ಗುಜರಾತ್ ನಲ್ಲಿ ಆಪ್ ಗೆ ಆಘಾತ: ಭೂಪೇಂದ್ರ ಭಯಾನಿ ರಾಜಿನಾಮೆ, BJP ಸೇರುತ್ತೇನೆ ಎಂದ ಶಾಸಕ

ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಆಘಾತ ಎದುರಾಗಿದ್ದು, ಜನರ ಸೇವೆಗೆ ಆಪ್ ಸರಿಯಾದ ವೇದಿಕೆಯಲ್ಲ ಎಂದು ಆರೋಪಿಸಿ ಅದರ ಶಾಸಕ ಭೂಪೇಂದ್ರ ಭಯಾನಿ ಅವರು ರಾಜ್ಯ ವಿಧಾನಸಭೆಯ ಸದಸ್ಯತ್ವ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.
ಭೂಪೇಂದ್ರ ಭಯಾನಿ ರಾಜಿನಾಮೆ
ಭೂಪೇಂದ್ರ ಭಯಾನಿ ರಾಜಿನಾಮೆ

ಅಹ್ಮದಾಬಾದ್: ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಆಘಾತ ಎದುರಾಗಿದ್ದು, ಜನರ ಸೇವೆಗೆ ಆಪ್ ಸರಿಯಾದ ವೇದಿಕೆಯಲ್ಲ ಎಂದು ಆರೋಪಿಸಿ ಅದರ ಶಾಸಕ ಭೂಪೇಂದ್ರ ಭಯಾನಿ ಅವರು ರಾಜ್ಯ ವಿಧಾನಸಭೆಯ ಸದಸ್ಯತ್ವ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.

ಜುನಾಗಢ ಜಿಲ್ಲೆಯ ವಿಸಾವದರ್ ಕ್ಷೇತ್ರವನ್ನು ಪ್ರತಿನಿಧಿಸುವ ಭಯಾನಿ ಅವರು ಬೆಳಿಗ್ಗೆ ಗಾಂಧಿನಗರದಲ್ಲಿ ಗುಜರಾತ್ ವಿಧಾನಸಭಾ ಸ್ಪೀಕರ್ ಶಂಕರ್ ಚೌಧರಿ ಅವರಿಗೆ ರಾಜೀನಾಮೆ ನೀಡಿದರು. ಕಳೆದ ವರ್ಷ ರಾಜ್ಯ ಚುನಾವಣೆಗೆ ಮುಂಚಿತವಾಗಿ ಎಎಪಿಗೆ ಸೇರುವ ಮೊದಲು ಜುನಾಗಢ್‌ನ ಭೇಸನ್ ಗ್ರಾಮದ ಸರಪಂಚ್ ಆಗಿ ಸೇವೆ ಸಲ್ಲಿಸಿದ್ದರು. 

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಭೂಪೇಂದ್ರ ಭಯಾನಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಕಾರ್ಯಕರ್ತನ ಸ್ಥಾನಕ್ಕೂ ರಾಜೀನಾಮೆ ನೀಡಿದ್ದೇನೆ ಮತ್ತು ಶೀಘ್ರದಲ್ಲೇ ಆಡಳಿತಾರೂಢ ಬಿಜೆಪಿಗೆ ಸೇರುತ್ತೇನೆ ಎಂದು ಹೇಳಿದರು. "ನಾನು ಬಿಜೆಪಿ ಕಾರ್ಯಕರ್ತನಾಗಿದ್ದೆ ಮತ್ತು ಜೀವನ ಪರ್ಯಂತ ಬಿಜೆಪಿ ಕಾರ್ಯಕರ್ತನಾಗಿಯೇ ಇರುತ್ತೇನೆ. ನಾನು 22 ವರ್ಷಗಳಿಂದ ಬಿಜೆಪಿಗಾಗಿ ಕೆಲಸ ಮಾಡಿದ್ದೇನೆ ಮತ್ತು ಪಕ್ಷದಿಂದ ಎಂದಿಗೂ ಅಮಾನತುಗೊಂಡಿಲ್ಲ. ನನ್ನ ಕ್ಷೇತ್ರದ ಜನತೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಬೇಕೆಂದಿದ್ದೇನೆ. ಪರಿಣಾಮವಾಗಿ, ನಾನು ಶಾಸಕ ಸ್ಥಾನ ತ್ಯಜಿಸಿದ್ದೇನೆ ಎಂದು ಹೇಳಿದರು.

