ಹಿಂದಿಯ 'ದಹಿ' ಬೇಡ, ತಮಿಳಿನ 'ತಯಿರ್' ಸಾಕು; ಎಫ್‌ಎಸ್‌ಎಸ್‌ಎಐ ನಿರ್ದೇಶನದ ವಿರುದ್ಧ ಸಿಎಂ ಸ್ಟಾಲಿನ್ ಕಿಡಿ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನಿರ್ದೇಶನದಂತೆ ತನ್ನ ಮೊಸರಿನ ಸ್ಯಾಚೆಟ್‌ಗಳಲ್ಲಿ ಹಿಂದಿ ಪದ 'ದಹಿ'ಯನ್ನು ಬಳಸುವುದಿಲ್ಲ ಮತ್ತು ತಾನು ಕೇವಲ ತಮಿಳು ಪದ 'ತಯಿರ್' ಅನ್ನು ಬಳಸುವುದಾಗಿ ತಮಿಳುನಾಡಿನ ಸರ್ಕಾರಿ ಸ್ವಾಮ್ಯದ ಆವಿನ್ ಹೇಳಿದೆ. 
ಎಂ.ಕೆ. ಸ್ಟಾಲಿನ್
ಎಂ.ಕೆ. ಸ್ಟಾಲಿನ್
Updated on

ಚೆನ್ನೈ: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ನಿರ್ದೇಶನದಂತೆ ತನ್ನ ಮೊಸರಿನ ಸ್ಯಾಚೆಟ್‌ಗಳಲ್ಲಿ ಹಿಂದಿ ಪದ 'ದಹಿ'ಯನ್ನು ಬಳಸುವುದಿಲ್ಲ ಮತ್ತು ತಾನು ಕೇವಲ ತಮಿಳು ಪದ 'ತಯಿರ್' ಅನ್ನು ಬಳಸುವುದಾಗಿ ತಮಿಳುನಾಡಿನ ಸರ್ಕಾರಿ ಸ್ವಾಮ್ಯದ ಆವಿನ್ ಹೇಳಿದೆ. 

ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಈ ಕ್ರಮವನ್ನು 'ಹಿಂದಿ ಹೇರುವ' ಪ್ರಯತ್ನ ಎಂದು ಖಂಡಿಸಿದರೆ, ಡೈರಿ ಅಭಿವೃದ್ಧಿ ಸಚಿವ ಎಸ್‌ಎಂ ನಾಸರ್ ಅವರು, ಆಗಸ್ಟ್‌ ತಿಂಗಳಿಗೂ ಮೊದಲು ತನ್ನ ನಿರ್ದೇಶನವನ್ನು ಜಾರಿಗೊಳಿಸುವಂತೆ ಸೂಚಿಸುವ ಪತ್ರ ಸರ್ಕಾರಕ್ಕೆ ತಲುಪಿದೆ ಎಂದು ಒಪ್ಪಿಕೊಂಡಿದ್ದಾರೆ.

ಬಿಜೆಪಿಯ ರಾಜ್ಯ ಘಟಕವು ಎಫ್‌ಎಸ್‌ಎಸ್‌ಎಐ ಅಧಿಸೂಚನೆಯನ್ನು ಹಿಂಪಡೆಯಲು ಬಯಸಿದೆ. ರಾಜ್ಯದಲ್ಲಿ ಹಿಂದಿಗೆ ಜಾಗವಿಲ್ಲ ಎಂದು ನಾಸರ್ ಹೇಳಿದ್ದಾರೆ.

ತಮಿಳುನಾಡು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ತನ್ನ ಬ್ರಾಂಡ್ ಹೆಸರಾದ 'ಆವಿನ್'ನಿಂದ ಪರಿಚಿತವಾಗಿದೆ. ರಾಜ್ಯದ ಬಹುಪಾಲು ಗ್ರಾಹಕರು ಆದ್ಯತೆ ನೀಡುವ ಮೊಸರಿನ ಪಾಕೆಟ್ ಮೇಲೆ ತಮಿಳು ಪದ 'ತಯಿರ್' ಅನ್ನು ಬಳಸಲಾಗುವುದು. ಇದನ್ನು ಎಫ್‌ಎಸ್‌ಎಸ್‌ಎಐಗೆ ತಿಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ರಾಜ್ಯ-ಸಹಕಾರಿ ಸಂಘಗಳು ಉತ್ಪಾದಿಸುವ ಮೊಸರು ಸ್ಯಾಚೆಟ್‌ಗಳಲ್ಲಿ 'ದಹಿ' ಎಂಬ ಹಿಂದಿ ಪದ ಬಳಸುವಂತೆ ಎಫ್ಎಸ್ಎಸ್ಎಐ ಬಿಡುಗಡೆ ಮಾಡಿದ ಅಧಿಸೂಚನೆಯು ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸಲು ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ನೀತಿಯೊಂದಿಗೆ ಹೊಂದಿಕೆಯಾಗುವುದಿಲ್ಲ. ಅಧಿಸೂಚನೆಯನ್ನು ತಕ್ಷಣವೇ ಹಿಂಪಡೆಯಲು ನಾವು ಬಯಸುತ್ತೇವೆ' ಎಂದು ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಕೆ. ಅಣ್ಣಾಮಲೈ ಹೇಳಿದ್ದಾರೆ.

