ಜಮ್ಮು-ಕಾಶ್ಮೀರ 370ನೇ ವಿಧಿ ರದ್ದು ವಿರುದ್ಧದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು: ಆಗಸ್ಟ್ 2ರಿಂದ ವಿಚಾರಣೆ ಆರಂಭ

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರ ಸರಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಆಗಸ್ಟ್ 2ರಿಂದ ಆಲಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರ ಸರಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಆಗಸ್ಟ್ 2ರಿಂದ ಆಲಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.

ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠವು, ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಆಗಸ್ಟ್‌ 2 ರಿಂದ ಆರಂಭಿಸುವುದಾಗಿ ಹೇಳಿದೆ. ಸೋಮವಾರ ಮತ್ತು ಶುಕ್ರವಾರ ಹೊರತುಪಡಿಸಿ ಪ್ರತಿದಿನವೂ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಹೇಳಿದೆ.

ಜುಲೈ 27 ರೊಳಗೆ ಎಲ್ಲಾ ದಾಖಲೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬೇಕು. ಜೊತೆಗೆ ಈ ದಾಖಲೆಗಳನ್ನು ನಿರ್ವಹಿಸಲು ಇಬ್ಬರು ವಕೀಲರನ್ನು ನೊಡೆಲ್ ಅಧಿಕಾರಿಗಳಾಗಿ ನೇಮಿಸಲಾಗುವುದು ಎಂದು ಪೀಠ ಹೇಳಿದೆ.

ಇದೇ ವೇಳೆ ಮುಖ್ಯ ಅರ್ಜಿದಾರರಾದ ಐಎಎಸ್ ಅಧಿಕಾರಿ ಶಾ ಫೈಸಲ್ ಮತ್ತು ಶೆಹ್ಲಾ ರಶೀದ್ ಪ್ರಕರಣದಿಂದ ಹಿಂದೆ ಸರಿಯುವುದಾಗಿ ಮತ್ತು ಅರ್ಜಿದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ಮನವಿ ಮಾಡಿದರು. ಈ‌ ಮನವಿಯನ್ನು ಸುಪ್ರೀಂಕೋರ್ಟ್ ಅನುಮತಿಸಿತು.

ಮುಖ್ಯನ್ಯಾಯಮೂರ್ತಿ ಡಿ. ಚಂದ್ರಚೂಡ್​​​ ಸೇರಿದಂತೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿಆರ್ ಗವಾಯಿ ಮತ್ತು ಸೂರ್ಯ ಕಾಂತ್ ಅವರನ್ನು ಒಳಗೊಂಡ 5 ನ್ಯಾಯಮೂರ್ತಿಗಳಿರುವ ಪೀಠ ಈ ಅರ್ಜಿಗಳನ್ನು ವಿಚಾರಣೆ ನಡೆಸಲಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಸುಮಾರು ನಾಲ್ಕು ವರ್ಷಗಳ ಬಳಿಕ ವಿಚಾರಣೆ ನಡೆಯುತ್ತಿದೆ.

370ನೇ ವಿಧಿಯನ್ನು ಆಗಸ್ಟ್ 2019 ರಲ್ಲಿ ಶಾಸಕಾಂಗ ಮತ್ತು ಕಾರ್ಯಕಾರಿ ನಿರ್ಧಾರಗಳ ಮೂಲಕ ರದ್ದುಗೊಳಿಸಲಾಯಿತು, ನಂತರ ಸಂಸತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆಯ ಪ್ರಕಾರ ರಾಜ್ಯವನ್ನು ವಿಭಜಿಸಲು ಅಂಗೀಕರಿಸಿತು.

