ಅದಾನಿ ಷೇರು ಸಾಮ್ರಾಜ್ಯ ಪತನ: ಮೊದಲ ಬಾರಿಗೆ ಪ್ರತಿಕ್ರಿಯಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
ನವದೆಹಲಿ: ಷೇರುಪೇಟೆಯಲ್ಲಿ ತೀವ್ರ ಮಾರಾಟದಿಂದ ಭಾರೀ ಕುಸಿತ ಕಂಡಿರುವ ಅದಾನಿ ಗ್ರೂಪ್ ವಿರುದ್ಧ ವಂಚನೆಯ ಆರೋಪ ಕುರಿತಂತೆ ಮೊಟ್ಟ ಮೊದಲ ಬಾರಿಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಮಾತನಾಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರ್ಕಾರ ನಿಯಂತ್ರಕರಿಗೆ ತಮ್ಮ ಕಾರ್ಯ ನಿರ್ವಹಿಸಲು ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ.
ಶನಿವಾರ ಬಜೆಟ್ ಕುರಿತು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ನಿಯಂತ್ರಕರು ತಮ್ಮ ಕೆಲಸ ನಿರ್ವಹಿಸಲಿದ್ದಾರೆ. ನೀವು ನಿನ್ನೆ ರಿಸರ್ವ್ ಬ್ಯಾಂಕ್‌ನ ಪ್ರತಿಕ್ರಿಯೆ ನೋಡಿದ್ದೀರಿ. ಮತ್ತು ಅದಕ್ಕೂ ಮೊದಲು, ಬ್ಯಾಂಕ್‌ಗಳು ಮತ್ತು ಎಲ್‌ಐಸಿ ತಮ್ಮ ಹೂಡಿಕೆ, ಸಾಲದ ಬಗ್ಗೆ ಸ್ವತಃ ತಾವೇ ಮಾಹಿತಿ ನೀಡಿವೆ. ಆದ್ದರಿಂದ, ನಿಯಂತ್ರಕರು ತಮ್ಮ ಕೆಲಸವನ್ನು ಮಾಡುತ್ತಾರೆ. ನಿಯಂತ್ರಕರು ಸರ್ಕಾರದಿಂದ ಸ್ವತಂತ್ರರಾಗಿದ್ದಾರೆ. ಅಗತ್ಯ ಬಿದ್ದಾಗ ಮಾರುಕಟ್ಟೆಗಳನ್ನು ನಿಯಂತ್ರಿಸಲು ಸೂಕ್ತವಾದ ಕ್ರಮ ತೆಗೆದುಕೊಳ್ಳಲು ಅವರಿಗೆ ಮುಕ್ತ ಅವಕಾಶ ನೀಡಲಾಗಿದೆ' ಎಂದು ಮುಂಬೈನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಹಿಂಡನ್‌ಬರ್ಗ್ ರಿಸರ್ಚ್ ಕಳೆದ ವಾರ ಅದಾನಿ ಗ್ರೂಪ್ ದಶಕಗಳಿಂದ ಲಜ್ಜೆಯಿಲ್ಲದೆ ಷೇರು ತಿರುಚುವಿಕೆ ಮತ್ತು ಲೆಕ್ಕಪತ್ರ ವಂಚನೆಯಲ್ಲಿ ತೊಡಗಿದೆ ಎಂದು ಆರೋಪಿಸಿತ್ತು. ಇದಾದ ಬಳಿಕ ಅದಾನಿ ಷೇರುಗಳು ಒಂದೇ ಸಮನೆ ಕುಸಿತ ಕಾಣುತ್ತಿದ್ದು ಹೂಡಿಕೆದಾರರಲ್ಲಿ ಭಾರೀ ಆತಂಕ ಮನೆ ಮಾಡಿದೆ. ಇದೇ ಸಂದರ್ಭದಲ್ಲಿ ಹಣಕಾಸು ಸಚಿವರು ಈ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ, ಷೇರು ಕುಸಿತದ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್ ಎಫ್‌ಪಿಒ ರದ್ದುಗೊಳಿಸಿದ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಲು ಹಣಕಾಸು ಸಚಿವರು ನಿರಾಕರಿಸಿದರು. "ಈ ದೇಶದಲ್ಲಿ ಎಷ್ಟು ಬಾರಿ ಎಫ್‌ಪಿಒಗಳನ್ನು ಹಿಂತೆಗೆದುಕೊಳ್ಳಲಾಗಿದೆ ?ಇದರಿಂದ ಎಷ್ಟು ಬಾರಿ ಭಾರತ ಇಮೇಜ್‌ಗೆ ಧಕ್ಕೆಯಾಗಿದೆ? ಮತ್ತು ಎಷ್ಟು ಬಾರಿ ಎಫ್‌ಪಿಒಗಳು ಮರಳಿ ಬಂದಿಲ್ಲ?” ಎಂದು ಅವರು ಮರು ಪ್ರಶ್ನೆ ಹಾಕಿದ್ದಾರೆ.
