
ನವದೆಹಲಿ: ಕರುಳು ಹಿಂಡುವ ಮತ್ತು ಭಯಾನಕ ಘಟನೆಯಲ್ಲಿ, ಎರಡು ದಿನಗಳ ಅಂತರದಲ್ಲಿ ರಾಷ್ಟ್ರ ರಾಜಧಾನಿಯ ನೈಋತ್ಯ ಪ್ರದೇಶದಲ್ಲಿ 7 ಮತ್ತು 5 ವರ್ಷ ವಯಸ್ಸಿನ ಸೋದರರನ್ನು ಬೀದಿನಾಯಿಗಳ ಗುಂಪೊಂದು ದಾಳಿ ನಡೆಸಿ ಕೊಂದಿವೆ.
ಮೃತ ಮಕ್ಕಳನ್ನು ಆನಂದ್ ಮತ್ತು ಆತನ ಕಿರಿಯ ಸಹೋದರ ಆದಿತ್ಯ ಎಂದು ಗುರುತಿಸಲಾಗಿದ್ದು, ಇಬ್ಬರೂ ದೆಹಲಿಯ ವಸಂತ್ ಕುಂಜ್ ನಿವಾಸಿಗಳು.
ವಸಂತ್ ಕುಂಜ್ ಪೊಲೀಸರಿಗೆ ಮಾರ್ಚ್ 10 ರಂದು ಮಧ್ಯಾಹ್ನ 3 ಗಂಟೆಗೆ ಮಗು ಕಾಣೆಯಾಗಿರುವ ದೂರು ದಾಖಲಾಗಿತ್ತು. ನಂತರ ಪೊಲೀಸರು ಮಗುವಿನ ತಾಯಿಯೊಂದಿಗೆ ತೀವ್ರ ಹುಡುಕಾಟವನ್ನು ಪ್ರಾರಂಭಿಸಿದರು.
'ಎರಡು ಗಂಟೆಗಳ ಹುಡುಕಾಟದ ನಂತರ, ನಿರ್ಜನ ಪ್ರದೇಶದಲ್ಲಿನ ಗೋಡೆಯ ಬಳಿ ಆನಂದ್ ಮೃತ ದೇಹ ಪತ್ತೆಯಾಯಿತು. ಪ್ರಾಣಿಗಳ ಕಡಿತದಿಂದಾದ ಅನೇಕ ಗಾಯಗಳ ಗುರುತು ಆತನ ದೇಹದ ಮೇಲೆ ಕಂಡುಬಂದಿತ್ತು. ಸ್ಥಳದಲ್ಲಿ ರಕ್ತದ ಕಲೆಗಳಾಗಿದ್ದವು' ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಫ್ದರ್‌ಜಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚಿನ ವಿಚಾರಣೆಯಿಂದ, ಆ ಪ್ರದೇಶದಲ್ಲಿ ಸಾಕಷ್ಟು ಬೀದಿನಾಯಿಗಳಿದ್ದು, ಅವುಗಳು ಆಗ್ಗಾಗ್ಗೆ ಮೇಕೆಗಳು ಮತ್ತು ಹಂದಿಗಳ ಮೇಲೆ ದಾಳಿ ಮಾಡುತ್ತವೆ ಎಂದು ತಿಳಿದುಬಂದಿರುವುದಾಗಿ ಅವರು ಹೇಳಿದರು.
ಎಫ್‌ಐಆರ್‌ನ ಪ್ರಕಾರ, ಬಾಲಕನ ಕಾಲು, ಬೆನ್ನು, ಸೊಂಟ, ಕುತ್ತಿಗೆ ಮತ್ತು ತಲೆಯ ಮೇಲೆ ಗಾಯದ ಗುರುತುಗಳಿವೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಂಡವೊಂದು ಸ್ಥಳದಿಂದ ಕೆಲವು ರಕ್ತದ ಕಲೆಯ ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಪರೀಕ್ಷೆಗೊಳಪಡಿಸಿದೆ.
ಈ ಮಧ್ಯೆ., ಮಾರ್ಚ್ 12ರಂದು ಒಂದು ಮಗುವನ್ನು ಕಳೆದುಕೊಂಡಿದ್ದ ತಾಯಿಗೆ, ಕಿರಿಯ ಮಗನು ಅಂತದ್ದೇ ಘಟನೆಯಲ್ಲಿ ಕೊನೆಯುಸಿರೆಳೆದಿರುವ ಘಟನೆ ಆಘಾತ ಉಂಟುಮಾಡಿದೆ.