"ಇದಲ್ಲದೆ, ನಮ್ಮ ಹೆಮ್ಮೆ ಮತ್ತು ವಿಶ್ವಾದ್ಯಂತ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸಲು ನಾನು ಇಷ್ಟಪಡುವುದಿಲ್ಲ. ನಾನು ಶೀಘ್ರದಲ್ಲೇ ಬಿಜೆಪಿಗೆ ಸೇರುತ್ತೇನೆ ಏಕೆಂದರೆ ನಾನು ಮೂಲತಃ ಆ ಪಕ್ಷಕ್ಕೆ ಸೇರಿದ್ದೇನೆ ಮತ್ತು ಶಾಸಕನಾಗುವ ಮೊದಲು ಸುಮಾರು 22 ವರ್ಷಗಳ ಕಾಲ ಅದಕ್ಕಾಗಿ ಕೆಲಸ ಮಾಡಿದ್ದೇನೆ. ಕೇಂದ್ರ ನಾಯಕತ್ವ ಬಯಸಿದರೆ ನಾನು ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಪಕ್ಷ ತೊರೆಯುವ ಯಾವುದೇ ಒತ್ತಡ ನನ್ನಲ್ಲಿರಲಿಲ್ಲ ಎಂದು ಭಯಾನಿ ಹೇಳಿದ್ದಾರೆ.

ಭಯಾನಿ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ನಿರ್ಧಾರದ ಹಿಂದೆ ಯಾವುದೇ ಕಾರಣವನ್ನು ಉಲ್ಲೇಖಿಸಿಲ್ಲ. ಭಯಾನಿ ಅವರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದಾರೆ ಎಂದು ಗುಜರಾತ್ ವಿಧಾನಸಭೆ ಕಾರ್ಯದರ್ಶಿ ಡಿಎಂ ಪಟೇಲ್ ಹೇಳಿದ್ದಾರೆ.

ಕಳೆದ ವರ್ಷದ ರಾಜ್ಯ ಚುನಾವಣೆಯಲ್ಲಿ ಚುನಾಯಿತರಾದ ಆಮ್ ಆದ್ಮಿ ಪಕ್ಷದ (ಎಎಪಿ) ಐದು ಶಾಸಕರಲ್ಲಿ ಭಯಾನಿ ಒಬ್ಬರು, ಭಾರತೀಯ ಜನತಾ ಪಕ್ಷವು (ಬಿಜೆಪಿ) 182 ಸದಸ್ಯ ಬಲದ ವಿಧಾನಸಭೆಯಲ್ಲಿ 156 ಸ್ಥಾನಗಳನ್ನು ಪಡೆಯುವ ಮೂಲಕ ಭಾರಿ ಬಹುಮತದೊಂದಿಗೆ ಗೆದ್ದಿತು. ಈ ಮೂಲಕ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಎಎಪಿ ಗೆದ್ದಿತ್ತು.

