ಫೋಮ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ; ನಾಲ್ವರು ಕಾರ್ಮಿಕರು ಸಾವು, ನಾಲ್ವರಿಗೆ ಗಂಭೀರ ಗಾಯ
ಬರೇಲಿ: ಇಲ್ಲಿನ ಫರೀದ್‌ಪುರ ಪ್ರದೇಶದಲ್ಲಿನ ಫೋಮ್ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿಯಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಅವರ ಪ್ರಕಾರ, ಕಾರ್ಖಾನೆಯ ಕಾರ್ಮಿಕರ ದೈನಂದಿನ ಪಾಳಿ ಮುಗಿಯುವ ಮೊದಲು ಶಾರ್ಟ್ ಸರ್ಕ್ಯೂಟ್‌ನಿಂದ ಬುಧವಾರ ಸಂಜೆ ಬೆಂಕಿ ಕಾಣಿಸಿಕೊಂಡಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತರಲು ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು ಎಂದು ಫರೀದ್‌ಪುರ ವೃತ್ತದ ಅಧಿಕಾರಿ ಗೌರವ್ ಸಿಂಗ್ ತಿಳಿಸಿದ್ದಾರೆ.
ಘಟನೆಯ ವೇಳೆ ಕಾರ್ಖಾನೆಯೊಳಗೆ ಸುಮಾರು 50 ಮಂದಿ ಇದ್ದರು ಎಂದು ಕಾರ್ಮಿಕರು ಹೇಳಿದ್ದಾರೆ.
ಬೆಂಕಿ ಸಂಪೂರ್ಣವಾಗಿ ಆರಿದ ನಂತರವೇ ನಾಲ್ವರ ಸುಟ್ಟ ದೇಹಗಳನ್ನು ಹೊರತೆಗೆಯಲಾಯಿತು. ಅವರಲ್ಲಿ ಮೂವರನ್ನು ಅನುಪ್ (25), ಅರವಿಂದ್ ಕುಮಾರ್ ಮಿಶ್ರಾ (32) ಮತ್ತು ರಾಕೇಶ್ (27) ಎಂದು ಗುರುತಿಸಲಾಗಿದ್ದು, ನಾಲ್ಕನೇ ಮೃತರ ಗುರುತು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಹೇಳಿದರು.
ನಾಲ್ವರು ಕಾರ್ಮಿಕರಿಗೆ ಗಂಭೀರ ಸುಟ್ಟಗಾಯಗಳಾಗಿದ್ದು, ಅವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ರೋಗಿಯ ಸ್ಥಿತಿ ಗಂಭೀರವಾಗಿದೆ ಎಂದು ಸಿಂಗ್ ಹೇಳಿದರು.
ಘಟನೆ ಕುರಿತು ತಾಂತ್ರಿಕ ತನಿಖೆ ನಡೆಸುವಂತೆ ಮುಖ್ಯ ಅಗ್ನಿಶಾಮಕ ಅಧಿಕಾರಿ ಚಂದ್ರ ಮೋಹನ್ ಶರ್ಮಾ ಅವರಿಗೆ ಆದೇಶ ನೀಡಿರುವುದಾಗಿ ಬರೇಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿವಕಾಂತ್ ದ್ವಿವೇದಿ ತಿಳಿಸಿದ್ದಾರೆ.
ಫೋಮ್ ಕಾರ್ಖಾನೆಯು ಜಿಲ್ಲಾ ಕೇಂದ್ರದಿಂದ ಸುಮಾರು 20 ಕಿಮೀ ದೂರದಲ್ಲಿರುವ ಫರೀದ್‌ಪುರದ ಜೇಡ್ ಗ್ರಾಮದಲ್ಲಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಆತಂಕವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