ಭಾರತದ ವರ್ಚಸ್ಸಿಗೆ ಧಕ್ಕೆ ಇಲ್ಲ
ಇದೇ ವೇಳೆ ಅದಾನಿ ಸಮೂಹದ ಹಿನ್ನಡೆಯಿಂದಾಗಿ ಭಾರತದ ವರ್ಚಸ್ಸಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಹೇಳಿರುವ ನಿರ್ಮಲಾ ಸೀತಾರಾಮನ್ ಅವರು, ಭಾರತವು ಉತ್ತಮವಾದ ನಿಯಮಗಳನ್ನು ಹೊಂದಿರುವ ಮತ್ತು ಉತ್ತಮವಾದ ಸರ್ಕಾರಿಸ್ವಾಮ್ಯದ ಹಣಕಾಸು ಮಾರುಕಟ್ಟೆಯನ್ನು ಹೊಂದಿದೆ. ಈ ಬಗ್ಗೆ ನಿಯಂತ್ರಕ ಸಂಸ್ಥೆ ಗಂಭೀರವಾಗಿದೆ. ಎಸ್‌ಬಿಐ ಆಗಲಿ ಅಥವಾ ಎಲ್‌ಐಸಿ ಆಗಲಿ ಅದಾನಿ ಗ್ರೂಪ್‌ಗೆ ಹೆಚ್ಚಿನ ಸಾಲವನ್ನು ನೀಡಿಲ್ಲ. ದೇಶದ ಅತೀ ದೊಡ್ಡ ಬ್ಯಾಂಕ್ ಆದ ಎಸ್‌ಬಿಐ ಮತ್ತು ದೇಶದ ಅತೀ ದೊಡ್ಡ ವಿಮಾ ಸಂಸ್ಥೆಯಾದ ಎಲ್‌ಐಸಿ ಈ ಬಗ್ಗೆ ಈಗಾಗಲೇ ವಿವರವಾದ ಮಾಹಿತಿಯನ್ನು ನೀಡಿದೆ. ಎರಡೂ ಸಂಸ್ಥೆಗಳು ನಿಯಮಕ್ಕೆ ಅನುಗುಣವಾಗಿ, ಲಾಭಕ್ಕೆ ಅನುಗುಣವಾಗಿ ಅದಾನಿ ಗ್ರೂಪ್ ಜೊತೆ ವಹಿವಾಟು ಹೊಂದಿದೆ ಎಂದು ಸ್ಪಷ್ಟಪಡಿಸಿದೆ ಎಂದು ಹೇಳಿದ್ದಾರೆ.
