ಬಿಪರ್ಜೋಯ್ ಚಂಡಮಾರುತ: ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು ಉನ್ನತ ಮಟ್ಟದ ಸಭೆ

ಗುಜರಾತ್ ಮತ್ತು ಮಹಾರಾಷ್ಟ್ರ, ಕರ್ನಾಟಕದಲ್ಲಿ ವ್ಯಾಪಕ ಪರಿಣಾಮ ಬೀರುತ್ತಿರುವ ಬಿಪರ್ಜೋಯ್ ಚಂಡಮಾರುತ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.
ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಪ್ರಧಾನಿ ಮೋದಿ.
ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಪ್ರಧಾನಿ ಮೋದಿ.

ನವದೆಹಲಿ: ಗುಜರಾತ್ ಮತ್ತು ಮಹಾರಾಷ್ಟ್ರ, ಕರ್ನಾಟಕದಲ್ಲಿ ವ್ಯಾಪಕ ಪರಿಣಾಮ ಬೀರುತ್ತಿರುವ ಬಿಪರ್ಜೋಯ್ ಚಂಡಮಾರುತ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.

ನೈಋತ್ಯ ಮುಂಗಾರಿನ ಜೊತೆಗೆ ದೇಶದ ವಿವಿಧ ರಾಜ್ಯಗಳಲ್ಲಿ 'ಬಿಪೊರ್ ಜಾಯ್' ಚಂಡಮಾರುತ ಅಬ್ಬರ ಜೋರಾಗಿದ್ದು, ಚಂಡಮಾರುತ ತೀವ್ರ ಸ್ವರೂಪ ಪಡೆಯುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಈ ಮಹತ್ವದ ಸಭೆ ನಡೆಯಲಿದ್ದು, ಸೋಮವಾರ 'ಬಿಪೊರ್ ಜಾಯ್' ಚಂಡಮಾರುತ ಗುಜರಾತ್‌ನ ಕಚ್ ಪ್ರದೇಶದಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿ ಕುರಿತು ಮಾಹಿತಿ ಪಡೆಯಲು ಉನ್ನತ ಮಟ್ಟದ ಸಭೆಯನ್ನು ಕರೆದಿದ್ದಾರೆ.

ಗುಜರಾತ್ ರಾಜ್ಯದ ಕರಾವಳಿ ಪ್ರದೇಶಗಳಾದ ಸೌರಾಷ್ಟ್ರ ಮತ್ತು ಕಚ್ ಪ್ರದೇಶಕ್ಕೆ ಭಾರತೀಯ ಹವಾಮಾನ ಇಲಾಖೆ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಈ ಪ್ರದೇಶಗಳಲ್ಲಿ ಸಮುದ್ರದ ಅಲೆಗಳ ಅಬ್ಬರವೂ ಹೆಚ್ಚಾಗಿರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಬುಧವಾರದ ತನಕ ಇದೇ ಪರಿಸ್ಥಿತಿ ಇರಲಿದೆ ಎಂದು ಅಂದಾಜಿಸಲಾಗಿದೆ. ಜೂನ್ 13 ರಿಂದ 15ರ ತನಕ ಕಚ್, ಜಾಮ್‌ ನಗರ, ಮೊರ್ಬಿ, ಸೋಮನಾಥ್, ಪೋರ್ ಬಂದರ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭಾರಿ ಗಾಳಿಯ ಜೊತೆ ಮಳೆಯಾಗಲಿದೆ. ಗಾಳಿಯ ವೇಗ ಗಂಟೆಗೆ ಸುಮಾರು 150 ಕಿ. ಮೀ. ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಗುಜರಾತ್‌ನಲ್ಲಿ ಚಂಡಮಾರುತ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಸಹ ಸಭೆ ನಡೆಸಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಮಳೆ
'ಬಿಪೊರ್ ಜಾಯ್' ಚಂಡಮಾರುತದ ಪರಿಣಾಮವಾಗಿ ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಮುಂಬೈನ ಸಮುದ್ರ ತೀರಕ್ಕೆ ಭಾರೀ ಗಾತ್ರದ ಅಲೆಗಳು ಬಂದು ಅಪ್ಪಳಿಸುತ್ತಿವೆ. ಪ್ರತಿಕೂಲ ಹವಾಮಾನದ ಕಾರಣ ಮುಂಬೈ ವಿಮಾನ ನಿಲ್ದಾಣದ ರನ್‌ ವೇ ಸಹ ಮುಚ್ಚಲಾಗಿದೆ. ಚಂಡಮಾರುತದ ಪರಿಣಾಮವಾಗಿ ಗುಜರಾತ್‌ನ ಕರಾವಳಿಗೆ ಭಾರಿ ಗಾತ್ರದ ಅಲೆಗಳು ಬಂದು ಅಪ್ಪಳಿಸುತ್ತಿವೆ. ಮಹಾರಾಷ್ಟ್ರದ ಥಾಣೆ, ರಾಯಗಢ, ಮುಂಬೈ ಮತ್ತು ಫಾಲ್ಗಾರ್‌ಗಳಲ್ಲಿ ಚಂಡಮಾರುತದ ಪರಿಣಾಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. 

