

ಪಣಜಿ: ಶಾಸಕ ಅಲೆಕ್ಸೊ ಸಿಕ್ವೇರಾ ಅವರು ಸಂಪುಟ ಸೇರ್ಪಡೆಗೆ ದಾರಿ ಮಾಡಿಕೊಡಲು ಗೋವಾ ಲೋಕೋಪಯೋಗಿ ಸಚಿವ ನಿಲೇಶ್ ಕ್ಯಾಬ್ರಾಲ್ ಅವರು ಭಾನುವಾರ ಸಚಿವ ಸ್ಥಾನ ರಾಜೀನಾಮೆ ನೀಡಿದ್ದಾರೆ.
ನೀಲೇಶ್ ಕ್ಯಾಬ್ರಾಲ್ ಅವರು ಇಂದು ಪ್ರಮೋದ್ ಸಾವಂತ್ ನೇತೃತ್ವದ ಸಂಪುಟಕ್ಕೆ ರಾಜೀನಾಮೆ ನೀಡಿದ್ದು, ಕಳೆದ ವರ್ಷ ಗೋವಾ ಪ್ರತಿಪಕ್ಷ ಕಾಂಗ್ರೆಸ್‌ನಿಂದ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರಿದ್ದ ಎಂಟು ಶಾಸಕರಲ್ಲಿ ಒಬ್ಬರಾದ ಸಿಕ್ವೇರಾ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನೀಲೇಶ್ ಅವರು ಮುಖ್ಯಮಂತ್ರಿಗೆ ಕಳುಹಿಸಿದ ರಾಜೀನಾಮೆ ಪತ್ರದಲ್ಲಿ, ಪಕ್ಷವು ತನಗೆ "ಹಿಂದೆ ನೀಡಿದ್ದ ಬದ್ಧತೆಗಳನ್ನು" ಪೂರೈಸಲು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಕ್ಯಾಬ್ರಾಲ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಮತ್ತು ಅವರ ರಾಜೀನಾಮೆಯನ್ನು ಅಂಗೀಕಾರಕ್ಕಾಗಿ ರಾಜ್ಯಪಾಲ ಪಿ ಎಸ್ ಶ್ರೀಧರನ್ ಪಿಳ್ಳೈ ಅವರಿಗೆ ಕಳುಹಿಸಲಾಗಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು ಹೇಳಿದ್ದಾರೆ.
ಕ್ಯಾಬಿನೆಟ್‌ನಲ್ಲಿ ಮತ್ತೊಬ್ಬ ಶಾಸಕರಿಗೆ ಸ್ಥಾನ ಕಲ್ಪಿಸಲು ಕ್ಯಾಬ್ರಾಲ್ ಅವರನ್ನು ಕೆಳಗಿಳಿಸಿರುವುದು ಪಕ್ಷದ ನಿರ್ಧಾರವಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಶಾಸಕ ಅಲೆಕ್ಸೊ ಸಿಕ್ವೇರಾ ಅವರು ಇಂದು ಸಂಜೆ 7 ಗಂಟೆಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಗೋವಾ ಸಿಎಂ ಹೇಳಿದ್ದಾರೆ.