ಮೇಕೆದಾಟು ಅಣೆಕಟ್ಟು ಯೋಜನೆ: ಕರ್ನಾಟಕ- ತಮಿಳುನಾಡು ಸಂಬಂಧ ಹದಗೆಡುವ ಸಾಧ್ಯತೆ

ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಕಾವೇರಿ ನದಿಯ ಮೇಕೆದಾಟು ಅಣೆಕಟ್ಟು ವಿವಾದ ತಮಿಳುನಾಡಿಗೆ ದೊಡ್ಡ ತಲೆನೋವಾಗುವ ಸಾಧ್ಯತೆಯಿದೆ.
ಸಿದ್ದರಾಮಯ್ಯ. ಸ್ಟಾಲಿನ್
ಸಿದ್ದರಾಮಯ್ಯ. ಸ್ಟಾಲಿನ್
Updated on

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿರುವ ಎಂ.ಕೆ. ಸ್ಟಾಲಿನ್ ಕಾಂಗ್ರೆಸ್‌ಗೆ ಶಕ್ತಿಯ ಆಧಾರ ಸ್ತಂಭವಾಗಿದ್ದಾರೆ. ರಾಜ್ಯದಿಂದ ಎಂಟು ಸಂಸದರನ್ನು ಆ ಪಕ್ಷ ನೀಡಿದೆ. ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಕಾವೇರಿ ನದಿಯ ಮೇಕೆದಾಟು ಅಣೆಕಟ್ಟು ವಿವಾದ ತಮಿಳುನಾಡಿಗೆ ದೊಡ್ಡ ತಲೆನೋವಾಗುವ ಸಾಧ್ಯತೆಯಿದೆ.

ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕಾಗಿ  'ಪಾದಯಾತ್ರೆ' ನಡೆಸಿದ್ದರು. ಉದ್ದೇಶಿತ ಅಣೆಕಟ್ಟು ಅಂತರರಾಜ್ಯ ಗಡಿಯಲ್ಲಿ ಬರಲಿದ್ದು, ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಗುರಿ ಹೊಂದಿದೆ. 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೂ ಉದ್ದೇಶಿಸಲಾಗಿದೆ.

ಯೋಜನೆಯ ಅನುಷ್ಠಾನದ ವಿರುದ್ಧ ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು, ಕೇಂದ್ರ ಜಲಶಕ್ತಿ ಸಚಿವಾಲಯದ ಸಹಯೋಗದಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡು ಯೋಜನೆಗೆ ತನ್ನ ತೀವ್ರ ವಿರೋಧವನ್ನು ಪುನರುಚ್ಚರಿಸಿತು.

ಮೇಕೆದಾಟು ಬಳಿ ಅಣೆಕಟ್ಟು ಕಟ್ಟುವುದರಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂಬುದು ಕರ್ನಾಟಕದ ನಿಲುವು. ಆದರೆ, ತಮಿಳುನಾಡಿನಂತಹ ಕೆಳಭಾಗದ ನದಿ ತೀರದ ರಾಜ್ಯದ ಮೇಲೆ ಪರಿಣಾಮ ಬೀರುವ ಕಾರಣ  ಅಣೆಕಟ್ಟು ನಿರ್ಮಿಸಲು ಕರ್ನಾಟಕ ರಾಜ್ಯಕ್ಕೆ ಯಾವುದೇ ಹಕ್ಕು ಇಲ್ಲ ಎಂದು ತಮಿಳುನಾಡು ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡದ ಹೊರತು ಕಾವೇರಿ ನದಿಯ ಮೇಲ್ದಂಡೆಯಲ್ಲಿ ಯಾವುದೇ ಯೋಜನೆಯನ್ನು ತಮಿಳುನಾಡು ವಿರೋಧಿಸುತ್ತಿದೆ. 

ತಮಿಳುನಾಡು ಮತ್ತು ಕರ್ನಾಟಕ ಎರಡೂ ವಿಧಾನಸಭೆಗಳು 2022 ರಲ್ಲಿ ಪರಸ್ಪರ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿದ್ದವು ಮತ್ತು ಈ ವಿಷಯವು ಎರಡು ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿತು. ರಾಜ್ಯ ಕಾಂಗ್ರೆಸ್ ಈ ಯೋಜನೆಯನ್ನು ಒಪ್ಪುವುದಿಲ್ಲ. ಈ ಸಂಬಂಧ ಕರ್ನಾಟಕ ಸರ್ಕಾರದೊಂದಿಗೆ ಮಾತನಾಡುತ್ತೇವೆ. ಮೇಕೆದಾಟು ಯೋಜನೆಯಿಂದ ತಮಿಳುನಾಡಿನ ಹಿತಾಸಕ್ತಿ ಕಡೆಗಣಿಸಲಾಗುವುದು ಎಂದು ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎಸ್. ಅಳಗಿರಿ ಸುದ್ದಿಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

“ಕೇಂದ್ರ ಜಲ ವಿವಾದಗಳ ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್‌ ಕಾವೇರಿ ಜಲಾನಯನ ಪ್ರದೇಶದಲ್ಲಿ ಲಭ್ಯವಿರುವ  ಸಂಗ್ರಹಣಾ ಸೌಲಭ್ಯಗಳು ಕರ್ನಾಟಕಕ್ಕೆ ನೀರು ಸಂಗ್ರಹಿಸಲು ಮತ್ತು ವಿತರಿಸಲು ಸಮರ್ಪಕವಾಗಿವೆ ಎಂಬುದನ್ನು ಕಂಡುಹಿಡಿದಿವೆ. ಮೇಕೆದಾಟಿನಲ್ಲಿ ಕಾವೇರಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಪ್ರಸ್ತಾಪವನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ತಮಿಳುನಾಡು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. 

ಮೇಕೆದಾಟು ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರದ ಮುಂದಿನ ನಡೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು, 2024 ರ ಲೋಕಸಭಾ ಚುನಾವಣೆಯ ಅಂತ್ಯದವರೆಗೆ ಕರ್ನಾಟಕ ಸರ್ಕಾರವು ಮೃದುವಾಗಿರಲು ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕತ್ವವು ನಿರ್ದೇಶಿಸಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com