
ನವೆದಹಲಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಗೋಹತ್ಯೆ ನಿಷೇಧ ಕಾನೂನನ್ನು ಮರುಪರಿಶೀಲಿಸುತ್ತದೆ ಎಂಬ ಹೇಳಿಕೆಗಳ ನಡುವೆ, ಗೋಹತ್ಯೆಗೆ ಒಪ್ಪಿಗೆ ನೀಡುವ ಮೂಲಕ ಕರ್ನಾಟಕದಲ್ಲಿ ತನ್ನ ಆಡಳಿತವನ್ನು ಪ್ರಾರಂಭಿಸಲು ಬಯಸುವಿರಾ ಎಂದು ಬಿಜೆಪಿ ಮಂಗಳವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಮಾತನಾಡಬೇಕು ಎಂದು ಬಿಜೆಪಿ ಮುಖಂಡ ಹಾಗೂ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪುರುಷೋತ್ತಮ ರೂಪಾಲಾ ಹೇಳಿದ್ದಾರೆ.
ಬಿಜೆಪಿ ಪತ್ರಿಕಾಗೋಷ್ಠಿಯಲ್ಲಿ ಮೋದಿ ಸರ್ಕಾರದ ಸಾಧನೆಗಳನ್ನು ಎತ್ತಿ ಹಿಡಿದ ಅವರು ಈ ಸಂಬಂಧ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಅವರು (ಕಾಂಗ್ರೆಸ್) ತಮ್ಮ ಸರ್ಕಾರವು ಗೋಹತ್ಯೆಯೊಂದಿಗೆ ತನ್ನ ಅಧಿಕಾರವನ್ನು ಪ್ರಾರಂಭಿಸಬೇಕೆಂದು ಬಯಸುತ್ತಾರೆಯೇ? ಎಂದು ಕೇಳಿದ ರೂಪಲಾ, ಖರ್ಗೆ ಮತ್ತು ಸೋನಿಯಾ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಳಿದರು.
ರಾಜ್ಯದ ಗೋಹತ್ಯೆ ನಿಷೇಧ ಕಾನೂನನ್ನು ತಮ್ಮ ಸರ್ಕಾರ ಮರುಪರಿಶೀಲಿಸುತ್ತದೆ ಎಂದು ಕರ್ನಾಟಕ ಪಶುಸಂಗೋಪನಾ ಸಚಿವ ಕೆ ವೆಂಕಟೇಶ್ ಹೇಳಿದ್ದಾರೆ.
ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದ್ದರು.
ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅಂತಿಮ ನಿಲುವು ತಳೆದರೆ, ಕೇಂದ್ರ ಸರ್ಕಾರ ಈ ವಿಚಾರದ ಬಗ್ಗೆ ಗಮನ ಹರಿಸಲಿದೆ ಎಂದ ರೂಪಾಲಾ, ಈ ಬೆಳವಣಿಗೆಯು ಕಾಂಗ್ರೆಸ್‌ನ ಮನಸ್ಥಿತಿಯನ್ನು ಮುನ್ನೆಲೆಗೆ ತಂದಿದೆ ಎಂದರು.
ತಾವು ನೋಡಿಕೊಳ್ಳುತ್ತಿರುವ ವಲಯದಲ್ಲಿ ಕೇಂದ್ರ ಸರ್ಕಾರದ ಉಪಕ್ರಮಗಳನ್ನು ಶ್ಲಾಘಿಸಿದ ಸಚಿವರು, ಸ್ವಾತಂತ್ರ್ಯಾ ನಂತರದಿಂದ 2014 ರವರೆಗೆ ಮೀನುಗಾರಿಕೆಯ ಸಂಪೂರ್ಣ ವೆಚ್ಚ 3,860 ಕೋಟಿ ರೂಪಾಯಿಗಳು. ಆದರೆ, 'ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ' ಅಡಿಯಲ್ಲಿ 20,500 ಕೋಟಿ ರೂ. ಮತ್ತು ಭಾರತದ ಕರಾವಳಿಯಲ್ಲಿ ಉದ್ಯಮವನ್ನು ಉತ್ತೇಜಿಸಲು ಮೂಲಸೌಕರ್ಯಗಳ ಅಭಿವೃದ್ಧಿಗೆ 8,000 ಕೋಟಿ ರೂಪಾಯಿಗಳ ಹೆಚ್ಚುವರಿ ಹಣವನ್ನು ಹಂಚಿಕೆ ಮಾಡಲಾಗಿದೆ ಎಂದರು.
ಇದಕ್ಕಾಗಿ ಪ್ರತ್ಯೇಕ ಸಚಿವಾಲಯ ರಚಿಸುವ ದೂರದೃಷ್ಟಿ ಮತ್ತು ಧೈರ್ಯ ತೋರಿದವರು ಪ್ರಧಾನಿ ನರೇಂದ್ರ ಮೋದಿ. ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು ಎಂದು ರೂಪಾಲಾ ಹೇಳಿದರು.
ಕೇಂದ್ರ ಸರ್ಕಾರವು ಮೊಬೈಲ್ ಪಶುವೈದ್ಯಕೀಯ ಘಟಕಗಳನ್ನು ಪ್ರಾರಂಭಿಸಿತು ಮತ್ತು ಆವರ್ತಕ ವೆಚ್ಚದ ಶೇ 60 ರಷ್ಟು ಹಣವನ್ನು ನೀಡುವ ಮೂಲಕ ರಾಜ್ಯಗಳಿಗೆ ಬೆಂಬಲ ನೀಡಿದೆ. ಗೋವುಗಳಿಗೆ ತನ್ನ ರಾಷ್ಟ್ರವ್ಯಾಪಿ ಲಸಿಕೆ ಕಾರ್ಯಕ್ರಮದ ವಿತರಣೆಯನ್ನು ಶ್ಲಾಘಿಸಿದರು.
ಪಂಚಾಯಿತಿಗಳಿಗೆ ನೇರವಾಗಿ ಮತ್ತು ಪಾರದರ್ಶಕವಾಗಿ ಹಣವನ್ನು ಕಳುಹಿಸುವ ಸರ್ಕಾರದ ನಿರ್ಧಾರದ ಬಗ್ಗೆ ದೇಶವು ಹೆಮ್ಮೆಪಡುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.
Advertisement