ಬಿಹಾರ: ದುರ್ಗಾ ಪೂಜೆ ಪಂಡಾಲ್ ನಲ್ಲಿ ಕಾಲ್ತುಳಿತ; 3 ಸಾವು, ಹಲವರಿಗೆ ಗಾಯ

ನವರಾತ್ರಿ ಅಂಗವಾಗಿ ಉತ್ತರ ಭಾರತದಲ್ಲಿ ದುರ್ಗಾಪೂಜೆ ಸಂಭ್ರಮಾಚರಣೆ ನಡೆಯುತ್ತಿದ್ದು, ಇದೇ ರೀತಿಯ ಪಂಡಾಲ್ ನಲ್ಲಿ ಕಾಲ್ತುಳಿತ ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ದುರ್ಗಾ ಪಂಡಾಲ್ ನಲ್ಲಿ ಕಾಲ್ತುಳಿತ
ದುರ್ಗಾ ಪಂಡಾಲ್ ನಲ್ಲಿ ಕಾಲ್ತುಳಿತ

ಪಾಟ್ನಾ: ನವರಾತ್ರಿ ಅಂಗವಾಗಿ ಉತ್ತರ ಭಾರತದಲ್ಲಿ ದುರ್ಗಾಪೂಜೆ ಸಂಭ್ರಮಾಚರಣೆ ನಡೆಯುತ್ತಿದ್ದು, ಇದೇ ರೀತಿಯ ಪಂಡಾಲ್ ನಲ್ಲಿ ಕಾಲ್ತುಳಿತ ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಸೋಮವಾರ ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ದುರ್ಗಾಪೂಜಾ ಪಂಡಾಲ್ ನಲ್ಲಿ ನಡೆದ ಕಾಲ್ತುಳಿತದಲ್ಲಿ ಐದು ವರ್ಷದ ಬಾಲಕ ಮತ್ತು ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದರೆ, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡವರನ್ನು ಸದರ್​ ಆಸ್ಪತ್ರೆಗೆ ದಾಖಲಿಸಲಾಗಿದೆ, ಜನಸಂದಣಿಯನ್ನು ನಿರ್ವಹಿಸಲು ಪೂಜೆ ವೇಳೆ ಯಾವುದೇ ಭದ್ರತಾ ನಿಯೋಜನೆ ಇರಲಿಲ್ಲ, ಇದು ಕಾಲ್ತುಳಿತಕ್ಕೆ ಕಾರಣವಾಯಿತು.ಗೋಪಾಲ್‌ಗಂಜ್ ಎಸ್‌ಪಿ ಮಾತನಾಡಿ, ರಾತ್ರಿ 8.30 ರ ಸುಮಾರಿಗೆ ಕಾಲ್ತುಳಿತ ಸಂಭವಿಸಿದೆ. ಬಾಲಕ ನೆಲಕ್ಕೆ ಬಿದ್ದು ತುಳಿತಕ್ಕೊಳಗಾಗಿದ್ದ, ಆತನನ್ನು ರಕ್ಷಿಸಲು ಹೋದ ಇನ್ನೂ ಇಬ್ಬರು ಕೂಡ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸ್ವರ್ಣ ಪ್ರಭಾತ್ ತಿಳಿಸಿದ್ದಾರೆ.

ಮೃತರಲ್ಲಿ ಕುಚಯ್‌ಕೋಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಸಾಮುಸಾ ನಿವಾಸಿ ರವೀಂದ್ರ ಸಾಹ್ ಅವರ 55 ವರ್ಷದ ಪತ್ನಿ ಊರ್ಮಿಳಾ ದೇವಿ, ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಸ್ದಿಲಾ ಗ್ರಾಮದ ನಿವಾಸಿ ಭೋಜ್ ಶರ್ಮಾ ಅವರ 60 ವರ್ಷದ ಪತ್ನಿ ಶಾಂತಿ ದೇವಿ ಮತ್ತು 5 ವರ್ಷದ ಆಯುಷ್ ಕುಮಾರ್ ಸೇರಿದ್ದಾರೆ. ಮಂಜಾ ಪೊಲೀಸ್ ಠಾಣೆ ವ್ಯಾಪ್ತಿಯ ಸನಾಹ್ ಮಥಿಯಾ ಗ್ರಾಮದ ನಿವಾಸಿ ದಿಲೀಪ್ ರಾಮ್ ಅವರ ಪುತ್ರ ಎನ್ನಲಾಗಿದೆ. ಪೂಜಾ ಸಮಿತಿಗಳ ಮನವಿ ಮೇರೆಗೆ ವಿಜಯದಶಮಿ ದಿನದಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಜಾತ್ರೆ ನಡೆಸಲು ಅನುಮತಿ ನೀಡಲಾಗಿದೆ. ಪ್ರಸ್ತುತ ಪರಿಸ್ಥಿತಿ ಸಾಮಾನ್ಯವಾಗಿದೆ. ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಪ್ರಸಾದ ಸ್ವೀಕರಿಸಲು ನೂಕುನುಗ್ಗಲು
ದುರ್ಗಾ ಪಂಡಾಲ್ ನಲ್ಲಿ ಪ್ರಸಾದ ಸ್ವೀಕರಿಸಲು ನೂರಾರು ಮಂದಿ ಸಾಲುಗಟ್ಟಿ ನಿಂತಿದ್ದರು. ಈ ವೇಳೆ ಮಗುವೊಂದು ಕೆಳಗೆಬಿದ್ದಿದೆ. ಕೂಡಲೇ ಇಬ್ಬರು ವೃದ್ಧ ಮಹಿಳೆಯರು ಆತನನ್ನು ರಕ್ಷಣೆ ಮಾಡಲು ಮುಂದಾಗಿದ್ದು, ಈ ವೇಳೆ ಬಗ್ಗಿದಾಗ ಏಕಾಏಕಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ನಂತರದ ಗಲಾಟೆಯಲ್ಲಿ 13 ಮಹಿಳೆಯರು ಮತ್ತು ಮಗುವಿಗೆ ಗಾಯವಾಯಿತು. ಅವರನ್ನು ಸದರ್ ಆಸ್ಪತ್ರೆಗೆ ಸಾಗಿಸಲಾಯಿತು. ಈ ವೇಳೆ ಬಾಲಕ ಮತ್ತು ಇಬ್ಬರು ವೃದ್ಧ ಮಹಿಳೆಯರು ಸಾವನ್ನಪ್ಪಿದ್ದಾರೆ. ಉಳಿದವರು ಅಪಾಯದಿಂದ ಪಾರಾಗಿದ್ದಾರೆ" ಎಂದು ಎಸ್ಪಿ ಹೇಳಿದರು.

ಏತನ್ಮಧ್ಯೆ, ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಘಟನೆಯ ಸ್ಥಳದ ಸುತ್ತಮುತ್ತಲಿನ ಪ್ರದೇಶವನ್ನು ಮುಚ್ಚಲಾಗಿದೆ ಎಂದು ಅವರು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com