ಪೋರಬಂದರ್ (ಗುಜರಾತ್): ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿದ್ದ ವಿದೇಶಿ ಪ್ರಜೆ ಸೇರಿದಂತೆ ನಾಲ್ವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಗುಜರಾತ್ ಪೋರಬಂದರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸುವ ಸಲುವಾಗಿ ಕೆಲ ದಿನಗಳಿಂದಲೂ ಈ ಪ್ರದೇಶದಲ್ಲಿ ಎಟಿಎಸ್ ಸಕ್ರಿಯವಾಗಿತ್ತು. ಕಾರ್ಯಾಚರಣೆ ವೇಳೆ ಶಂಕೆ ಮೇರೆಗೆ ವಿದೇಶಿ ಪ್ರಜೆ ಸೇರಿ ನಾಲ್ವರನ್ನು ಬಂಧನಕ್ಕೊಳಪಡಿಸಿದ್ದಾರೆ. ವಿಚಾರಣೆ ವೇಳೆ ನಾಲ್ವರಿಗೆ ಅಂತರಾಷ್ಟ್ರೀಯ ಉಗ್ರ ಸಂಘಟನೆಯೊಂದಿಗೆ ನಂಟು ಇರುವುದು ಕಂಡು ಬಂದಿದೆ.
ಎಟಿಎಸ್ ಕಾರ್ಯಾಚರಣೆಯನ್ನು ಡಿಐಜಿ ದೀಪೆನ್ ಭದ್ರನ್ ನೇತೃತ್ವ ವಹಿಸಿದ್ದರು, ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಡಿಐಜಿ ದೀಪಕ್ ಭದ್ರನ್ (ಡಿಐಜಿ ದೀಪನ್ ಭದ್ರನ್), ಎಸ್ಪಿ ಸುನೀಲ್ ಜೋಶಿ (ಐಪಿಎಸ್), ಡಿವೈಎಸ್ಪಿ ಕೆಕೆ ಪಟೇಲ್ (ಕೆಕೆ ಪಿಟೇಲ್), ಡಿವೈಎಸ್ಪಿ ಶಂಕರ್ ಚೌಧರಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಇದೀಗ ಪೋರಬಂದರ್'ಗೆ ಭೇಟಿ ನೀಡಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ವಿದೇಶಿ ಪ್ರಜೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಸ್ಥಳೀಯ ವ್ಯಕ್ತಿಗಳನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.
ಬಂಧಿತ ನಾಲ್ವರು ಆರೋಪಿಗಳು ಇಸಿಸ್ ಗುಂಪಿನೊಂದಿಗೆ ಸಂಬಂಧ ಹೊಂದಿದ್ದು, ಇವರೆಲ್ಲರೂ ಕಳೆದ ಒಂದು ವರ್ಷದಿಂದ ಪರಸ್ಪರ ಸಂಪರ್ಕದಲ್ಲಿದ್ದರು. ದಾಳಿ ವೇಳೆ ಅನೇಕ ನಿಷೇಧಿತ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇದಕ್ಕೂ ಮೊದಲು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಇಸಿಸ್‌ನೊಂದಿಗೆ ಸಂಬಂಧ ಹೊಂದಿದ್ದ ಮೂವರನ್ನು ಬಂಧಿಸಿತ್ತು.
ಬಂಧಿತ ಮೂವರನ್ನು ಸೈಯದ್ ಮಮೂರ್ ಅಲಿ, ಮೊಹಮ್ಮದ್ ಆದಿಲ್ ಖಾನ್ ಮತ್ತು ಮೊಹಮ್ಮದ್ ಶಾಹಿದ್ ಎಂದು ಗುರುತಿಸಲಾಗಿದೆ.
Advertisement