ಬಿಸಿಲ ಝಳಕ್ಕೆ 24 ಗಂಟೆಗಳಲ್ಲಿ 34 ಸಾವು: ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಘಟನೆ!

ಉತ್ತರ ಭಾರತದಲ್ಲಿ ಬಿಪೋರ್ಜೋಯ್ ಚಂಡಮಾರುತದ ಹೊರತಾಗಿಯೂ ಬಿಸಿಲ ಝಳ ಮುಂದುವರೆದಿದ್ದು, ಹೀಟ್ ಸ್ಟ್ರೋಕ್ ಗೆ ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 34 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರ ಪ್ರದೇಶದಲ್ಲಿ ಹೀಟ್ ಸ್ಟ್ರೋಕ್
ಉತ್ತರ ಪ್ರದೇಶದಲ್ಲಿ ಹೀಟ್ ಸ್ಟ್ರೋಕ್

ಲಖನೌ: ಉತ್ತರ ಭಾರತದಲ್ಲಿ ಬಿಪೋರ್ಜೋಯ್ ಚಂಡಮಾರುತದ ಹೊರತಾಗಿಯೂ ಬಿಸಿಲ ಝಳ ಮುಂದುವರೆದಿದ್ದು, ಹೀಟ್ ಸ್ಟ್ರೋಕ್ ಗೆ ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 34 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲಾ ಆಸ್ಪತ್ರೆಯಲ್ಲಿ ತೀವ್ರ ಬಿಸಿಲಿಗೆ ಕನಿಷ್ಠ 34 ಮಂದಿ ಪ್ರಾಣ ಕಳೆದುಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಲ್ಲಿ ಹೆಚ್ಚಿನವರು 60 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಆರೋಗ್ಯ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮುಖ್ಯ ವೈದ್ಯಾಧಿಕಾರಿ(ಸಿಎಂಒ) ಡಾ.ಜಯಂತ್ ಕುಮಾರ್ ಮಾತನಾಡಿ, ಜಿಲ್ಲೆಯು ತೀವ್ರ ಬಿಸಿಲಿನಿಂದ ತತ್ತರಿಸುತ್ತಿದೆ. ಜನರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕಳೆದ ಎರಡು ದಿನದಲ್ಲಿ 34 ಮಂದಿ ಸಾವನ್ನಪ್ಪಿದ್ದು, ಜೂ.15ರಂದು 23 ಮಂದಿ ಹಾಗೂ ಜೂ.16ರಂದು 11 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ ಆಸ್ಪತ್ರೆಗೆ ದಾಖಲಾಗಿರುವ ಮೃತರೆಲ್ಲರೂ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದರೊಂದಿಗೆ, ವಯಸ್ಸಾದವರಿಗೆ ಬಿಸಿಲಿನ ತಾಪವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ(ಸಿಎಂಎಸ್) ದಿವಾಕರ್ ಸಿಂಗ್ ಮಾತನಾಡಿ, ರೋಗಿಗಳು ಮತ್ತು ಸಿಬ್ಬಂದಿಗೆ ವಿಶ್ರಾಂತಿ ನೀಡಲು ಮತ್ತು ಶಾಖದ ಹೊಡೆತದ ಅಪಾಯವನ್ನು ತಡೆಗಟ್ಟಲು ಆಸ್ಪತ್ರೆಯಲ್ಲಿ ಫ್ಯಾನ್‌ಗಳು, ಕೂಲರ್‌ಗಳು ಮತ್ತು ಏರ್ ಕಂಡಿಷನರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಹೀಟ್ ಸ್ಟ್ರೋಕ್ ತಡೆಗಟ್ಟಲು ಮುನ್ನೆಚ್ಚರಿಕೆಗಳನ್ನು ಅನುಸರಿಸಲು ಜನರಿಗೆ ಸಲಹೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಬಲ್ಲಿಯಾ ಜೊತೆಗೆ ಇಡೀ ಮಧ್ಯ ಮತ್ತು ಪೂರ್ವ ಉತ್ತರ ಪ್ರದೇಶವು ಭಾರಿ ಬಿಸಿಲಿನಿಂದ ತತ್ತರಿಸುತ್ತಿದ್ದು, ಭಾರತೀಯ ಹವಾಮಾನ ದತ್ತಾಂಶ(IMD) ಬಲ್ಲಿಯಾದಲ್ಲಿ ಶುಕ್ರವಾರ ಗರಿಷ್ಠ ತಾಪಮಾನ 42.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಇದು ಸಾಮಾನ್ಯಕ್ಕಿಂತ 4.7 ಡಿಗ್ರಿ ಹೆಚ್ಚಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com