ವಾಯುಭಾರ ಕುಸಿತ: ತಮಿಳುನಾಡಿಗೆ ಮತ್ತೆ ವರುಣಾಘಾತ, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಮಿಚಾಂಗ್ ಚಂಡಮಾರುತದ ಅಬ್ಬರ ತಣ್ಣಗಾದ ಬೆನ್ನಲ್ಲೇ ಇತ್ತ ಮತ್ತೆ ತಮಿಳುನಾಡಿಗೆ ವರುಣಾಘಾತ ಎದುರಾಗಿದ್ದು, ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನಾದ್ಯಂತ ವ್ಯಾಪಕ ಮಳೆ ಸುರಿಯುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ತಮಿಳುನಾಡಿನಲ್ಲಿ ಭಾರಿ ಮಳೆ
ತಮಿಳುನಾಡಿನಲ್ಲಿ ಭಾರಿ ಮಳೆ

ಚೆನ್ನೈ: ಮಿಚಾಂಗ್ ಚಂಡಮಾರುತದ ಅಬ್ಬರ ತಣ್ಣಗಾದ ಬೆನ್ನಲ್ಲೇ ಇತ್ತ ಮತ್ತೆ ತಮಿಳುನಾಡಿಗೆ ವರುಣಾಘಾತ ಎದುರಾಗಿದ್ದು, ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನಾದ್ಯಂತ ವ್ಯಾಪಕ ಮಳೆ ಸುರಿಯುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಮುಂದಿನ 2-3 ದಿನಗಳಲ್ಲಿ ತಮಿಳುನಾಡು ಮತ್ತು ಕೇರಳದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ತಮಿಳುನಾಡಿನ ತೂತುಕುಡಿ, ರಾಮನಾಥಪುರಂ, ಪುದುಕ್ಕೊಟ್ಟೈ ಮತ್ತು ಶಿವಗಂಗಾ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದಲ್ಲದೆ ಕನ್ಯಾಕುಮಾರಿ, ತಿರುನಲ್ವೇಲಿ, ತಂಜಾವೂರಿನಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ, ತಿರುವರೂರ್, ನಾಗಪಟ್ಟಿಣಂ, ಮಧುರೈ, ಮೈಲಾಡುತುರೈ, ತೆಂಕಶಿ, ತಮಿಳುನಾಡಿನ ವಿರುಧುನಗರ ಜಿಲ್ಲೆಗಳು ಮತ್ತು ಕಾರೈಕಲ್ ಪ್ರದೇಶ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಭಾನುವಾರ, ದಕ್ಷಿಣ ತಮಿಳುನಾಡಿನ ಹಲವಾರು ಜಿಲ್ಲೆಗಳು ತೀವ್ರ ಮಳೆಗೆ ಸಾಕ್ಷಿಯಾಗಿದ್ದು, ಪ್ರವಾಹದಂತಹ ಪರಿಸ್ಥಿತಿ ಎದುರಾಗಿದ್ದು, ಸಾಕಷ್ಟು ಪ್ರದೇದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ತತ್ತರಿಸಿರುವ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಸೋಮವಾರ ಹಲವು ಪ್ರದೇಶಗಳು ಜಲಾವೃತವಾಗಿದೆ. ಮುಂದಿನ 2-3 ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಭಾರೀ ಮಳೆಯಿಂದಾಗಿ ತಮಿಳುನಾಡಿನ ಕೆಲವು ಭಾಗಗಳಲ್ಲಿ ತೀವ್ರ ಪ್ರವಾಹ ಉಂಟಾಗಿದೆ. ಮುಂದಿನ ಇಪ್ಪತ್ನಾಲ್ಕು ಗಂಟೆಗಳ ಕಾಲ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ತಮಿಳುನಾಡು ಜಿಲ್ಲೆಗಳಲ್ಲಿ ಅಂದರೆ ತೆಂಕಶಿ, ತೂತುಕುಡಿ, ತಿರುವನೇಲಿ ಮತ್ತು ಕನ್ಯಾಕುಮಾರಿಯಲ್ಲಿ ರೆಡ್ ಅಲರ್ಟ್ ಮುಂದುವರೆಯುವ ಸಾಧ್ಯತೆ ಇದೆ ಎಂದು ಚೆನ್ನೈ ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕ ಎಸ್ ಬಾಲಚಂದ್ರನ್ ತಿಳಿಸಿದ್ದಾರೆ.

