ಪ್ರಶ್ನೆಗಾಗಿ ಲಂಚ: ಸಂಸದೆ ಮಹುವಾ ಕುರಿತ ನೈತಿಕ ಸಮಿತಿ ವರದಿ ಕುರಿತು ಕೇಂದ್ರ ಸರ್ಕಾರದ ನಿರ್ಣಯ ಮಂಡನೆ

ತೃಣಮೂಲ ಕಾಂಗ್ರೆಸ್‌ ಸಂಸದೆ (TMC MP) ಮಹುವಾ ಮೊಯಿತ್ರಾ (Mahua Moitra) ವಿರುದ್ಧದ 'ಪ್ರಶ್ನೆಗಾಗಿ ಲಂಚ' ಪಡೆದ ಪ್ರಕರಣದ ಕುರಿತು ಸದನ ನೈತಿಕ ಸಮಿತಿಯು ತಯಾರಿಸಿರುವ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಇದೀಗ ಕೇಂದ್ರ ಸರ್ಕಾರ ವರದಿ ಕುರಿತು ಕಲಾಪದಲ್ಲಿ ತನ್ನ ನಿರ್ಣಯ ಮಂಡಿಸಿದೆ.
ಮಹುವಾ ಕುರಿತ ನೈತಿಕ ಸಮಿತಿ ವರದಿ ಕುರಿತು ಕೇಂದ್ರ ಸರ್ಕಾರದ ನಿರ್ಣಯ ಮಂಡನೆ
ಮಹುವಾ ಕುರಿತ ನೈತಿಕ ಸಮಿತಿ ವರದಿ ಕುರಿತು ಕೇಂದ್ರ ಸರ್ಕಾರದ ನಿರ್ಣಯ ಮಂಡನೆ

ನವದೆಹಲಿ: ತೃಣಮೂಲ ಕಾಂಗ್ರೆಸ್‌ ಸಂಸದೆ (TMC MP) ಮಹುವಾ ಮೊಯಿತ್ರಾ (Mahua Moitra) ವಿರುದ್ಧದ 'ಪ್ರಶ್ನೆಗಾಗಿ ಲಂಚ' ಪಡೆದ ಪ್ರಕರಣದ ಕುರಿತು ಸದನ ನೈತಿಕ ಸಮಿತಿಯು ತಯಾರಿಸಿರುವ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಇದೀಗ ಕೇಂದ್ರ ಸರ್ಕಾರ ವರದಿ ಕುರಿತು ಕಲಾಪದಲ್ಲಿ ತನ್ನ ನಿರ್ಣಯ ಮಂಡಿಸಿದೆ.

ಸಂಸದೆ ಮೊಯಿತ್ರಾ ಅವರನ್ನು ಉಚ್ಚಾಟಿಸುವಂತೆ ವರದಿ ಶಿಫಾರಸು ಮಾಡಿದ್ದು, ಇದೇ ವರದಿಯನ್ನು ಇದೀಗ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಅಂತೆಯೇ ಇದೀಗ ಕೇಂದ್ರ ಸರ್ಕಾರ ಕೂಡ ಮಹುವಾ ಕುರಿತು ನೈತಿಕ ಸಮಿತಿ ವರದಿಯನ್ನು ಅಳವಡಿಸಿಕೊಳ್ಳಲು ತನ್ನ ನಿರ್ಣಯ ಮಂಡಿಸಿದೆ. ಮೂಲಗಳ ಪ್ರಕಾರ ನೈತಿಕ ಸಮಿತಿಯ ವರದಿಯನ್ವಯ ಮೊಯಿತ್ರಾ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಉಚ್ಛಾಟನೆ ಮಾಡುವ ಶಿಫಾರಸ್ಸಿಗೆ ಕೇಂದ್ರ ಸರ್ಕಾರ ಬೆಂಬಲ ಸೂಚಿಸಿದೆ ಎನ್ನಲಾಗಿದೆ. 

ಅತ್ತ ಕೇಂದ್ರ ಸರ್ಕಾರ ನೈತಿಕ ಸಮಿತಿ ವರದಿಗೆ ಬೆಂಬಲ ಸೂಚಿಸುತ್ತಲೇ ಇತ್ತ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಮತ್ತು ಟಿಎಂಸಿ ಸಂಸದರು, ನೈತಿಕ ಸಮಿತಿ ವರದಿಯನ್ನು ಅಧ್ಯಯನ ಮಾಡಲು ಕಾಲಾವಕಾಶ ನೀಡಬೇಕು ಎಂದು ಕೇಳಿವೆ. ಈ ಬಗ್ಗೆ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಮಾತನಾಡಿ, ಎಥಿಕ್ಸ್ ಸಮಿತಿ ವರದಿಯನ್ನು ಮಧ್ಯಾಹ್ನ ಮಂಡನೆ ಮಾಡಿರುವುದು ಸಂಸದರಿಗೆ ಓದಲು ಕೇವಲ ಎರಡು ಗಂಟೆ ಮಾತ್ರ ಸಿಕ್ಕಂತಾಗುತ್ತದೆ. ಹೀಗಾಗಿ ಸಮಿತಿ ವರದಿ ಅಧ್ಯಯನಕ್ಕೆ ಕನಿಷ್ಟ 48 ಗಂಟೆಗಳ ಕಾಲಾವಕಾಶ ಬೇಕು ಎಂದು ಒತ್ತಾಯಿಸಿದರು. 

ಇದೇ ವಾದವನ್ನು ಮಂಡಿಸಿದ ಮತ್ತೋರ್ವ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, ವರದಿಯನ್ನು ಓದಲು ಸದನಕ್ಕೆ ಹೆಚ್ಚಿನ ಸಮಯವನ್ನು ನೀಡಿದರೆ ಸ್ವರ್ಗ ಕುಸಿಯುವುದಿಲ್ಲ. ಆರೋಪಿತ ವ್ಯಕ್ತಿಗೆ ಸದನದಲ್ಲಿ ಮಾತನಾಡಲೂ ಅವಕಾಶ ನೀಡಿಲ್ಲ, ಇದು ಸಹಜ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ.

ಮೋಯಿತ್ರಾ ಅವರನ್ನು ಉಚ್ಚಾಟಿಸಬೇಕೆಂಬ ನೈತಿಕ ಸಮಿತಿಯ ಶಿಫಾರಸು ಮೂಲಭೂತವಾಗಿ ದೋಷಪೂರಿತವಾಗಿದೆ. ಏಕೆಂದರೆ ಸಮಿತಿಯು ವರದಿಯನ್ನು ಮಂಡಿಸಬಹುದು. ಆದರೆ ಶಿಕ್ಷೆಯನ್ನು ನಿರ್ದೇಶಿಸಲು ಸಾಧ್ಯವಿಲ್ಲ. ಸದನವು ಇಂದು ನ್ಯಾಯಾಧೀಶರು ಮತ್ತು ತೀರ್ಪುಗಾರರಾಗುತ್ತಿದ್ದಾರೆ. ಎಥಿಕ್ಸ್ ಕಮಿಟಿಯ 495 ಪುಟಗಳ ವರದಿಯನ್ನು ಅಧ್ಯಯನ ಮಾಡಲು ಕನಿಷ್ಠ 4 ದಿನಗಳ ಕಾಲಾವಕಾಶ ನೀಡಬೇಕು ಎಂದು ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com