ಕೇರಳ: 36 ವರ್ಷದ ಇಸ್ರೇಲಿ ಮಹಿಳೆ ಶವ ಪತ್ತೆ; ಲಿವ್ ಇನ್ ಪಾರ್ಟ್ನರ್ ಕೊಲೆ ಮಾಡಿರುವ ಶಂಕೆ

36 ವರ್ಷದ ಇಸ್ರೇಲಿ ಮಹಿಳೆ ಗುರುವಾರ ದಕ್ಷಿಣ ಕೇರಳ ಜಿಲ್ಲೆಯ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ 70 ವರ್ಷದ ಲಿವ್-ಇನ್ ಪಾರ್ಟ್ನರ್ ಆಕೆಯನ್ನು ಕೊಂದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲ್ಲಂ: 36 ವರ್ಷದ ಇಸ್ರೇಲಿ ಮಹಿಳೆ ಗುರುವಾರ ದಕ್ಷಿಣ ಕೇರಳ ಜಿಲ್ಲೆಯ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ 70 ವರ್ಷದ ಲಿವ್-ಇನ್ ಪಾರ್ಟ್ನರ್ ಆಕೆಯನ್ನು ಕೊಂದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ ಮತ್ತು ಅವರ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ದಂಪತಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು ಮತ್ತು ಅದರ ಭಾಗವಾಗಿ ಮಹಿಳೆ ತನ್ನ ಕತ್ತು ಸೀಳಿಕೊಂಡಿದ್ದಾರೆ ಎಂದು ಯೋಗ ಗುರು ಎಂದು ಹೇಳಿಕೊಳ್ಳುವ ವ್ಯಕ್ತಿ ನೀಡಿದ ಹೇಳಿಕೆಯನ್ನು ಕೊಟ್ಟಾಯಂ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಆ ವ್ಯಕ್ತಿ ಕೂಡ ತನ್ನ ಕುತ್ತಿಗೆ ಮತ್ತು ಹೊಟ್ಟೆಗೆ ಇರಿದುಕೊಂಡಿದ್ದಾಗಿ ಹೇಳಿದ್ದಾನೆ. ಆದಾಗ್ಯೂ, ಮಹಿಳೆಯ ಕುತ್ತಿಗೆಯಲ್ಲಿ ಮಾರಣಾಂತಿಕ ಗಾಯದ ಜೊತೆಗೆ ಆಕೆಯ ದೇಹದ ಮೇಲೆ ಹಲವಾರು ಇರಿತದ ಗಾಯಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಕ್ತಿಯ ವಿರುದ್ಧ ಐಪಿಸಿಯ ಸೆಕ್ಷನ್ 309 (ಆತ್ಮಹತ್ಯೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಪೊಲೀಸರ ಕಣ್ಗಾವಲಿನಲ್ಲಿದ್ದಾರೆ ಎಂದು ಅಧಿಕಾರಿ ಹೇಳಿದರು.

ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ದಂಪತಿಯಿಬ್ಬರು ತಮ್ಮ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಆರೋಪಿಯ ಸಂಬಂಧಿಕರು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸಂಬಂಧಿಕರು ಸಹಾಯಕ್ಕಾಗಿ ಕೂಗುತ್ತಿದ್ದಂತೆ, ಇನ್ನೂ ಎಚ್ಚರವಾಗಿದ್ದ ವ್ಯಕ್ತಿ ಎದ್ದು ಬಾಗಿಲು ಮುಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಆಗಮಿಸಿದ ನಂತರ ಬಾಗಿಲು ಒಡೆದು ಒಳ ಪ್ರವೇಶಿಸಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಮಹಿಳೆ ಸಾವಿಗೀಡಾಗಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.

ದಂಪತಿ ಆರೋಪಿಯ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದರು. ಮಹಿಳೆ 15 ವರ್ಷಗಳಿಂದ ಉತ್ತರಾಖಂಡ್‌ನಲ್ಲಿದ್ದರು ಮತ್ತು ಕಳೆದ ಒಂದು ವರ್ಷದಿಂದ ಕೇರಳದಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಪ್ರಕಾರ, ಮಹಿಳೆ ಖಿನ್ನತೆಗೆ ಒಳಗಾಗಿದ್ದಳು ಮತ್ತು ಆತ ಯೋಗ ಪಾಠ ಮಾಡಿದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಅಲ್ಲದೆ, ಆರೋಪಿ ಕೂಡ ತಾನು ಸೋರಿಯಾಸಿಸ್‌ನಿಂದ ಬಳಲುತ್ತಿದ್ದು, ಹೀಗಾಗಿ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿರ್ಧರಿಸಿದ್ದಾರೆ. ಕೋಣೆಯಲ್ಲಿ ಡೆತ್ ನೋಟ್ ಕೂಡ ಕಂಡುಬಂದಿದೆ ಎಂದು ಅಧಿಕಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com