370ನೇ ವಿಧಿ ರದ್ದತಿ ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ
ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದುಪಡಿಸಿದ ದಿನದಿಂದ ಕೇಂದ್ರಾಡಳಿತ ಪ್ರದೇಶ ಸ್ಥಿರತೆ ಮತ್ತು ಪ್ರಗತಿ ಕಂಡಿದ್ದು ಕಲ್ಲು ತೂರಾಟ ಈಗ ನಡೆಯುತ್ತಿಲ್ಲ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.

ಮೂರು ವರ್ಷಗಳ ನಂತರ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತಿರುವುದ ಹಿನ್ನೆಲೆಯಲ್ಲಿ ವಿಚಾರಣೆಗೂ ಮುನ್ನ ದಿನ ಅಫಿಡವಿಟ್ ಸಲ್ಲಿಸಿದ ಕೇಂದ್ರ ಸರ್ಕಾರ, ತನ್ನ ಕ್ರಮವನ್ನು ಸಮರ್ಥಿಸಿಕೊಂಡಿತು.

ಅಫಿಡವಿಟ್‌ನ ಪ್ರಮುಖ ವಿಚಾರಗಳು ಇಂತಿವೆ...

  • ಮೂರು ದಶಕಗಳ ಪ್ರಕ್ಷುಬ್ಧತೆ ನಂತರ ಪ್ರದೇಶದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ.
  • ಕಳೆದ ಮೂರು ವರ್ಷಗಳಲ್ಲಿ ಶಾಲಾ ಕಾಲೇಜುಗಳು ಸೇರಿದಂತೆ ಸಾರ್ವಜನಿಕ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ.
  • ಮುಷ್ಕರ, ಕಲ್ಲು ತೂರಾಟ ಹಾಗೂ ಬಂದ್‌ ಈಗ ಇತಿಹಾಸ ಸೇರಿದ ಸಂಗತಿಗಳು.
  • ವಿಧಿ ರದ್ದುಪಡಿಸಿದ ನಂತರ ಯಾವುದೇ ಕಲ್ಲು ತೂರಾಟದ ಘಟನೆಗಳು ನಡೆದಿಲ್ಲ.
  • ಶಿಕ್ಷಣ ಹಕ್ಕು ಕಾಯಿದೆಯ ಲಾಭ ಈಗ ಜಮ್ಮು ಕಾಶ್ಮೀರಕ್ಕೂ ದೊರೆಯುತ್ತಿದ್ದು ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಅನ್ವಯವಾಗುತ್ತಿದೆ.
  • ವಿಧಿ ರದ್ದುಗೊಳಿಸಿರುವುದರಿಂದ ಉಗ್ರ ಭಯೋತ್ಪಾದನಾ ಜಾಲ ತೊಡೆದುಹಾಕಲು ಮತ್ತು ಜಿಲ್ಲಾ ಅಭಿವೃದ್ಧಿ ಮಂಡಳಿಗಳಿಗೆ ಸುಗಮ ಚುನಾವಣೆ ನಡೆಸುವ ಮೂಲಕ ಮೂರು ಹಂತದ ಪಂಚಾಯತ್‌ ರಾಜ್‌ ವ್ಯವಸ್ಥೆ ಜಾರಿಗೊಳಿಸಲು ಸಾಧ್ಯವಾಗಿದೆ.
  • ವಿಧಿ ರದ್ದತಿ ಬಳಿಕ ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾಶ್ಮೀರಿ, ಡೋಗ್ರಿ, ಉರ್ದು ಮತ್ತು ಹಿಂದಿ ಭಾಷೆಗಳನ್ನು ಕೂಡ ಅಧಿಕೃತ ಭಾಷೆಯಾಗಿ ಸೇರಿಸಲಾಗಿದೆ.
  • ವಿಧಿ ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ 20ಕ್ಕೂ ಹೆಚ್ಚು ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್ ಸಲ್ಲಿಸಲಾಗಿದೆ.

ವಿಧಿ ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ 20ಕ್ಕೂ ಹೆಚ್ಚು ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಈ ಅಫಿಡವಿಟ್ ಸಲ್ಲಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com