ಛತ್ತೀಸಗಢದಲ್ಲಿ ಚುನಾವಣಾ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ
ಛತ್ತೀಸಗಢದಲ್ಲಿ ಚುನಾವಣಾ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ

'ನಾವು ನಿಮ್ಮನ್ನು ಅಪ್ಪುತ್ತೇವೆ, ಬಿಜೆಪಿ ನಾಯಕರು ನಿಮ್ಮ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಾರೆ': ರಾಹುಲ್ ಗಾಂಧಿ

ಬಿಜೆಪಿ ಬುಡಕಟ್ಟು ಜನಾಂಗದವರು 'ದೊಡ್ಡ ಕನಸು' ಕಾಣಲು ಬಯಸುವುದಿಲ್ಲ. ಆದ್ದರಿಂದ ಅವರನ್ನು ಆದಿವಾಸಿಗಳ ಬದಲಿಗೆ ‘ವನವಾಸಿ’ ಎಂದು ಕರೆಯುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.

ಅಂಬಿಕಾಪುರ: ಬಿಜೆಪಿ ಬುಡಕಟ್ಟು ಜನಾಂಗದವರು 'ದೊಡ್ಡ ಕನಸು' ಕಾಣಲು ಬಯಸುವುದಿಲ್ಲ. ಆದ್ದರಿಂದ ಅವರನ್ನು ಆದಿವಾಸಿಗಳ ಬದಲಿಗೆ ‘ವನವಾಸಿ’ ಎಂದು ಕರೆಯುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.

ಛತ್ತೀಸ್‌ಗಢದಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಮುನ್ನ ಇಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬುಡಕಟ್ಟು ಜನಾಂಗದವರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸುವಾಗ, ಇಂಗ್ಲಿಷ್ ಕಲಿಯಬೇಡಿ ಎಂದು ಬಿಜೆಪಿ ನಾಯಕರು ಹೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.

'ಬಿಜೆಪಿ ಆದಿವಾಸಿಗಳಿಗೆ ‘ವನವಾಸಿ’ (ಅರಣ್ಯವಾಸಿ) ಎಂಬ ಪದವನ್ನು ಬಳಸಿದೆ. `ವನವಾಸಿ’ಗೂ `ಆದಿವಾಸಿ’ಗೂ ಅಜಗಜಾಂತರ ವ್ಯತ್ಯಾಸವಿದೆ. ಬಿಜೆಪಿ ನಾಯಕರೊಬ್ಬರು ಬುಡಕಟ್ಟು ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿಡಿಯೋವನ್ನು ನೀವು ನೋಡಿರಬೇಕು. ಆ ಘಟನೆ ಬಿಜೆಪಿಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ' ಎಂದು ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ಘಟನೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ಹೇಳಿದರು. 

'ಆದಿವಾಸಿ ಎಂಬ ಪದಕ್ಕೆ ಆಳವಾದ ಅರ್ಥವಿದೆ. ಇದು `ಜಲ್, ಜಂಗಲ್, ಜಮೀನ್ (ನೀರು, ಅರಣ್ಯ, ಭೂಮಿ)' ಮೇಲಿನ ನಿಮ್ಮ ಹಕ್ಕುಗಳನ್ನು ವ್ಯಕ್ತಪಡಿಸುತ್ತದೆ. `ವನವಾಸಿ’ ಎಂದರೆ ಕಾಡಿನಲ್ಲಿ ವಾಸಿಸುವವರು. ಬಿಜೆಪಿಯವರು ನಿಮ್ಮನ್ನು ವನವಾಸಿ ಎನ್ನುತ್ತಾರೆ. ನಾವು ನಿಮ್ಮನ್ನು ಆದಿವಾಸಿ ಎನ್ನುತ್ತೇವೆ. ಬಿಜೆಪಿಯವರು ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಾರೆ. ಆದರೆ, ನಾವು ನಿಮಗೆ ಹಕ್ಕುಗಳನ್ನು ನೀಡುತ್ತೇವೆ. ನಾವು ನಿಮ್ಮನ್ನು ತಬ್ಬಿಕೊಳ್ಳುತ್ತೇವೆ, ಬಿಜೆಪಿ ನಾಯಕರು ನಿಮ್ಮ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಾರೆ' ಎಂದು ಅವರು ಕಿಡಿಕಾರಿದರು.

