ತೆಲಂಗಾಣ ವಿಧಾನಸಭೆ ಚುನಾವಣೆ: ಪ್ರಚಾರದ ವೇಳೆ ಬಿಆರ್‌ಎಸ್ ಸಂಸದ ಕೋತಾ ಪ್ರಭಾಕರ್ ರೆಡ್ಡಿಗೆ ಚಾಕು ಇರಿತ

ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಪ್ರಚಾರ ನಡೆಸುತ್ತಿದ್ದ ವೇಳೆ ತೆಲಂಗಾಣ ಸಂಸದ ಕೋತಾ ಪ್ರಭಾಕರ್ ರೆಡ್ಡಿ ಅವರಿಗೆ ಸೋಮವಾರ ಅಪರಿಚಿತ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ. ಅವರು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ದುಬ್ಬಾಕ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.
ಬಿಆರ್‌ಎಸ್ ಸಂಸದ ಪ್ರಭಾಕರ್ ರೆಡ್ಡಿಗೆ ಚಾಕು ಇರಿತ
ಬಿಆರ್‌ಎಸ್ ಸಂಸದ ಪ್ರಭಾಕರ್ ರೆಡ್ಡಿಗೆ ಚಾಕು ಇರಿತ

ಸಂಗಾರೆಡ್ಡಿ: ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಪ್ರಚಾರ ನಡೆಸುತ್ತಿದ್ದ ವೇಳೆ ತೆಲಂಗಾಣ ಸಂಸದ ಕೋತಾ ಪ್ರಭಾಕರ್ ರೆಡ್ಡಿ ಅವರಿಗೆ ಸೋಮವಾರ ಅಪರಿಚಿತ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ. ಅವರು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ದುಬ್ಬಾಕ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.

57 ವರ್ಷದ ಪ್ರಭಾಕರ್ ರೆಡ್ಡಿ ಅವರು ದುಬ್ಬಾಕ್ ಪ್ರದೇಶದ ಸೂರಂಪಲ್ಲಿ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾಗ ದಾಳಿ ನಡೆಸಲಾಗಿದೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 

ರೆಡ್ಡಿ ಅವರನ್ನು ಕೂಡಲೇ ಗಜ್ವೆಲ್ ಆಸ್ಪತ್ರೆಗೆ ರವಾನಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಆರೋಪಿಯನ್ನು ಕರೀಂನಗರ ಮೂಲದ ರಾಜು ಎಂದು ಗುರುತಿಸಲಾಗಿದ್ದು, ಆತ ಯೂಟ್ಯೂಬ್ ಪತ್ರಕರ್ತ ಎನ್ನಲಾಗಿದೆ. 'ತೆಲಂಗಾಣ ದಲಿತ ಬಂಧು ಯೋಜನೆ'ಯ ಫಲಾನುಭವಿಯನ್ನಾಗಿ ಮಾಡುವಂತೆ ಸಂಸದರಿಗೆ ಮನವಿ ಮಾಡಿದ್ದರೂ, ಅವರು ಮಂಜೂರು ಮಾಡಿಲ್ಲ ಎಂದು ರಾಜು ಪೊಲೀಸರಿಗೆ ತಿಳಿಸಿದ್ದಾರೆ.

ಸಂಸದರ ಕೈಕುಲುಕುವ ನೆಪದಲ್ಲಿ ರಾಜು ಚಾಕುವನ್ನು ಹೊರತೆಗೆದು ಸಂಸದರ ಹೊಟ್ಟೆಗೆ ಇರಿದಿದ್ದಾನೆ. ಅಲ್ಲಿದ್ದ ಬಿಆರ್‌ಎಸ್ ಕಾರ್ಯಕರ್ತರು ಆರೋಪಿಯನ್ನು ಹಿಡಿದು ಥಳಿಸಿದ್ದಾರೆ.

ಘಟನೆ ನಂತರ ವಿತ್ತ ಸಚಿವ ಟಿ ಹರೀಶ್ ರಾವ್ ಅವರು ಗಜ್ವೆಲ್ ಆಸ್ಪತ್ರೆಯಲ್ಲಿ ಪ್ರಭಾಕರ್ ರೆಡ್ಡಿ ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ.

ಈಮಧ್ಯೆ, ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರು ಘಟನೆಯನ್ನು ಖಂಡಿಸಿದ್ದಾರೆ ಮತ್ತು ಪ್ರಭಾಕರ್ ರೆಡ್ಡಿ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

'ದೌಲ್ತಾಬಾದ್ ಮಂಡಲದ ಸೂರಂಪಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮೇದಕ್ ಸಂಸದ ಮತ್ತು ಬಿಆರ್‌ಎಸ್‌ನ ದುಬ್ಬಾಕ್ ಕ್ಷೇತ್ರದ ಅಭ್ಯರ್ಥಿ ಕೋತಾ ಪ್ರಭಾಕರ ರೆಡ್ಡಿ ಅವರ ಮೇಲೆ ನಡೆದ ಹಲ್ಲೆ ಬಗ್ಗೆ ತಿಳಿದು ನನಗೆ ಆಘಾತವಾಗಿದೆ. ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಸ್ಥಾನವಿಲ್ಲ. ಇಂತಹ ಘಟನೆಗಳು ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಅಪಾಯವಾಗಿದೆ. ಚುನಾವಣಾ ಅವಧಿಯಲ್ಲಿ ಅಭ್ಯರ್ಥಿಗಳು ಮತ್ತು ಪ್ರಚಾರ ನಡೆಸುವವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಠಿಣ ಕ್ರಮ ತೆಗೆದುಕೊಳ್ಳುವಂತೆ ನಾನು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸುತ್ತೇನೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಶಾಂತಿಯುತ ಮತ್ತು ಸುರಕ್ಷಿತ ವಾತಾವರಣವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ' ಎಂದು ರಾಜ್ಯಪಾಲರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com