ಆಪ್ ವಾಗ್ದಾಳಿ
ಭಯಾನಿ ಅವರ ರಾಜೀನಾಮೆಯ ನಂತರ, ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಇಸುದನ್ ಗಧ್ವಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ, “ಬಿಜೆಪಿ ಎಎಪಿ ಶಾಸಕರನ್ನು ಒಡೆಯಲು ಪ್ರಯತ್ನಿಸುತ್ತಿದೆ. ಬಿಜೆಪಿಗೆ ಎಎಪಿ ಬೆಳವಣಿಗೆ ಭಯ ತರಿಸಿದೆ. ಪ್ರತಿ ವಾರ ಒಬ್ಬ ಶಾಸಕರಿಗೆ ಬಿಜೆಪಿಯಿಂದ ಆಫರ್ ಅಥವಾ ಬೆದರಿಕೆ ಹಾಕಲಾಗುತ್ತಿದೆ. ಆಮ್ ಆದ್ಮಿ ಪಕ್ಷದ ನಾಲ್ವರು ಶಾಸಕರು ಬಲವಾಗಿ ಒಗ್ಗೂಡಿದ್ದಾರೆ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ. ಬಿಜೆಪಿ ನಾಯಕರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲ; ಅವರು ಎಎಪಿಯನ್ನು ಅಸ್ಥಿರಗೊಳಿಸಲು ಮಾತ್ರ ಬಯಸುತ್ತಾರೆ.

ಲೋಕಸಭೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲು ವಿಶಾಲವಾದದ ಜನತೆ ಬಯಸುತ್ತಿದ್ದಾರೆ. ಬಿಜೆಪಿ 156 ಶಾಸಕರನ್ನು ಹೊಂದಿದ್ದರೂ, ನಕಲಿ ಸಿರಪ್, ಫೇಕ್ ಟ್ಯಾಕ್ಸ್ ಮತ್ತು ನಕಲಿ ಸರ್ಕಾರಿ ಕಚೇರಿಗಳು ಗುಜರಾತ್‌ನಾದ್ಯಂತ ನಡೆಯುತ್ತಿವೆ. ನಾನು ವಿಶಾವದರ್ ಜನರಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಮತ್ತು ಮುಂದೆ ಹೀಗಾಗುವುದಿಲ್ಲ ಎಂದು ಅವರಿಗೆ ಭರವಸೆ ನೀಡುತ್ತೇನೆ ಎಂದು ಇಸುದನ್ ಗಧ್ವಿ ರಾಜ್ಯ ಕಚೇರಿಯಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರುವ ಬಗ್ಗೆ ಭಯಾನಿ ಈ ಹಿಂದೆ ಸುಳಿವು ನೀಡಿದ್ದರು, ಆದರೆ ಶೀಘ್ರದಲ್ಲೇ, ಅವರು ತೊರೆಯುವುದಿಲ್ಲ ಎಂದು "ಸ್ಪಷ್ಟಪಡಿಸಲು" ಅವರು ತಮ್ಮ ಹುಟ್ಟೂರಾದ ಜುನಾಗಢ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆ ನಡೆಸಿದ್ದರು. ಸೌರಾಷ್ಟ್ರ ವಲಯದ ವಿಸಾವದರ್ ಕ್ಷೇತ್ರವನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಅವರ ಸಾಂಪ್ರದಾಯಿಕ ಕ್ಷೇತ್ರವೆಂದು ಪರಿಗಣಿಸಲಾಗಿದೆ. ಕೇಶುಭಾಯಿ ನಂತರ, ಹರ್ಷದ್ ರಿಬಾಡಿಯಾ ಕಾಂಗ್ರೆಸ್ ಟಿಕೆಟ್‌ನಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ಚುನಾವಣೆಗೆ ಮುನ್ನ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು, ಆದರೆ ಆಪ್ ಅಭ್ಯರ್ಥಿ ಭೂಪೇಂದ್ರ ಭಯಾನಿ ಎದುರು ಸುಮಾರು 7,000 ಮತಗಳಿಂದ ಸೋಲು ಕಂಡಿದ್ದರು. ಭಯಾನಿ ಬಿಜೆಪಿಯ ಮಾಜಿ ಸದಸ್ಯರಾಗಿದ್ದು, ಎರಡು ವರ್ಷಗಳ ಹಿಂದೆ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದರು. ಅವರು ಹಿಂದೆ ಸರಪಂಚರಾಗಿಯೂ ಕೆಲಸ ಮಾಡುತ್ತಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com