ಈಮಧ್ಯೆ, ಡಿಎಂಕೆ ಪದಾಧಿಕಾರಿಗಳು ಟ್ವಿಟರ್ ಹ್ಯಾಶ್‌ಟ್ಯಾಗ್ 'ದಹಿ ನಹಿಪೋಡಾ' (ದಹಿ ಬೇಡ, ಮುಂದುವರಿಯಿರಿ) ಅನ್ನು ಟ್ರೆಂಡ್ ಮಾಡಿ ಹಿಂದಿ ಹೇರಿಕೆಯನ್ನು ವಿರೋಧಿಸಿದರು. ಹೀಗೆ ಟ್ವೀಟ್ ಮಾಡಿದವರಲ್ಲಿ ಪಕ್ಷದ ಐಟಿ ವಿಭಾಗದ ಕಾರ್ಯದರ್ಶಿ ಟಿಆರ್‌ಬಿ ರಾಜಾ ಕೂಡ ಸೇರಿದ್ದಾರೆ.

ಬುಧವಾರ, ಹಿಂದಿಯ ‘ದಹಿ’ ಪದ ಬಳಕೆಗೆ ಸಂಬಂಧಿಸಿದಂತೆ ಎಫ್‌ಎಸ್‌ಎಸ್ಎಐನಿಂದ ಕೆಎಂಎಫ್‌ಗೆ ಬಂದಿರುವ ನಿರ್ದೇಶನದ ಬಗ್ಗೆ ವರದಿಯಾಗಿರುವ ಸುದ್ದಿಯನ್ನು ಸ್ಟಾಲಿನ್‌ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ವರದಿಯನ್ನು ಉಲ್ಲೇಖಿಸಿರುವ ಸ್ಟಾಲಿನ್, 'ಯಾವುದೇ ಮುಜುಗರವಿಲ್ಲದೆ ಹಿಂದಿ ಹೇರಿಕೆ ಬಗ್ಗೆ ಒತ್ತಾಯಗಳು ಕೇಳಿಬರುತ್ತಿವೆ. ನಮ್ಮದೇ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡವನ್ನು ಹಿಂದಿಕ್ಕಿ, ಮೊಸರಿನ ಪ್ಯಾಕೆಟ್‌ಗಳಲ್ಲಿಯೂ ಹಿಂದಿ  ಹೇರಿಕೆ ಮಾಡಲು ನಿರ್ದೇಶಿಸುವ ಮಟ್ಟಕ್ಕೆ ಬಂದಿವೆ. ನಮ್ಮ ಮಾತೃಭಾಷೆಯನ್ನು ನಿರ್ಲಕ್ಷ್ಯಿಸುವ ಇಂತಹ ನಿರ್ಲಜ್ಜ ಹೊಣೆಗಾರರನ್ನು ದಕ್ಷಿಣದಿಂದ ಶಾಶ್ವತವಾಗಿ ಬಹಿಷ್ಕರಿಸಬೇಕು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊಸರಿನ ಪ್ಯಾಕೇಟ್‌ಗಳ ಮೇಲೆ ಹಿಂದಿಯ ದಹಿ ಪದವನ್ನು ಮುದ್ರಿಸಬೇಕು. ನಂತರ ಆಯಾ ಸ್ಥಳೀಯ ಭಾಷೆಯಲ್ಲಿ ಮೊಸರಿಗೆ ಸಮಾನವಾದ ಪದವನ್ನು ಬಳಸಬೇಕು ಎಂದು ಎಫ್‌ಎಸ್‌ಎಸ್‌ಎಐ ಇತ್ತೀಚೆಗೆ ಕೆಎಂಎಫ್‌ಗೆ ನಿರ್ದೇಶನ ನೀಡಿತ್ತು. ಇದು ಕನ್ನಡ ಹೋರಾಟಗಾರರ ಆಕ್ರೋಶಕ್ಕೂ ಕಾರಣವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com