ರೊ ‘ಆದಿತ್ಯ–ಎಲ್‌ 1’ ಬಾಹ್ಯಾಕಾಶ ನೌಕೆಯನ್ನು ಉಡ್ಡಯನ ಮಾಡುವುದಕ್ಕೆ ಭರದಿಂದ ಸಿದ್ಧತೆ ನಡೆಸಿದೆ. ‘ಆದಿತ್ಯ–ಎಲ್‌ 1’ ಬಾಹ್ಯಾಕಾಶ ನೌಕೆಯ ಉಡ್ಡಯನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ವಾಹಕದ ತಪಾಸಣೆ ಪೂರ್ಣಗೊಂಡಿದೆ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಇಸ್ರೊ ಮಾಹಿತಿ ನೀಡಿದ್ದು, ಫೋಟೊಗಳನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದೆ.

ಸೂರ್ಯನ ಅಧ್ಯಯನಕ್ಕಾಗಿ ಭಾರತ ಕಳುಹಿಸಲಿರುವ ಚೊಚ್ಚಲ ಯೋಜನೆ ಆದಿತ್ಯ–ಎಲ್‌1 ಅನ್ನು ಸೆಪ್ಟೆಂಬರ್‌ 2ರಂದು ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟಾದಿಂದ ಉಡ್ಡಯನವಾಗಲಿದೆ ಎಂದು ಇಸ್ರೊ ತಿಳಿಸಿದೆ. ಸೂರ್ಯನ ಬಾಹ್ಯ ವಾತಾವರಣದ ಅಧ್ಯಯನ ನಡೆಸುವುದಕ್ಕೆ ಬೇಕಾದ ರೀತಿಯಲ್ಲಿ ಆದಿತ್ಯ ಎಲ್‌1 ಅನ್ನು ವಿನ್ಯಾಸಗೊಳಿಸಲಾಗಿದ್ದು, ಈ ಎಲ್‌ 1 ಪ್ರದೇಶದಲ್ಲಿ ಉಪಗ್ರಹವನ್ನು ಇರಿಸಿ ಸೌರ ಮಾರುತದ ಅಧ್ಯಯನ ನಡೆಸಲಾಗುವುದು. ಎಲ್‌ ಎಂದರೆ, ಲಾಗ್ರೇಂಜ್‌ ಬಿಂದು. ಇದು ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣ ಬಲ ಸಮಾನವಾಗಿರುವ ಪ್ರದೇಶ. ಇಲ್ಲಿ ವೀಕ್ಷಣಾ ಉಪಗ್ರಹವನ್ನು ನಿಯೋಜಿಸಿದರೆ ಅದು ಅತ್ಯಂತ ಕಡಿಮೆ ಇಂಧನದಲ್ಲಿ ನೆಲೆ ನಿಲ್ಲಲು ಸಾಧ್ಯ. ಈ ಪ್ರದೇಶವು ಭೂಮಿಯಿಂದ 15 ಲಕ್ಷ ಕಿಲೋಮೀಟರ್‌ ದೂರದಲ್ಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಎಲ್‌1 ಬಿಂದುವಿನ ಕಕ್ಷೆಯಲ್ಲಿ ಆದಿತ್ಯ ಉಪಗ್ರಹವನ್ನು ಇರಿಸಲಾಗುವುದು. ಕಕ್ಷೆಯಲ್ಲೇ ಸುತ್ತುತ್ತಲೇ ಸೂರ್ಯನ ವಿದ್ಯಮಾನಗಳ ಮೇಲೆ ನಿಗಾ ಇರಿಸಲಿದೆ. ಈ ಉಪಗ್ರಹವನ್ನು ಯು.ಆರ್‌. ರಾವ್‌ ಉಪಗ್ರಹ ಕೇಂದ್ರ ಅಭಿವೃದ್ಧಿಪಡಿಸಿದ್ದು ಶ್ರೀಹರಿಕೋಟಾದ ಇಸ್ರೊ ಬಾಹ್ಯಾಕಾಶ ಕೇಂದ್ರಕ್ಕೆ ಈ ತಿಂಗಳ ಆರಂಭದಲ್ಲಿ ತರಲಾಗಿದೆ. ಇಸ್ರೋದ ಪಿಎಸ್ ಎಲ್ ವಿ ಸಿ-57 ಉಡಾವಣಾ ನೌಕೆಯು ಆದಿತ್ಯಾ ಎಲ್ 1 ಉಪಗ್ರಹವನ್ನು ಹೊತ್ತು ನಭಕ್ಕೆ ಹಾರಿ ಕಕ್ಷೆಗೆ ಸೇರಿಸಲಿದೆ.

ತೇಜೋಮಂಡಲದ ಅಧ್ಯಯನಕ್ಕಾಗಿ ವಿಸಿಬಲ್‌ ಎಮಿಶನ್‌ ಲೈನ್‌ ಕೊರೊನಾಗ್ರಾಫ್‌ (ವಿಇಎಲ್‌ಸಿ) ಎಂಬ ಉಪಕರಣವನ್ನು ಬೆಂಗಳೂರಿನ ಭಾರತೀಯ ಖಭೌತವಿಜ್ಞಾನ ಸಂಸ್ಥೆಯು ಅಭಿವೃದ್ಧಿಪಡಿಸಿದ್ದು, ಸೂರ್ಯನ ಅತಿನೇರಳೆ ಕಿರಣಗಳ ಅಧ್ಯಯನ ನಡೆಸುವ ಉಪಕರಣವನ್ನು ಪುಣೆಯ ಇಂಟರ್‌ ಯುನಿವರ್ಸಿಟಿ ಸೆಂಟರ್‌ ಫಾರ್‌ ಆಸ್ಟ್ರೊನಮಿ ಆ್ಯಂಡ್‌ ಆಸ್ಟ್ರೊಫಿಸಿಕ್ಸ್‌ ಸಂಸ್ಥೆ ಅಭಿವೃದ್ಧಿಪಡಿಸಿದೆ. ಸೂರ್ಯನ ಮೇಲ್ಮೈಯ ತಾಪ ಮಾನವು 6,000 ಡಿಗ್ರಿ ಸೆಲ್ಸಿಯಸ್‌ ಇದ್ದರೂ ತೇಜೋಮಂಡಲದ ತಾಪಮಾನವು 10 ಲಕ್ಷ ಡಿಗ್ರಿ ಸೆಲ್ಸಿಯಸ್‌ ವರೆಗೆ ತಲುಪಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ವಿಇಎಲ್‌ಸಿ ಉತ್ತರ ಕಂಡುಕೊಳ್ಳಲಿದೆ ಎಂದು ಇಸ್ರೊ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com