ಸಚಿವ ವೆಂಕಟೇಶ್ ಗೋವಧೆ ಹೇಳಿಕೆ ಖಂಡನೆ, ಜನರ ಕಿವಿಯಲ್ಲಿ ಹೂವಿಟ್ಟ ಸರ್ಕಾರ: ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ
ಕರ್ನಾಟಕದಲ್ಲಿ ವಿದ್ಯುತ್ ಬೆಲೆ ಏರಿಕೆ, ಗೋಹತ್ಯೆ ನಿಷೇಧ ಕಾಯ್ದೆ ರದ್ದತಿ, ಹಾಲಿಗೆ ಪ್ರೋತ್ಸಾಹ ಧನ ಕಡಿತ ವಿರೋಧಿಸಿ ವಿರೋಧ ಪಕ್ಷ ಬಿಜೆಪಿ ಬೀದಿಗಿಳಿದು ಹೋರಾಟ ನಡೆದಿದ್ದು ನಿನ್ನೆ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಇಂದು ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಪ್ರತಿಭಟನೆ ನಡೆಸುತ್ತಿದೆ.
Published: 06th June 2023 12:48 PM | Last Updated: 06th June 2023 07:31 PM | A+A A-

ಹಸುಗಳನ್ನು ತಂದು ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಬೆಂಗಳೂರು: ಕರ್ನಾಟಕದಲ್ಲಿ ವಿದ್ಯುತ್ ಬೆಲೆ ಏರಿಕೆ, ಗೋಹತ್ಯೆ ನಿಷೇಧ ಕಾಯ್ದೆ ರದ್ದತಿ, ಹಾಲಿಗೆ ಪ್ರೋತ್ಸಾಹ ಧನ ಕಡಿತ ವಿರೋಧಿಸಿ ವಿರೋಧ ಪಕ್ಷ ಬಿಜೆಪಿ ಬೀದಿಗಿಳಿದು ಹೋರಾಟ ನಡೆದಿದ್ದು ನಿನ್ನೆ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಇಂದು ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಪ್ರತಿಭಟನೆ ನಡೆಸುತ್ತಿದೆ.
ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಹಾಲಿಗೆ ರೈತರಿಗೆ ಪ್ರೋತ್ಸಾಹ ಧನವನ್ನು ಪ್ರತಿ ಲೀಟರ್ ಗೆ 5 ರೂಪಾಯಿ ನೀಡಲಾಗುತ್ತಿತ್ತು. ಇದೀಗ ಬಂದಿರುವ ಕಾಂಗ್ರೆಸ್ ಸರ್ಕಾರ 1.5 ರೂಪಾಯಿ ಕಡಿತ ಮಾಡಿದೆ. ಇದರಿಂದ ಬಡ ರೈತರಿಗೆ ತೊಂದರೆಯಾಗಲಿದೆ. ರಾಜ್ಯದ ರೈತರ ಹಿತಾಸಕ್ತಿಯನ್ನು ಕಾಪಾಡಬೇಕು. ಹಾಲಿನ ಫ್ರೋತ್ಸಾಹಧನ ಕಡಿಮೆ ಮಾಡದಿರಲು ಒತ್ತಾಯಿಸಿದೆ.
ಮೊನ್ನೆಯವರೆಗೂ 200 ಯುನಿಟ್‌ವರೆಗೆ ವಿದ್ಯುತ್ ಉಚಿತ ಎಂದಿದ್ದ ಸಿದ್ದರಾಮಯ್ಯ ಸರ್ಕಾರ, ಈಗ 80 ಯೂನಿಟ್‌ವರೆಗೆ ಎಂದು ಆದೇಶ ಹೊರಡಿಸಿ ಜನವಿರೋಧಿ ನೀತಿ ಪ್ರದರ್ಶಿಸಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು ಆರೋಪಿಸಿದ್ದರು.
ಇದನ್ನೂ ಓದಿ: ಬಿಜೆಪಿಯ ಗೋಹತ್ಯೆ ನಿಷೇಧ ಕಾಯ್ದೆಯನ್ನೂ ಸರ್ಕಾರ ಮರುಪರಿಶೀಲಿಸಲಿದೆ: ಸಚಿವ
ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಸುಗಳನ್ನು ತಂದು ಪ್ರತಿಭಟನೆ: ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು ಬೆಳಗ್ಗೆಯಿಂದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಜಾರಿಗೆ ತರದೆ ಜನರನ್ನು ವಂಚಿಸುತ್ತಿದೆ ಎಂದು ಆಪಾದಿಸಿದರು.
ಅಲ್ಲದೆ ಸಚಿವ ಕೆ ವೆಂಕಟೇಶ್ ಅವರು ಎಮ್ಮೆ, ಕೋಣೆಗಳನ್ನು ವಧಿಸುವುದಾದರೆ ವಯಸ್ಸಾದ ಹಸುಗಳನ್ನು ಏಕೆ ಕೊಲ್ಲಬಾರದು ಎಂಬ ಹೇಳಿಕೆಯನ್ನು ವಿರೋಧಿಸಿ ಹಸುಗಳನ್ನು ಪ್ರತಿಭಟನಾ ಸ್ಥಳಕ್ಕೆ ತಂದು ಪ್ರತಿಭಟನೆ ನಡೆಸಿದರು.
ಬಿಟ್ಟಿ ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಮತದಾರರನ್ನು ನಂಬಿಸಿ, ವಾಮಮಾರ್ಗದಿಂದ ಅಧಿಕಾರಕ್ಕೆ ಬಂದು, ಇದೀಗ ಹತ್ತಾರು ಷರತ್ತುಗಳ ಮೂಲಕ ಜನರನ್ನು ವಂಚಿಸುತ್ತಾ, ಕುಹಕ ನಗು ಬೀರುತ್ತಿರುವ #HitlerSarkara ದ ನಿಜಬಣ್ಣವನ್ನು ರಾಜ್ಯ ಗಮನಿಸುತ್ತಿದೆ, ಕಾಂಗ್ರೆಸ್ ಜನರ ಕಿವಿ ಮೇಲೆ ಹೂವಿಟ್ಟಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.