ಬಾಂಗ್ಲಾದೇಶ ವಲಸಿಗರಿಗೂ ಮತದಾರರ ಗುರುತಿನ ಚೀಟಿ: ಟಿಎಂಸಿ ನಾಯಕಿ ಭರವಸೆ, ಭುಗಿಲೆದ್ದ ವಿವಾದ

ಇನ್ನು ಮೂರು ತಿಂಗಳಲ್ಲಿ ಚುನಾವಣೆ ಇದ್ದು, ರಾಜ್ಯದಲ್ಲಿರುವ ಎಲ್ಲ ಬಾಂಗ್ಲಾದೇಶಿ ವಲಸಿಗರಿಗೆ ಮತದಾರರ ಗುರುತಿನ ಚೀಟಿ ನೀಡಲಾಗುತ್ತದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕಿಯೊಬ್ಬರು ನೀಡಿರುವ ಹೇಳಿಕೆ ಇದೀಗ ವ್ಯಾಪಕ ವಿವಾದಕ್ಕೆ ಗ್ರಾಸವಾಗಿದೆ.
ಟಿಎಂಸಿ ನಾಯಕಿ ರತ್ನಾ ವಿಶ್ವಾಸ್
ಟಿಎಂಸಿ ನಾಯಕಿ ರತ್ನಾ ವಿಶ್ವಾಸ್

ಕೋಲ್ಕತಾ: ಇನ್ನು ಮೂರು ತಿಂಗಳಲ್ಲಿ ಚುನಾವಣೆ ಇದ್ದು, ರಾಜ್ಯದಲ್ಲಿರುವ ಎಲ್ಲ ಬಾಂಗ್ಲಾದೇಶಿ ವಲಸಿಗರಿಗೆ ಮತದಾರರ ಗುರುತಿನ ಚೀಟಿ ನೀಡಲಾಗುತ್ತದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕಿಯೊಬ್ಬರು ನೀಡಿರುವ ಹೇಳಿಕೆ ಇದೀಗ ವ್ಯಾಪಕ ವಿವಾದಕ್ಕೆ ಗ್ರಾಸವಾಗಿದೆ.

ಹೌದು.. ಪಶ್ಚಿಮ ಬಂಗಾಳದ (West Bengal) ತೃಣಮೂಲ ಕಾಂಗ್ರೆಸ್ (TMC) ನಾಯಕಿ ರತ್ನಾ ವಿಶ್ವಾಸ್‌ (Ratna Biswas) ಅಕ್ರಮ ಬಾಂಗ್ಲಾದೇಶ ವಲಸಿಗರಿಗೆ ಮತದಾರರ ಗುರುತಿನ ಚೀಟಿ ನೀಡುವ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.  ನಾರ್ತ್‌ 24 ಪರಗಣ ಜಿಲ್ಲೆಯ ಸ್ಥಳೀಯ ನಾಯಕಿಯಾದ ರತ್ನಾ ವಿಶ್ವಾಸ್‌ ಅವರು ಟಿಎಂಸಿ ಸಂಸದ ಎಂ.ಕೆ ಕಾಕೋಲಿ ಘೋಷ್‌ ದಸ್ತಿದಾರ್‌ ಅವರ ಜನ್ಮದಿನದ ಕಾರ್ಯಕ್ರಮದ ವೇಳೆ ಭರವಸೆ ನೀಡಿದ್ದಾರೆ. “ಮೂರು ತಿಂಗಳಲ್ಲಿ 2024ರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಮಾಡಲಾಗುತ್ತದೆ. ಹಾಗಾಗಿ, ಬಾಂಗ್ಲಾದೇಶದ ನಾಗರಿಕರಿಗೂ ಮತದಾರರ ಗುರುತಿನ ಚೀಟಿ ಸಿಗಲು ಟಿಎಂಸಿ ನೆರವು ನೀಡುತ್ತದೆ” ಎಂದು ರತ್ನಾ ವಿಶ್ವಾಸ್‌ ಹೇಳಿರುವ ವಿಡಿಯೊ ವೈರಲ್‌ ಆಗಿದೆ. 

“ಮತದಾರರ ಗುರುತಿನ ಚೀಟಿಗೆ ಹೆಸರು ಸೇರಿಸುವ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿರುವುದು ನಿಮಗೆಲ್ಲ ಗೊತ್ತಿದೆ. ಸ್ಥಳೀಯ ನಾಯಕ ಜಾಕೀರ್‌ ಹುಸೇನ್‌ ಅವರ ಏರಿಯಾದಲ್ಲಿ ತುಂಬ ಜನ ಬಾಂಗ್ಲಾದೇಶದ ವಲಸಿಗರು ಇದ್ದಾರೆ. ನೀವು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ತೊಂದರೆಯಾದರೆ, ಜಾಕೀರ್‌ ಹುಸೇನ್‌ ಅವರನ್ನು ಸಂಪರ್ಕಿಸಿ. ಬಾಂಗ್ಲಾದೇಶದ ಒಬ್ಬ ವಲಸಿಗರೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು” ಎಂದು ರತ್ನಾ ವಿಶ್ವಾಸ್ ಹೇಳಿದ್ದಾರೆ. ಜಾಕೀರ್‌ ಹುಸೇನ್‌ ಅವರು ಟಿಎಂಸಿಯ ಸ್ಥಳೀಯ ನಾಯಕರಾಗಿದ್ದಾರೆ.

ಬಿಜೆಪಿ ಆಕ್ರೋಶ
ರತ್ನಾ ವಿಶ್ವಾಸ್‌ ಅವರ ವಿಡಿಯೊ ವೈರಲ್‌ ಆಗುತ್ತಲೇ, ಬಿಜೆಪಿ ನಾಯಕರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶದಿಂದ ಬಂದು ಅಕ್ರಮವಾಗಿ ನೆಲೆಸಿರುವ ವಲಸಿಗರಿಗೆ ಮತದಾರರ ಗುರುತಿನ ಚೀಟಿ ನೀಡುವ ಮೂಲಕ ಟಿಎಂಸಿಯು ಓಲೈಕೆ ರಾಜಕಾರಣ ಮಾಡುತ್ತಿದೆ. ಇದು ಕಾನೂನು ಬಾಹಿರವ ಆಗಿದೆ. ಹಾಗಾಗಿ, ಚುನಾವಣೆ ಆಯೋಗವು ನಾಯಕಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ. ಅಂತೆಯೇ ಚುನಾವಣೆ ಆಯೋಗಕ್ಕೆ ದೂರು ನೀಡಲು ಕೂಡ ಬಿಜೆಪಿ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com