ಪ್ರವಾಹ
ರಾಜ್ಯದ ಕನ್ಯಾಕುಮಾರಿ, ತಿರುನಲ್ವೇಲಿ, ತೂತುಕುಡಿ ಮತ್ತು ತೆಂಕಶಿ ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಇದು ವ್ಯಾಪಕ ಪ್ರವಾಹಕ್ಕೆ ಕಾರಣವಾಗಿದೆ. ಭತ್ತದ ಗದ್ದೆಗಳು, ರಸ್ತೆಗಳು ಮತ್ತು ಸೇತುವೆಗಳು ನೀರಿನಲ್ಲಿ ಮುಳುಗಿವೆ. ಭಾರೀ ಮಳೆಯಿಂದಾಗಿ ದಕ್ಷಿಣ ತಮಿಳುನಾಡಿನ ಹಲವಾರು ಪ್ರದೇಶಗಳಲ್ಲಿ ಅನೇಕ ವಸತಿ ಕಾಲೋನಿಗಳು ನೀರಿನಲ್ಲಿ ಮುಳುಗಿವೆ. 

ದಾಖಲೆ ಮಳೆ
ದಕ್ಷಿಣ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕಾಯಲ್‌ಪಟ್ಟಿಣಂನಲ್ಲಿ 95 ಸೆಂ.ಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ. ತಮಿಳುನಾಡಿನಲ್ಲಿ 95 ಸೆಂ ಮೀ ಮಳೆಯಾಗಿದ್ದು, ಪರಿಶೀಲನೆಯ ನಂತರ ಅದನ್ನು ಖಚಿತಪಡಿಸಲಾಗುವುದು ಎಂದು ಹವಾಮಾನ ಅಧಿಕಾರಿಯೊಬ್ಬರು ಹೇಳಿದರು. ತೂತುಕುಡಿ ಜಿಲ್ಲೆಯ ದೇವಾಲಯಗಳ ಪಟ್ಟಣವಾದ ತಿರುಚೆಂದೂರ್‌ನಲ್ಲಿಯೂ ಸಹ ಅತಿ ಹೆಚ್ಚು ಮಳೆಯಾಗಿದ್ದು, ಇಲ್ಲಿ 62 ರಿಂದ 69 ಸೆಂಮೀ ಮಳೆಯಾಗಿದೆ. ತಿರುನಲ್ವೇಲಿ ಜಿಲ್ಲೆಯ ಮಂಜೋಲೈ (55 ಸೆಂಮೀ) ಮತ್ತು ತೆಂಕಶಿ ಜಿಲ್ಲೆಯ ಗುಂಡಾರ್ ಅಣೆಕಟ್ಟು (51 ಸೆಂಮೀ) ಸೇರಿದಂತೆ ಹಲವಾರು ಪ್ರದೇಶಗಳು 50 ಸೆಂಮೀಗಿಂತ ಹೆಚ್ಚಿನ ಮಳೆಯನ್ನು ದಾಖಲಿಸಿವೆ ಎಂದು ಐಎಂಡಿ ಬುಲೆಟಿನ್ ತಿಳಿಸಿದೆ. 

ತಿರುನಲ್ವೇಲಿ (30 CM) ಮತ್ತು ತಿರುನಲ್ವೇಲಿ ಬಳಿಯ ಪಳಯಂಕೊಟ್ಟೈ (44 CM) ಅತಿ ಹೆಚ್ಚು ಮಳೆಗೆ ಸಾಕ್ಷಿಯಾದ ಇತರ ಪ್ರದೇಶಗಳಾಗಿವೆ. ಡಿಸೆಂಬರ್ 17 (8.30 AM) ರಿಂದ ಡಿಸೆಂಬರ್ 18 (8.30 AM) ವರೆಗೆ 24-ಗಂಟೆಗಳ ಅವಧಿಗೆ ಮಳೆಯಾಗಿದೆ.

ಪ್ರಧಾನಿಗೆ ಸಿಎಂ ಸ್ಟಾಲಿನ್ ಪತ್ರ
ಏತನ್ಮಧ್ಯೆ ತಮಿಳುನಾಡು ಸಿಎಂ ಸ್ಟಾಲಿನ್ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ರಾಜ್ಯದ ದಕ್ಷಿಣ ಭಾಗಗಳಲ್ಲಿ ಮಳೆ, ಪ್ರವಾಹ ಪರಿಸ್ಥಿತಿ ಕುರಿತು ಚರ್ಚಿಸಲು ಸಮಯ ನೀಡುವಂತೆ ಮನವಿ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com