ದೇಶದ ಆರ್ಥಿಕತೆ ಸದೃಢ
ಅದಾನಿ ಎಫ್‌ಪಿಒ ಹಿಂತೆಗೆದುಕೊಳ್ಳುವಿಕೆಯ ಹಿನ್ನೆಲೆಯಲ್ಲಿ ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಭಾರತದ ಸ್ಥಾನವು ದುರ್ಬಲವಾಗಿದೆಯೇ ಎಂದು ಕೇಳಿದಾಗ ಹಣಕಾಸು ಸಚಿವರು, ''ದೇಶದ ಆರ್ಥಿಕತೆಯು ಸದೃಢ ಸ್ಥಿತಿಯಲ್ಲಿದ್ದು, ಅದಾನಿ ಎಂಟರ್‌ಪ್ರೈಸಸ್ ವಿವಾದದಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಎಫ್‌ಪಿಒಗಳು ಬಂದು ಹೊರಗೆ ಹೋಗುತ್ತವೆ. ದೇಶದಲ್ಲಿ ಎಫ್‌ಪಿಒಗಳನ್ನು ಹಲವಾರು ಬಾರಿ ಹಿಂತೆಗೆದುಕೊಳ್ಳಲಾಗಿದೆ ಮತ್ತು ಇದು ಭಾರತದ ಇಮೇಜ್‌ಗೆ ಯಾವುದೇ ವ್ಯತ್ಯಾಸವನ್ನು ಮಾಡಿಲ್ಲ. ಪ್ರತಿ ಮಾರುಕಟ್ಟೆಯಲ್ಲೂ ಏರಿಳಿತಗಳು ಸಂಭವಿಸುತ್ತವೆ. ಕಳೆದ 2 ದಿನಗಳಲ್ಲಿ ವಿದೇಶಿ ವಿನಿಮಯ ಮೀಸಲು $ 8 ಶತಕೋಟಿ (US$) ಹೆಚ್ಚಾಗಿದೆ. ನಮ್ಮ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಅಥವಾ ಆರ್ಥಿಕತೆಯ ಚಿತ್ರಣವು ಪರಿಣಾಮ ಬೀರಿಲ್ಲ. ಇದು ಭಾರತದ ಬಗೆಗಿನ ಗ್ರಹಿಕೆ ಮತ್ತು ಅದರ ಶಕ್ತಿ ಅಖಂಡವಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ' ಎಂದು ದೃಢವಿಶ್ವಾಸ ವ್ಯಕ್ತಪಡಿಸಿದರು.
ಈ ಹಿಂದೆ ಹಿಂಡನ್‌ಬರ್ಗ್ ವರದಿಗೆ ಪ್ರತ್ಯುತ್ತರ ನೀಡಿದ್ದ ಗೌತಮ್ ಅದಾನಿ ಒಡೆತನದ ಅದಾನಿ ಸಮೂಹ, ಷೇರು ತಿರುಚುವಿಕೆಯ ಆರೋಪಕ್ಕೆ ಯಾವುದೇ ಆಧಾರವಿಲ್ಲ ಎಂದು ಹೇಳಿತ್ತು. ಆದರೆ ಇದು ಹೂಡಿಕೆದಾರರ ಭಾವನೆಯನ್ನು ಬದಲಿಸಲು ವಿಫಲವಾಗಿದ್ದು ಶುಕ್ರವಾರವೂ ಷೇರು ಕುಸಿತ ಮುಂದುವರಿದಿತ್ತು. ಇದರಿಂದ ಸತತ 7ನೇ ದಿನವೂ ಅದಾನಿ ಸಮೂಹದ ಕಂಪನಿಗಳ ಷೇರುಗಳು ನಷ್ಟ ಅನುಭವಿಸಿದ್ದು 100 ಬಿಲಿಯನ್ ಡಾಲರ್‌ಗೂ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿವೆ.
ಅದಾನಿ ಎಂಟರ್‌ಪ್ರೈಸಸ್ ಎಫ್‌ಪಿಒ ರದ್ದು
ಅದಾನಿ ಎಂಟರ್‌ಪ್ರೈಸಸ್ 20,000 ಕೋಟಿ ರೂ.ವರೆಗಿನ ಈಕ್ವಿಟಿ ಷೇರುಗಳ ಎಫ್‌ಪಿಒ ಇತ್ತೀಚೆಗೆ ಮಾರುಕಟ್ಟೆ ಪ್ರವೇಶಕ್ಕೂ ಮುನ್ನವೇ ರದ್ದುಗೊಳಿಸಿದೆ. ಜೊತೆಗೆ ಎಫ್‌ಪಿಒ ಮೂಲಕ ಸಂಗ್ರಹಿಸಿದ ಹೂಡಿಕೆದಾರರ ಹಣವನ್ನು ಹಿಂತಿರುಗಿಸಲಾಗುತ್ತದೆ. ಕಂಪನಿಯ ಆಡಳಿತ ಮಂಡಳಿ ಕಳೆದ ಬುಧವಾರ (ಫೆ.1) ರಾತ್ರಿ ಈ ನಿರ್ಧಾರ ಕೈಗೊಂಡಿತು, ಅಲ್ಲದೆ ಈ ಕುರಿತು ಅದಾನಿ ಗ್ರೂಪ್ ಪತ್ರಿಕಾ ಪ್ರಕಟಣೆಯನ್ನು ಸಹ ಹೊರಡಿಸಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