ದೇಶದಲ್ಲಿ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದ್ದು, ಮುಂದಿನ 15-20 ವರ್ಷಗಳಲ್ಲಿ ಅದು ಕಣ್ಮರೆಯಾದಾಗ ವನವಾಸಿಗಳು ಎಲ್ಲಿಗೆ ಹೋಗುತ್ತಾರೆ. ಅವರು ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾರೆಯೇ ಎಂದು ಅವರು ಪ್ರಶ್ನಿಸಿದರು.

'ಬಿಜೆಪಿ ನಾಯಕರು ಇಂಗ್ಲಿಷ್ ಕಲಿಯಬೇಡಿ ಎಂದು ಕೇಳುತ್ತಾರೆ. ಬುಡಕಟ್ಟು ಯುವಕರು ಛತ್ತೀಸಗಢಿ, ಇಂಗ್ಲಿಷ್ ಮತ್ತು ಹಿಂದಿಯನ್ನು ಕಲಿಯಬೇಕು ಎಂದು ನಾವು ಬಯಸುತ್ತೇವೆ... ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಅಥವಾ ಹಿಂದಿ ಮಾಧ್ಯಮ ಯಾವ ಶಾಲೆಗಳಿಗೆ ಕಳಿಸುತ್ತಾರೆ ಎಂದು ಕೇಳಿದರೆ, ಅವರೆಲ್ಲರೂ ಇಂಗ್ಲಿಷ್ ಮಾಧ್ಯಮ ಎಂದು ಹೇಳುತ್ತಾರೆ. ಅವರ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಬಹುದು ಮತ್ತು ದೊಡ್ಡ ಕನಸು ಕಾಣಬಹುದು. ಹಾಗಾದರೆ ಬುಡಕಟ್ಟು ಜನಾಂಗದ ಮಕ್ಕಳು ಅದನ್ನು ಏಕೆ ಮಾಡಬಾರದು. ಅವರು ನಿಮ್ಮ ಮಕ್ಕಳು ಇಂಗ್ಲಿಷ್ ಕಲಿಯಲು, ದೊಡ್ಡ ಕನಸು ಕಾಣಲು ಬಯಸುವುದಿಲ್ಲ. ಆದ್ದರಿಂದಲೇ ಅವರು ನಿಮ್ಮನ್ನು ವನವಾಸಿ ಎಂದು ಕರೆಯುತ್ತಾರೆ... ಈ ಪದವು ನಿಮಗೆ ಅವಮಾನಕರವಾಗಿದೆ' ಎಂದು ರಾಹುಲ್ ಗಾಂಧಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಪ್ರತಿ ಭಾಷಣದಲ್ಲೂ ಒಬಿಸಿ ಎಂದು ಕರೆದು, ಒಬಿಸಿ ಕಲ್ಯಾಣದ ಬಗ್ಗೆ ಮಾತನಾಡುತ್ತಾರೆ. ಆದರೆ, ಕಾಂಗ್ರೆಸ್ ಜಾತಿ ಗಣತಿ ನಡೆಸುವಂತೆ ಕೇಳಿದಾಗ ಪ್ರಧಾನಿ ಬಡವರೆಲ್ಲಾ ಒಂದೇ ಜಾತಿ ಎಂದು ಹೇಳುತ್ತಾರೆ. 'ಹಾಗಾದರೆ ನೀವೇಕೆ ಒಬಿಸಿ ಎಂದು ಕರೆಯುತ್ತೀರಿ. ಒಂದೇ ಜಾತಿ ಇದ್ದರೆ, ಶ್ರೀಮಂತರು ಯಾರು ಎಂದು ಪ್ರಶ್ನಿಸಿದರು.

ಛತ್ತೀಸಗಢದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೊದಲ ದಿನದಿಂದಲೇ ಜಾತಿ ಗಣತಿ ನಡೆಸಲಾಗುವುದು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟ ಗೆದ್ದರೆ ದೇಶದಾದ್ಯಂತ ಜಾತಿ ಗಣತಿ ನಡೆಸಲಾಗುವುದು ಎಂದು ಅವರು ಹೇಳಿದರು.

ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಮಂಗಳವಾರ ಮುಗಿದಿದ್ದರೆ, ಒಟ್ಟು 90 ಸ್ಥಾನಗಳ ಪೈಕಿ ಉಳಿದ 70 ಸ್ಥಾನಗಳಿಗೆ ನವೆಂಬರ್ 17ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.

Related Stories

No stories found.

Advertisement

X
Kannada Prabha
www.kannadaprabha.com