ಭಾರತದ ಹವಾಮಾನ ಇಲಾಖೆ ತನ್ನ ಇತ್ತೀಚಿನ ಬುಲೆಟಿನ್‌ನಲ್ಲಿ, 'ಅತ್ಯಂತ ತೀವ್ರವಾದ ಚಂಡಮಾರುತವು' ಉತ್ತರ-ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ ಮತ್ತು ಜೂನ್ 15 ರ ಮಧ್ಯಾಹ್ನದ ವೇಳೆಗೆ ಸೌರಾಷ್ಟ್ರ ಮತ್ತು ಕಚ್ ಮತ್ತು ಮಾಂಡ್ವಿ (ಗುಜರಾತ್) ಮತ್ತು ಕರಾಚಿ (ಪಾಕಿಸ್ತಾನ) ನಡುವೆ ಪಾಕಿಸ್ತಾನದ ಪಕ್ಕದ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು ಹೇಳಿದೆ. ಗಂಟೆಗೆ 125-135 ಕಿಲೋಮೀಟರ್‌ಗಳ (kmph) ಗರಿಷ್ಠ ನಿರಂತರ ಗಾಳಿಯ ವೇಗದೊಂದಿಗೆ 150 kmph ಗೆ ಗಾಳಿ ಬೀಸುವ 'ಅತ್ಯಂತ ತೀವ್ರವಾದ ಚಂಡಮಾರುತ'ವಾಗಿ ಬಿಪೋರ್ಜೋಯ್ ಚಂಡಮಾರುತ ಬದಲಾಗಿದೆ ಎಂದು ಹೇಳಿದೆ.

ಇನ್ನು ಭಾನುವಾರ ರಾತ್ರಿಯ ಹೊತ್ತಿಗೆ, ಬಿಪರ್ಜೋಯ್ ಚಂಡಮಾರುತವು ಮುಂಬೈನಿಂದ ಪಶ್ಚಿಮಕ್ಕೆ 540 ಕಿಮೀ, ಪೋರಬಂದರ್‌ನಿಂದ ನೈಋತ್ಯಕ್ಕೆ 360 ಕಿಮೀ, ದೇವಭೂಮಿ ದ್ವಾರಕಾದಿಂದ 400 ಕಿಮೀ ನೈಋತ್ಯ, ನಲಿಯಾದಿಂದ 490 ಕಿಮೀ ನೈಋತ್ಯ ಮತ್ತು ಪಾಕಿಸ್ತಾನದ ಕರಾಚಿಯಿಂದ ದಕ್ಷಿಣಕ್ಕೆ 660 ಕಿಮೀ ದೂರದಲ್ಲಿದೆ ಎಂದು ಹೇಳಿತ್ತು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com