ಹೊಸವರ್ಷ ಸಂಭ್ರಮಾಚರಣೆ ಮೇಲೆ ಉಗ್ರರ ಕರಿನೆರಳು: ಮುಂಬೈಗೆ ಬಂದ ಸರಣಿ ಬಾಂಬ್ ಸ್ಫೋಟ ಬೆದರಿಕೆ, ಎಲ್ಲೆಡೆ ಕಟ್ಟೆಚ್ಚರ
ಮುಂಬೈ: ಹೊಸವರ್ಷ ಸಂಭ್ರಮಾಚರಣೆಗೆ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೇ ಮುಂಬೈನಲ್ಲಿ ಬಾಂಬ್ ಸ್ಫೋಟ ನಡೆಸುವುದಾಗಿ ಬೆದರಿಕೆ ಕರೆಯೊಂದು ಬಂದಿದ್ದು, ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಮುಂಬೈ ಪೊಲೀಸ್ ಕಂಟ್ರೋಲ್ ರೂಮ್‍ಗೆ ಶನಿವಾರ ಸಂಜೆ 6 ರ ಸುಮಾರಿಗೆ ಬೆದರಿಕೆ ಕರೆ ಬಂದಿದೆ ಎಂದು ತಿಳಿದುಬಂದಿದೆ.
ಕರೆ ಮಾಡಿದ ವ್ಯಕ್ತಿ ನಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮುಂಬೈನಲ್ಲಿ ಸರಣಿ ಸ್ಪೋಟಗಳು ನಡೆಯಲಿವೆ ಎಂದು ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ನಗರದಾದ್ಯಂತ ಹಲವಾರು ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತಪಾಸಣೆ ನಡೆಸಿದ್ದಾರೆ. ಆದರೆ, ಯಾವುದೇ ಸ್ಪೋಟಕ ವಸ್ತುಗಳು ಅಥವಾ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಪ್ರಸ್ತುತ ಕರೆ ಮಾಡಿದವರ ವಿವರಗಳನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಹೆಚ್ಚಿನ ತನಿಖೆ ನಡೆಯುತ್ತಿದೆ. ಇದಕ್ಕೂ ಮೊದಲು, ಡಿಸೆಂಬರ್ 27 ರಂದು, ಜೈಪುರ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕಳುಹಿಸುವವರ ಇಮೇಲ್ ಮೂಲಕ ವಿಮಾನ ನಿಲ್ದಾಣವನ್ನು ಸ್ಪೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು.
ಬೆದರಿಕೆ ಇಮೇಲ್ ಸ್ವೀಕರಿಸಿದ ನಂತರ, ಟರ್ಮಿನಲ್ ಮ್ಯಾನೇಜರ್ ಅನುರಾಗ್ ಗುಪ್ತಾ ಜೈಪುರ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಮಾನ ನಿಲ್ದಾಣ ಪ್ರಾಧಿಕಾರವು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮತ್ತು ಇತರ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ನಂತರ ವಿಮಾನ ನಿಲ್ದಾಣದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