ಬೆಂಗಳೂರಿನಲ್ಲಿ ಇಂದು ವಿಪಕ್ಷಗಳ ಸಭೆ: ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಗೈರು!
ಬೆಂಗಳೂರು: ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನ ನಡೆಯಲಿರುವ ವಿರೋಧಿ ಪಕ್ಷಗಳ ಸಭೆಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಗೈರಾಗಲಿದ್ದಾರೆ. ವಿಪಕ್ಷಗಳ ಸಭೆಗೆ ಶರದ್ ಪವಾರ್ ಗೈರಾಗುತ್ತಿರುವ ಬಗ್ಗೆ ಪವಾರ್ ಎನ್‌ಸಿಪಿ ಬಣದ ವಕ್ತಾರರು ಸುದ್ದಿಸಂಸ್ಥೆ ‘ಎಎನ್‌ಐ’ಗೆ ಖಚಿತಪಡಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದಲ್ಲಿ 24 ರಾಜಕೀಯ ಪಕ್ಷಗಳು ಇಂದು (ಜುಲೈ 17) ಬೆಂಗಳೂರಿನಲ್ಲಿ ಒಗ್ಗಟ್ಟು ತೋರಿಸಲು ಸಜ್ಜಾಗಿವೆ. ಇಂದು, ನಾಳೆ ನಡೆಯಲಿರುವ ವಿಪಕ್ಷಗಳ ಮಹಾಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ಒಬ್ಬರಾದ ಮೇಲೊಬ್ಬ ನಾಯಕರು ಬೆಂಗಳೂರಿಗೆ ಧಾವಿಸಿ ಬರುತ್ತಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಬಿಜೆಪಿಗೆ ಸೈದ್ಧಾಂತಿಕವಾಗಿ ಹಾಗೂ ರಾಜಕೀಯ ವಾಗಿ ಸವಾಲೊಡ್ಡಲು ಸಮಾನ ವೇದಿಕೆ ಸೃಷ್ಟಿಸಿ, ಗಟ್ಟಿಗೊಳಿಸುವ ಆಶಯದಿಂದ ಭಿನ್ನಾಭಿಪ್ರಾಯಗಳನ್ನೆಲ್ಲ ಬದಿಗಿಟ್ಟು ಈ ನಾಯಕರು ಒಂದಾಗುತ್ತಿದ್ದಾರೆ.
ಈ ಎಲ್ಲ ನಾಯಕರು ಬಿಜೆಪಿ ವಿರೋಧಿ ಒಕ್ಕೂಟ ರಚಿಸುವ ಸಂಬಂಧ ಮಾರ್ಗಸೂಚಿ ರೂಪಿಸಲು ಬಿಹಾರ ರಾಜಧಾನಿ ಪಟ್ನಾದಲ್ಲಿ ಮೂರು ವಾರಗಳ ಹಿಂದೆ (ಜೂನ್ 23) ಮೊದಲ ಸಭೆ ನಡೆಸಿದ್ದರು. 15ಪಕ್ಷಗಳ 32ನಾಯಕರು ಪಾಲ್ಗೊಂಡಿದ್ದರು. ಆದರೆ ಕೇಜ್ರಿವಾಲ್ ಸೇರಿ ಹಲವು ನಾಯಕರು ಆ ಸಭೆಗೆ ಕೈಕೊಟ್ಟಿದ್ದರು. ಬಳಿಕ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಸೇರಲು ನಿರ್ಧರಿಸಿದ್ದರು. ಆದರೆ, ಹವಾಮಾನ ವೈಪರೀತ್ಯ ಕಾರಣ ಆ ಸಭೆ ರದ್ದಾಗಿತ್ತು. ಇದೀಗ 2ನೇ ಬಾರಿಗೆ ಇಂದು ಮತ್ತು ನಾಳೆ ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಈ ಬಾರಿ ಒಟ್ಟು 24 ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ಜೈರಾಮ್ ರಮೇಶ್ ಮತ್ತು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ನಡೆಯಲಿರುವ ಸಭೆಗೆ ಸಿದ್ಧತೆ ಮಾಡಿಕೊಳ್ಳಲು ಭಾನುವಾರವೇ ನಗರಕ್ಕೆ ಬಂದಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ವೇಣುಗೋಪಾಲ್ ಸುದ್ದಿಗೋಷ್ಠಿ ನಡೆಸಲಿದ್ದು, ಎಷ್ಟು ವಿರೋಧ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆಂಬ ಚಿತ್ರಣ ಸಿಗಲಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಭೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಪಟ್ನಾ ಸಭೆಯಲ್ಲಿ ಅವರು ಭಾಗವಹಿಸಿರಲಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಇಂದಿನ ಸಭೆಯಲ್ಲಿ ಆರು ಪ್ರಮುಖ ವಿಚಾರಗಳ ಬಗ್ಗೆ ಮಾತುಕತೆ ನಡೆಯಲಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