ಆನಂದ್ ಕಿರಿಯ ಸೋದರ ಆದಿತ್ಯ ತನ್ನ ಸೋದರಸಂಬಂಧಿ ಚಂದನ್ (24) ಎಂಬಾತನೊಂದಿಗೆ ಪ್ರಕೃತಿಯ ಕರೆಗಾಗಿ ಜುಗ್ಗಿ ಪಕ್ಕದ ಅದೇ ಸ್ಥಳಕ್ಕೆ ಹೋಗಿದ್ದಾನೆ. ಈ ವೇಳೆ, ಚಂದನ್ ಆದಿತ್ಯನಿಂದ ಸ್ವಲ್ಪ ದೂರದಲ್ಲಿದ್ದನು ಮತ್ತು ಸ್ವಲ್ಪ ಸಮಯದ ನಂತರ, ಬೀದಿ ನಾಯಿಗಳು ಆದಿತ್ಯನನ್ನು ಸುತ್ತುವರಿದು, ತೀವ್ರವಾಗಿ ಗಾಯಗೊಳಿಸಿದ್ದವು.
ಕಾಕತಾಳೀಯವೆಂಬಂತೆ, ಆ ಸಮಯದಲ್ಲಿ ದೆಹಲಿ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಒಬ್ಬರು ಆ ಸ್ಥಳದ ಪಕ್ಕದಲ್ಲಿ ಇದ್ದರು. ತಕ್ಷಣವೇ ಗಾಯಗೊಂಡ ಬಾಲಕನನ್ನು ತನ್ನ ಕಾರಿನಲ್ಲಿ ವಸಂತ್ ಕುಂಜ್‌ನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಇಬ್ಬರ ಮಕ್ಕಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಹೈದರಾಬಾದ್: ಬೀದಿ ನಾಯಿಗಳ ದಾಳಿ, 4 ವರ್ಷದ ಮಗು ಸಾವು!
ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿದ ತಾಯಿ ಸುಷ್ಮಾ, 'ಎಲ್ಲವೂ ಮುಗಿಯಿತು. ಇನ್ನು ಯಾಕೆ ಬದುಕಬೇಕು' ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಸುಷ್ಮಾ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದು, ತಾನೇ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು.
ಕುಟುಂಬದಲ್ಲಿ ಸುಷ್ಮಾ, ಅವರ ಪತಿ ಮತ್ತು ಮೂವರು ಮಕ್ಕಳಿದ್ದರು. ಆದಿತ್ಯ ಕಿಂಡರ್ ಗಾರ್ಡನ್ ವಿದ್ಯಾರ್ಥಿಯಾಗಿದ್ದು, ಆನಂದ್ 2ನೇ ತರಗತಿಯಲ್ಲಿ ಓದುತ್ತಿದ್ದ. ಪರಿಹಾರದ ಭರವಸೆ ನೀಡಲಾಗಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 'ಈಗ ಯಾವುದೇ ಹಣವನ್ನು ತೆಗೆದುಕೊಂಡು ನಾನು ಏನು ಮಾಡಲಿ? ಎಂದು ಸುಷ್ಮಾ ತಿಳಿಸಿದರು.
ಚಂದನ್ ಅವರ ಸೋದರಿ ಸುಚಿತ್ರಾ ಕೂಡ ದುಃಖಿತರಾಗಿದ್ದು, 'ಅವರು (ಚಂದನ್ ಮತ್ತು ಆದಿತ್ಯ ಇಬ್ಬರೂ) ಹತ್ತಿರದಲ್ಲಿ ಶೌಚಾಲಯವಿಲ್ಲದ ಕಾರಣ ಪ್ರಕೃತಿಯ ಕರೆಗೆ ಉತ್ತರಿಸಲು ಹೋಗಿದ್ದರು. ಚಂದನ್ ಮತ್ತು ಆದಿತ್ಯ ಸ್ವಲ್ಪ ದೂರದಲ್ಲಿದ್ದರು. ಈ ವೇಳೆ, ಕೆಲವು ನಾಯಿಗಳು ಆದಿತ್ಯನ ಮೇಲೆ ದಾಳಿ ಮಾಡುತ್ತಿದ್ದರಿಂದ ಚಂದನ್ ಗಾಬರಿಗೊಂಡಿದ್ದಾನೆ. ನಾಯಿಗಳನ್ನು ಓಡಿಸಿದ್ದಾನೆ ಮತ್ತು ನಾವು ತಕ್ಷಣ ಆದಿತ್ಯನನ್ನು ವೈದ್ಯರ ಬಳಿ ಕರೆದೊಯ್ದರೂ ಪ್ರಯೋಜನವಾಗಲಿಲ್ಲ' ಎಂದು ಅವರು ಹೇಳಿದರು.
Advertisement