ಭುವನೇಶ್ವರ್: ಕೋಲ್ಕತ್ತಾ-ಚೆನ್ನೈ ಹೆದ್ದಾರಿಯಲ್ಲಿನ ಸೇತುವೆ ಕುಸಿತ ಕಂಡಿದ್ದು, ಬಸ್ ಒಂದರಲ್ಲಿದ್ದ 50 ಮಂದಿ ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಒಡಿಶಾದ ಜಾಜ್ಪುರ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದ್ದು, ವಾಹನ ಸೇತುವೆ ದಾಟಿ ಮುಂದೆ ಹೋದ ಕ್ಷಣಾರ್ಧದಲ್ಲೇ ಸೇತುವೆ ಕುಸಿದಿದೆ.
ಪವಾಡಸದೃಶ ರೀತಿಯಲ್ಲಿ ಪಾರಾದ ಬಸ್ ಬಾಲಾಸೋರ್ ನಿಂದ ಭುವನೇಶ್ವರ್ ಗೆ ತೆರಳುತ್ತಿತ್ತು. ಸೇತುವೆ ಕುಸಿತ ಕಂಡ ಕೋಲ್ಕತ್ತಾ-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಚಲನೆಗೆ ಅಡಚಣೆಯುಂಟಾಗಿದ್ದು, ಷಟ್ಪಥ ಹೆದ್ದಾರಿಯ ಒಂದು ಭಾಗದಲ್ಲಿ ಈ ಸೇತುವೆ ಇತ್ತು
ಸೇತುವೆಯ ಭಾಗ ಕುಸಿಯುತ್ತಿರುವುದನ್ನು ಗಮನಿಸಿದ ಟ್ರಾಕ್ಟರ್ ಚಾಲಕನೋರ್ವ ಇತರ ವಾಹನಗಳು ಅಲ್ಲಿಗೆ ತೆರಳುವುದನ್ನು ನಿಲ್ಲಿಸಿದ್ದಾರೆ.
ನಾನು ಖಂಡಿತಾರ್ ನಿಂದ ಕುವಾಕಿಯಾಗೆ ಟ್ರಾಕ್ಟರ್ ನಲ್ಲಿ ತೆರಳುತ್ತಿದ್ದಾಗ, ರಸುಲ್ಪುರ್ ಬ್ಲಾಕ್ ಕಚೇರಿಗೆ ತಲುಪಿದ ತಕ್ಷಣ, ಶಬ್ದ ಕೇಳಿಸಿತು. ಏನಾಯಿತು ಎಂಬುದನ್ನು ಊಹಿಸಿಕೊಳ್ಳುವಷ್ಟರಲ್ಲಿ ಸೇತುವೆಯ ಒಂದು ಭಾಗ ಕುಸಿತ ಕಂಡಿತು. ನಾನು ನನ್ನ ಟ್ರ್ಯಾಕ್ಟರ್ ನ್ನು ಸ್ಥಳದಲ್ಲಿ ಅಡ್ಡ ನಿಲ್ಲಿಸಿ ಹೆದ್ದಾರಿಯನ್ನು ಬಂದ್ ಮಾಡಿ ವಾಹನಗಳನ್ನು ಬೇರೆ ಮಾರ್ಗದಲ್ಲಿ ಹೋಗುವಂತೆ ಮಾಡಿದೆ ಎಂದು ಟ್ರ್ಯಾಕ್ಟರ್ ಚಾಲಕ ರಘುನಾಥ್ ಹೇಳಿದ್ದಾರೆ.
Advertisement