ಟಿಪ್ಪು, ಔರಂಗಜೇಬ್ ವೈಭವೀಕರಿಸಿ ಪೋಸ್ಟ್; ಕೊಲ್ಲಾಪುರದಲ್ಲಿ ಹಿಂಸಾಚಾರ; ಸೆಕ್ಷನ್ 144 ಜಾರಿ, ಬೆಳಗಾವಿಯಲ್ಲಿ ಹೈ ಅಲರ್ಟ್

ಟಿಪ್ಪು ಸುಲ್ತಾನ್, ಔರಂಗಜೇಬ್‌ನನ್ನು ವೈಭವೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದನ್ನು ಖಂಡಿಸಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಹಿಂದೂಪರ ಸಂಘಟನೆಗಳು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈ ಹಿನ್ನೆಲೆಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಕೊಲ್ಲಾಪುರ
ಕೊಲ್ಲಾಪುರ

ಕೊಲ್ಲಾಪುರ (ಮಹಾರಾಷ್ಟ್ರ): ಟಿಪ್ಪು ಸುಲ್ತಾನ್, ಔರಂಗಜೇಬ್‌ನನ್ನು ವೈಭವೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದನ್ನು ಖಂಡಿಸಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಹಿಂದೂಪರ ಸಂಘಟನೆಗಳು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈ ಹಿನ್ನೆಲೆಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.

ನೆರೆಯ ಕೊಲ್ಲಾಪುರದಲ್ಲಿ ಹಿಂಸಾಚಾರ ನಡೆದ ಹಿನ್ನೆಲೆ ಮಹಾರಾಷ್ಟ್ರ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

ಮುಸ್ಲಿಂ ಸಂಘಟನೆ ಸದಸ್ಯರು ಟಿಪ್ಪು ಮತ್ತು ಮೊಘಲ್ ದೊರೆ ಔರಂಗಜೇಬನ ಫೋಟೊ ಮತ್ತು ಆಕ್ಷೇಪಾರ್ಹ ಆಡಿಯೋ ಒಂದನ್ನು ಹಂಚಿಕೊಂಡಿದ್ದು, ಒಂದು ಕೋಮಿನ ಸದಸ್ಯರು ಅದನ್ನು ತಮ್ಮ ಸ್ಟೇಟಸ್, ಪ್ರೊಫೈಲ್ ಗಳಲ್ಲಿ ಹಾಕಿಕೊಂಡಿದ್ದರು.

ಟಿಪ್ಪು ಸುಲ್ತಾನ್ ಚಿತ್ರವನ್ನು ಆಕ್ಷೇಪಾರ್ಹ ‘ಆಡಿಯೋ’ ಸಂದೇಶದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಳಸಿರುವುದನ್ನು ಖಂಡಿಸಿ ಹಿಂದು ಸಂಘಟನೆಗಳು ‘ಕೊಲ್ಹಾಪುರ ಬಂದ್’ಗೆ ಕರೆ ನೀಡಿದ್ದವು.

ಮತ್ತೊಂದು ವರದಿಯ ಪ್ರಕಾರ ಸ್ಥಳೀಯರು ಮೊಘಲ್ ಚಕ್ರವರ್ತಿ ಔರಂಗಜೇಬ್ ಅನ್ನು ಬೆಂಬಲಿಸುವ ಪೋಸ್ಟ್‌ಗಳನ್ನು ಹಾಕಿರುವುದು ವಿವಾದದ ಕಿಡಿಗೆ ತುಪ್ಪ ಸುರಿದಂತಾಗಿದೆ.

ಇದನ್ನು ವಿರೋಧಿಸಿ ಶಿವಸೇನೆಯ ಸದಸ್ಯರು ಬೀದಿಗಿಳಿದಿದ್ದು ಟಿಪ್ಪು, ಔರಂಗಜೇಬನ್ನು ವೈಭವೀಕರಿಸಿದವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆ ವೇಳೆ ಕಲ್ಲು ತೂರಾಟಗಳು ನಡೆದಿವೆ. ಬಳಿಕ ಪರಿಸ್ಥಿತಿ ಹಿಂಸಾಚಾರ ರೂಪ ಪಡೆದುಕೊಂಡಿದೆ.

ಘಟನೆ ಬಳಿಕ ಪೊಲೀಸ್ ಭದ್ರತೆ ಹೆಚ್ಚಿಸಿದ್ದು ಉದ್ರಿಕ್ತರನ್ನು ಚದುರಿಸಿದ್ದಾರೆ. ಹೆಚ್ಚುವರಿ ಪಡೆ ನಿಯೋಜನೆ ಮಾಡಲಾಗಿದೆ. ಇದೀಗ ಕೊಲ್ಲಾಪುರದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಹಿಂಸಾಚಾರ ಹಿನ್ನೆಲೆ ಕಳೆದ ರಾತ್ರಿ ಕೊಲ್ಲಾಪುರ ಜಿಲ್ಲಾ ಉಸ್ತುವಾರಿ ಸಚಿವ ದೀಪಕ್ ಕೇಸರಕರ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಿತು. ಸರ್ವಪಕ್ಷ ನಾಯಕರು, ವಿವಿಧ ಸಮುದಾಯಗಳ ಪ್ರಮುಖ ನಾಯಕರ ಜೊತೆ ಶಾಂತಿ ಸಭೆ ನಡೆದಿದೆ.

