
ಅಹಮದಾಬಾದ್: ಸಂಸ್ಥೆಯ ಮಾಜಿ ಉದ್ಯೋಗಿಯಾಗಿದ್ದ ದಲಿತ ವ್ಯಕ್ತಿಯೊಬ್ಬರು ಸಂಬಳ ಕೇಳಿದ್ದಕ್ಕೆ, ತನ್ನ ಪಾದರಕ್ಷೆಗಳನ್ನು ಬಾಯಿಯಲ್ಲಿ ಇಟ್ಟುಕೊಂಡು ಕ್ಷಮೆಯಾಚಿಸುವಂತೆ ಒತ್ತಾಯಿಸಿದ ಘಟನೆಗೆ ಸಂಬಂಧಿಸಿದಂತೆ ಗುಜರಾತ್‌ನ ಮೊರ್ಬಿ ಪಟ್ಟಣದಲ್ಲಿ ಮಹಿಳಾ ಉದ್ಯಮಿ ಮತ್ತು ಅವರ ಉದ್ಯೋಗಿಗಳ ವಿರುದ್ಧ ಗುರುವಾರ ಪ್ರಕರಣ ದಾಖಲಿಸಲಾಗಿದೆ.
ಎಫ್‌ಐಆರ್ ಪ್ರಕಾರ, ಸಂತ್ರಸ್ತ 21 ವರ್ಷದ ದಲಿತ ಯುವಕ ನೀಲೇಶ್ ದಲ್ಸಾನಿಯಾ ಎಂಬುವವರು ಗುರುವಾರ ಸಂಜೆ ತಮ್ಮ ಸಹೋದರ ಮತ್ತು ನೆರೆಹೊರೆಯವರೊಂದಿಗೆ ಮಹಿಳಾ ಉದ್ಯಮಿ ವಿಭೂತಿ ಪಟೇಲ್ ನೇತೃತ್ವದ ಖಾಸಗಿ ಸಂಸ್ಥೆಯಾದ ರಾಣಿಬಾ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ (RIPL) ಕಚೇರಿಗೆ ಹೋಗಿದ್ದರು.
ಅಕ್ಟೋಬರ್‌ನಲ್ಲಿ ಆರ್‌ಐಪಿಎಲ್‌ನ ರಫ್ತು ವಿಭಾಗದಲ್ಲಿ ಕೆಲಸ ಮಾಡಿದ 16 ದಿನಗಳ ವೇತನವನ್ನು ನೀಡಬೇಕೆಂದು ನೀಲೇಶ್ ಒತ್ತಾಯಿಸಿದರು. ಆದರೆ, ವಿಭೂತಿ ಪಟೇಲ್ ಸಹೋದರ ಎಂದು ಗುರುತಿಸಿಕೊಂಡ ಓಂ ಪಟೇಲ್ ಎಂಬಾತ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ವಿಭೂತಿ ಮತ್ತು ಆಕೆಯ ಉದ್ಯೋಗಿಗಳು ನೀಲೇಶ್ ಅವರನ್ನು ವಾಣಿಜ್ಯ ಕಟ್ಟಡದ ಟೆರೇಸ್‌ಗೆ ಎಳೆದೊಯ್ದು ನಿರ್ದಯವಾಗಿ ಥಳಿಸಿದ್ದಾರೆ.
'ಈ ವೇಳೆ ವಿಭೂತಿ ಪಟೇಲ್ ಅವರು ತಮ್ಮ ಚಪ್ಪಲಿಗಳನ್ನು ಬಾಯಿಯಲ್ಲಿ ಇಟ್ಟುಕೊಳ್ಳುವಂತೆ ಮತ್ತು ಕ್ಷಮೆಯಾಚಿಸುವಂತೆ ನನಗೆ (ನೀಲೇಶ್) ಒತ್ತಾಯಿಸಿದರು. ನಾನು ಮತ್ತೊಮ್ಮೆ ರಾವಪರ್ ರಸ್ತೆಯಲ್ಲಿ ಕಾಣಿಸಿಕೊಂಡರೆ ಮತ್ತು ದೂರು ದಾಖಲಿಸಲು ಮುಂದಾದರೆ, ನನ್ನನ್ನು ಕೊಲ್ಲುವುದಾಗಿ ಅವರು ನನಗೆ ಎಚ್ಚರಿಸಿದರು' ಎಂದು ನೀಲೇಶ್ ಹೇಳಿರುವುದಾಗಿ ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಮಕ್ತೂಬ್ ಮೀಡಿಯಾ ವರದಿ ಮಾಡಿದೆ.
ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 506 (2) (ಅಪರಾಧ ಬೆದರಿಕೆ), 143 (ಕಾನೂನುಬಾಹಿರ ಸಭೆ), 147 (ಗಲಭೆ) ಮತ್ತು 149 (ಪ್ರತಿ ಸದಸ್ಯ ಮಾಡಿದ ಕಾನೂನುಬಾಹಿರ ಸಭೆಯ ಅಪರಾಧ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಆರೋಪಿಗಳನ್ನು ಬಂಧಿಸಲು ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ.
Advertisement