ದೆಹಲಿ-ಜೈಪುರ ಹೆದ್ದಾರಿಯಲ್ಲಿ ವಾಹನಗಳಿಗೆ ತೈಲ ಟ್ಯಾಂಕರ್ ಡಿಕ್ಕಿ; ಮೂವರು ಸ್ನೇಹಿತರು ಸೇರಿ ನಾಲ್ವರು ಸಾವು

ದೆಹಲಿ-ಜೈಪುರ ಹೆದ್ದಾರಿಯ ಗುರುಗ್ರಾಮ್‌ನ ಸಿದ್ರಾವಲಿ ಗ್ರಾಮದ ಬಳಿ ಶುಕ್ರವಾರ ರಾತ್ರಿ ಜೈಪುರದಿಂದ ವೇಗವಾಗಿ ಬರುತ್ತಿದ್ದ ತೈಲ ಟ್ಯಾಂಕರ್ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದ್ದು, ಬಳಿಕ ಕಾರು ಮತ್ತು ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂವರು ಸ್ನೇಹಿತರು ಸೇರಿದಂತೆ ನಾಲ್ವರು ಸಾವಿಗೀಡಾಗಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಚಂಡೀಗಢ: ದೆಹಲಿ-ಜೈಪುರ ಹೆದ್ದಾರಿಯ ಗುರುಗ್ರಾಮ್‌ನ ಸಿದ್ರಾವಲಿ ಗ್ರಾಮದ ಬಳಿ ಶುಕ್ರವಾರ ರಾತ್ರಿ ಜೈಪುರದಿಂದ ವೇಗವಾಗಿ ಬರುತ್ತಿದ್ದ ತೈಲ ಟ್ಯಾಂಕರ್ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದ್ದು, ಬಳಿಕ ಕಾರು ಮತ್ತು ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮೂವರು ಸ್ನೇಹಿತರು ಸೇರಿದಂತೆ ನಾಲ್ವರು ಸಾವಿಗೀಡಾಗಿದ್ದಾರೆ.

ಹೆದ್ದಾರಿಯ ತ್ರಿವೇಣಿ ಹೋಟೆಲ್ ಬಳಿ ರಾತ್ರಿ 11.50ರ ಸುಮಾರಿಗೆ ಟ್ಯಾಂಕರ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಮತ್ತೊಂದು ಬದಿಯಲ್ಲಿ ಎದುರಿನಿಂದ ಬರುತ್ತಿದ್ದ ಕಾರು ಮತ್ತು ಪಿಕಪ್ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ ಎಂದು ಮೂಲಗಳು ತಿಳಿಸಿವೆ.

ಸಿಎನ್‌ಜಿ ಚಾಲಿತ ಕಾರು ತಕ್ಷಣವೇ ಬೆಂಕಿಗೆ ಆಹುತಿಯಾಗಿದೆ. ಕಾರಿನಲ್ಲಿದ್ದವರು ರಾಜಸ್ಥಾನದ ಭಿವಾಡಿಗೆ ಪ್ರಯಾಣಿಸುತ್ತಿದ್ದರು. ಮೂವರು ಯುವಕರು ಮನೇಸರ್‌ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಮೃತರ ಸ್ನೇಹಿತರೊಬ್ಬರು ನೀಡಿದ ದೂರಿನ ಮೇರೆಗೆ ಟ್ಯಾಂಕರ್ ಚಾಲಕನ ವಿರುದ್ಧ ಬಿಲಾಸ್‌ಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 279 (ಅತಿ ವೇಗದ ಚಾಲನೆ) ಮತ್ತು 304-ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

'ಕಾರು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಮೂವರು ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ. ಪಿಕಪ್ ವ್ಯಾನ್ ಚಾಲಕ ಕೂಡ ಸಾವಿಗೀಡಾಗಿದ್ದಾರೆ. ಮೃತರನ್ನು ಸ್ನೇಹಿತರು ಎನ್ನಲಾಗಿದ್ದು, ಪಾಣಿಪತ್‌ನ ಸಮಲ್ಖಾದ ಜಿತೇಂದರ್, ಜಿಂದ್‌ನ ಅನಾಜ್ ಮಂಡಿಯ ಲೋಕೇಶ್ ಸೈನಿ ಮತ್ತು ಬಿಹಾರದ ಪವನ್ ದುಬೆ ಎಂದು ಗುರುತಿಸಲಾಗಿದೆ'  ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಪಿಕಪ್ ವ್ಯಾನ್ ಚಾಲಕನನ್ನು ಗುರುಗ್ರಾಮದ ಪಟೌಡಿ ಬಳಿಯ ಚಿಲ್ಹಾರ್ ಗ್ರಾಮದ ತ್ರಿಲೋಕ್ ಶರ್ಮಾ ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ ಎಂದು ಬಿಲಾಸ್‌ಪುರ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com