ಸಚಿವ ದೀಪಕ್ ಕೇಸರಕರ್, ಸಭೆಯಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.  ಹಾಗೂ ಕೊಲ್ಲಾಪುರ ಡಿಸಿ ಭಗವಾನ್ ಕಾಂಬಳೆ, ಎಸ್‌ಪಿ ಮಹೇಂದ್ರ ಪಂಡಿತ್ ಸೇರಿ ಹಿರಿಯ ಅಧಿಕಾರಿಗಳ ಜೊತೆಗೂ ಸಭೆ ನಡೆಸಿದರು. ಇದೀಗ  ಜೂನ್ 19ರವರೆಗೆ ಕೊಲ್ಲಾಪುರದಲ್ಲಿ ನಿಷೇಧಾಜ್ಞೆ ಮುಂದುವರಿಕೆಗೆ ಕೊಲ್ಲಾಪುರ ಜಿಲ್ಲಾಧಿಕಾರಿ ಭಗವಾನ್ ಕಾಂಬಳೆ ಆದೇಶ ಹೊರಡಿಸಿದ್ದಾರೆ.

ಇಂದು(ಜೂನ್ 08) ಮಧ್ಯರಾತ್ರಿ 12 ಗಂಟೆವರೆಗೆ ಕೊಲ್ಲಾಪುರದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ನಿನ್ನೆ ಸಂಜೆ 5 ಗಂಟೆಯಿಂದಸೇ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ.

ಘಟನೆ ಸಂಬಂಧ ಈವರೆಗೆ 36 ಮಂದಿಯನ್ನು ಬಂಧಿಸಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಗೃಹ ಸಚಿವ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.

ನಿರ್ದಿಷ್ಟ ಸಮುದಾಯದ ಒಂದು ವರ್ಗದ ಜನರು ಮೊಘಲ್ ಚಕ್ರವರ್ ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಅವರನ್ನು ವೈಭವೀಕರಿಸುವುದು ಕೇವಲ ಕಾಕತಾಳೀಯವಾಗಿರಲು ಸಾಧ್ಯವಿಲ್ಲ ಎಂದು ಫಡ್ನವಿಸ್ ಹೇಳಿದ್ದಾರೆ.

ಈ ನಡುವೆ ಜನರು ಶಾಂತವಾಗಿರುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮನವಿ ಮಾಡಿದ್ದು, ಜನರು ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಎಸ್ಪಿ ಮಹೇಂದ್ರ ಪಂಡಿತ್ ಅವರು ಮಾತನಾಡಿ, ಕೊಲ್ಹಾಪುರದಲ್ಲಿ ನಿನ್ನೆ ಸಂಭವಿಸಿದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಆಸ್ತಿ ಹಾನಿ ಮತ್ತು ಕಾನೂನುಬಾಹಿರ ಸಭೆ ಆರೋಪದ ಮೇಲೆ 36 ಜನರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ನಿನ್ನೆ ಮಧ್ಯಾಹ್ನದಿಂದ ಕೊಲ್ಹಾಪುರ ನಗರ ಮತ್ತು ಜಿಲ್ಲೆಯ ಪರಿಸ್ಥಿತಿ ಸಾಮಾನ್ಯವಾಗಿದೆ. ಎಸ್‌ಆರ್‌ಪಿಎಫ್, 300 ಪೊಲೀಸ್ ಕಾನ್‌ಸ್ಟೆಬಲ್‌ಗಳು ಮತ್ತು 60 ಅಧಿಕಾರಿಗಳನ್ನು ಭದ್ರೆತೆಗೆ ನಿಯೋಜನೆಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲೂ ಹೈ ಅಲರ್ಟ್
ಮತ್ತೊಂದೆಡೆ ಗಡಿ ಜಿಲ್ಲೆ ಬೆಳಗಾವಿಯ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು ಮಧ್ಯರಾತ್ರಿಯವರೆಗೂ ಬೆಳಗಾವಿ ಜಿಲ್ಲೆ ಗಡಿ ಗ್ರಾಮಗಳಲ್ಲಿ ಗಸ್ತು ತಿರುಗಿ ಪೊಲೀಸರು ಎಚ್ಚರಿಕೆ ವಹಿಸಲಿದ್ದಾರೆ.

ಬೆಳಗಾವಿ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ನಿಪ್ಪಾಣಿ, ಕೊಗನೊಳ್ಳಿ, ಬೋರಗಾಂವ್​​, ಅಕ್ಕೋಲ, ಎಕ್ಸಂಬಾ, ಬೇಡಕಿಹಾಳ, ಮಣಕಪುರ, ಸಿದ್ನಾಳ, ಮಂಗೂರ, ಚಂದೂರ ಸೇರಿ ಹಲವು ಗ್ರಾಮಗಳಲ್ಲಿ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ವದಂತಿಗಳಿಗೆ ಕಿವಿಗೊಡದಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com