ಗೋವಾ ವಿಮಾನ ನಿಲ್ದಾಣದ ರನ್‌ವೇಗೆ ನುಗ್ಗಿದ ಬೀದಿ ನಾಯಿ; ಬೆಂಗಳೂರಿಗೆ ಹಿಂದಿರುಗಿದ ವಿಸ್ತಾರಾ ವಿಮಾನ!

ಏರ್‌ ಟ್ರಾಫಿಕ್ ಕಂಟ್ರೋಲರ್‌ಗೆ ರನ್‌ವೇಯಲ್ಲಿ ಬೀದಿನಾಯಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಸ್ತಾರಾ ವಿಮಾನವು ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಇಳಿಯದೆ ಬೆಂಗಳೂರಿಗೆ ಮರಳಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಣಜಿ: ಏರ್‌ ಟ್ರಾಫಿಕ್ ಕಂಟ್ರೋಲರ್‌ಗೆ ರನ್‌ವೇಯಲ್ಲಿ ಬೀದಿನಾಯಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಸ್ತಾರಾ ವಿಮಾನವು ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಇಳಿಯದೆ ಬೆಂಗಳೂರಿಗೆ ಮರಳಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎಂದರು.

ದಾಬೋಲಿಮ್ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಬೀದಿನಾಯಿ ಕಾಣಿಸಿಕೊಂಡಿದ್ದರಿಂದ ಪೈಲಟ್‌ಗೆ 'ಸ್ವಲ್ಪ ಸಮಯ ಇರುವಂತೆ' ಸೂಚಿಸಲಾಯಿತು. ಆದರೆ, ಅವರು ಮತ್ತೆ 'ಬೆಂಗಳೂರಿಗೆ ಹಿಂತಿರುಗಲು ಆದ್ಯತೆ ನೀಡಿದರು' ಎಂದು ಗೋವಾ ವಿಮಾನ ನಿಲ್ದಾಣದ ನಿರ್ದೇಶಕ ಎಸ್‌ವಿಟಿ ಧನಂಜಯ ರಾವ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.

ವಿಸ್ತಾರಾ ವಿಮಾನ ಯುಕೆ 881 ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೋಮವಾರ ಮಧ್ಯಾಹ್ನ 12.55ಕ್ಕೆ ಹೊರಟು ಮಧ್ಯಾಹ್ನ 3.05ಕ್ಕೆ ಬೆಂಗಳೂರಿಗೆ ಹಿಂತಿರುಗಿತು ಎಂದು ಮೂಲಗಳು ತಿಳಿಸಿವೆ.

ಮತ್ತೆ ಬೆಂಗಳೂರಿನಿಂದ ಸಂಜೆ 4.55ಕ್ಕೆ ಹೊರಟ ವಿಮಾನ 6.15ಕ್ಕೆ ಗೋವಾ ತಲುಪಿತು.

ಈ ಕುರಿತು ಸೋಮವಾರ ಟ್ವೀಟ್ ಮಾಡಿರುವ ವಿಸ್ತಾರಾ, 'ಗೋವಾ (GOI) ವಿಮಾನ ನಿಲ್ದಾಣದಲ್ಲಿ ರನ್‌ವೇ ನಿರ್ಬಂಧದ ಕಾರಣದಿಂದ ಬೆಂಗಳೂರಿನಿಂದ ಗೋವಾಕ್ಕೆ ಹೊರಟಿದ್ದ ಯುಕೆ 881 ವಿಮಾನವನ್ನು ಬೆಂಗಳೂರಿಗೆ ತಿರುಗಿಸಲಾಗಿದೆ ಮತ್ತು 15.05 ಗಂಟೆಗೆ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ' ಎಂದು ಹೇಳಿದೆ.

ಅದಾದ ಎರಡು ಗಂಟೆಗಳ ನಂತರ ಮತ್ತೊಂದು ಪೋಸ್ಟ್‌ನಲ್ಲಿ, 'ಬೆಂಗಳೂರು ಕಡೆಗೆ ತಿರುಗಿಸಲಾದ UK881 ವಿಮಾನವು ಬೆಂಗಳೂರಿನಿಂದ 16.55 ಗಂಟೆಗೆ ಹೊರಟಿದೆ ಮತ್ತು 18.15 ಗಂಟೆಗೆ ಗೋವಾ ತಲುಪುವ ನಿರೀಕ್ಷೆಯಿದೆ' ಎಂದು ಅದು ಹೇಳಿದೆ.

ಕೆಲವೊಮ್ಮೆ ಬೀದಿ ನಾಯಿಗಳು ರನ್‌ವೇಗೆ ಪ್ರವೇಶಿಸಿದ ನಿದರ್ಶನಗಳಿವೆ. ಆದರೆ, ಮೈದಾನದ ಸಿಬ್ಬಂದಿ ಆ ಪ್ರದೇಶವನ್ನು ತಕ್ಷಣವೇ ತೆರವುಗೊಳಿಸುತ್ತಾರೆ. ಕಳೆದ ಒಂದೂವರೆ ವರ್ಷಗಳ ನನ್ನ ಅಧಿಕಾರಾವಧಿಯಲ್ಲಿ ಇದು ಮೊದಲ ಘಟನೆಯಾಗಿದೆ ಎಂದು ರಾವ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com