ಅಸ್ಸಾಂ: ಠಾಣೆಯಲ್ಲೇ ಬಾಲಕಿ ಮೇಲೆ ಪೊಲೀಸ್ ಅಧಿಕಾರಿ ಅತ್ಯಾಚಾರ

ಅಸ್ಸಾಂನ ನಲ್ಬರಿ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿಯೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಮತ್ತು "ಆಕ್ಷೇಪಾರ್ಹ ಚಿತ್ರಗಳನ್ನು" ತೆಗೆದ ಆರೋಪದ ಮೇಲೆ ಪ್ರಸ್ತುತ ತಲೆಮರೆಸಿಕೊಂಡಿರುವ ಆರೋಪಿ ಇನ್ಸ್‌ಪೆಕ್ಟರ್ ನನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಲ್ಬರಿ: ಅಸ್ಸಾಂನ ನಲ್ಬರಿ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿಯೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಮತ್ತು "ಆಕ್ಷೇಪಾರ್ಹ ಚಿತ್ರಗಳನ್ನು" ತೆಗೆದ ಆರೋಪದ ಮೇಲೆ ಪ್ರಸ್ತುತ ತಲೆಮರೆಸಿಕೊಂಡಿರುವ ಆರೋಪಿ ಇನ್ಸ್‌ಪೆಕ್ಟರ್ ನನ್ನು ಅಮಾನತುಗೊಳಿಸಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಘಟನೆಯ ಕುರಿತು ತನಿಖೆಗೂ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.

17 ವರ್ಷದ ಬಾಲಕಿ ಸೋಮವಾರ ಘೋಗ್ರಾಪರ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ತನಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಮತ್ತು ಪೊಲೀಸ್ ಠಾಣೆಯೊಳಗೆ ತನ್ನ ಆಕ್ಷೇಪಾರ್ಹ ಫೋಟೋಗಳನ್ನು ತೆಗೆಯಲಾಗಿದೆ ಎಂದು ಆರೋಪಿಸಿದ್ದಾರೆ.

ಬಾಲ್ಯವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 21 ರಂದು ಈ ಬಾಲಕಿ ಮತ್ತು ಪುರುಷನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು.

ಈ ಸಂಬಂಧ ಟ್ವೀಟ್ ಮಾಡಿರುವ ಪೊಲೀಸ್ ಮಹಾನಿರ್ದೇಶಕ ಜಿಪಿ ಸಿಂಗ್ ಅವರು, ಇನ್ಸ್‌ಪೆಕ್ಟರ್ ಪ್ರಕರಣದ ಪ್ರಮುಖ ಶಂಕಿತ ಆರೋಪಿಯಾಗಿದ್ದು, ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

"ಆರೋಪಿ ಪೊಲೀಸ್ ಇನ್ಸ್‌ಪೆಕ್ಟರ್ ಬಗ್ಗೆ ನಲ್ಬರಿ ಪೊಲೀಸರಿಗೆ ಯಾರಾದರೂ ಮಾಹಿತಿ ನೀಡಿದರೆ ಸೂಕ್ತ ಬಹುಮಾನ ನೀಡಲಾಗುವುದು" ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com