

ಅಹ್ಮದಾಬಾದ್: ಗುಜರಾತ್ನ ಅಹ್ಮದಬಾದ್ ನ ಎಸ್ ಜಿ ಹೆದ್ದಾರಿಯಲ್ಲಿ ಅತಿವೇಗದಿಂದ ಬಂದ ಜಾಗ್ವಾರ್ ಕಾರು ಜನರ ಮೇಲೆ ಹರಿದು ಡಿಕ್ಕಿ ಹೊಡೆದು ಕನಿಷ್ಠ ಒಂಬತ್ತು ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಎಸ್ಜಿ ಹೆದ್ದಾರಿಯ ಇಸ್ಕಾನ್ ದೇವಸ್ಥಾನದ ಹತ್ತಿರ ಸೇತುವೆ ಮೇಲೆ ಮಧ್ಯರಾತ್ರಿ 1:15 ರ ಸುಮಾರಿಗೆ ಟ್ರಕ್ ಗಳ ನಡುವೆ ಅಪಘಾತ ಸಂಭವಿಸಿದ ಸ್ಥಳದಲ್ಲಿ ನೆರೆದಿದ್ದ ಜನರ ಮೇಲೆ ಕಾರು ನುಗ್ಗಿ ಈ ಘಟನೆ ಸಂಭವಿಸಿದೆ.
ಅಪಘಾತ ಸಂಭವಿಸಿದ ಕೂಡಲೇ 12 ಮಂದಿಯನ್ನು ಆಸ್ಪತ್ರೆಗೆ ಕರೆತರಲಾಗಿದ್ದು ಅವರಲ್ಲಿ ಪೊಲೀಸ್ ಪೇದೆ ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ ಎಂದು ಸೋಲ ಸಿವಿಲ್ ಆಸ್ಪತ್ರೆಯ ವೈದ್ಯಾಧಿಕಾರಿ ಕೃಪಾ ಪಟೇಲ್ ತಿಳಿಸಿದ್ದಾರೆ.
ಅಪಘಾತದ ಬಳಿಕ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ. ಅಪಘಾತದ ನಂತರ ರಕ್ಷಣಾ ಕಾರ್ಯಾಚರಣೆ ನಡೆಸಲು ಹೆದ್ದಾರಿಯಲ್ಲಿ ಜನ ಜಮಾಯಿಸಿದ್ದರು. ಅಷ್ಟರಲ್ಲಿ ಹಿಂದಿನಿಂದ ಜಾಗ್ವಾರ್ ಕಾರು 120 ಕಿ.ಮೀ ವೇಗದಲ್ಲಿ ಬಂದು ಜನರತ್ತ ನುಗ್ಗಿತು. ಮೃತರಲ್ಲಿ ಓರ್ವ ಪೊಲೀಸ್ ಪೇದೆ ಹಾಗೂ ಓರ್ವ ಗೃಹರಕ್ಷಕ ದಳದ ಸಿಬ್ಬಂದಿಯೂ ಸೇರಿದ್ದು, ಜಾಗ್ವಾರ್ ಚಾಲಕನಿಗೂ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಹ್ಮದಾಬಾದ್ ಸಂಚಾರ ವಿಭಾಗ ಡಿಸಿಪಿ ನೀತಾ ದೇಸಾಯಿ, ಮಧ್ಯರಾತ್ರಿ ಜನರ ಮೇಲೆ ಜಾಗ್ವಾರ್ ಕಾರು ಹರಿದು 9 ಮಂದಿ ಮೃತಪಟ್ಟು 10-11 ಮಂದಿ ಗಾಯಗೊಂಡಿದ್ದಾರೆ. ಕಾರಿನ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ವೈದ್ಯರ ಸಲಹೆ ನಂತರ ಆತನನ್ನು ಕೂಡಲೇ ಬಂಧಿಸಲಾಗುವುದು ಎಂದರು.