ಉತ್ತರ ಪ್ರದೇಶ: ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಬಿಜೆಪಿ ಮಾಜಿ ಸಂಸದನ ಪುತ್ರ ಸಾವು!

ಉತ್ತರ ಪ್ರದೇಶದ ಲಖನೌದಲ್ಲಿನ ಎಸ್‌ಜಿಪಿಜಿಐ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ವಾರ್ಡ್‌ನಲ್ಲಿ ಹಾಸಿಗೆಗಳ ಕೊರತೆಯಿಂದಾಗಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಬಿಜೆಪಿಯ ಮಾಜಿ ಸಂಸದರೊಬ್ಬರ ಮಗ ಮೃತಪಟ್ಟ ಘಟನೆ ನಡೆದಿದೆ.
ಭೈರೋನ್ ಪ್ರಸಾದ್ ಮಿಶ್ರಾ
ಭೈರೋನ್ ಪ್ರಸಾದ್ ಮಿಶ್ರಾ

ಲಕ್ನೋ: ಉತ್ತರ ಪ್ರದೇಶದ ಲಖನೌದಲ್ಲಿನ ಎಸ್‌ಜಿಪಿಜಿಐ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ವಾರ್ಡ್‌ನಲ್ಲಿ ಹಾಸಿಗೆಗಳ ಕೊರತೆಯಿಂದಾಗಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಬಿಜೆಪಿಯ ಮಾಜಿ ಸಂಸದರೊಬ್ಬರ ಮಗ ಮೃತಪಟ್ಟ ಘಟನೆ ನಡೆದಿದೆ.

ಮಗನ ಸಾವಿನಿಂದ ದುಃಖಿತರಾದ ತಂದೆ, ಮಗನ ಮೃತದೇಹದೊಟ್ಟಿಗೆ ವಾರ್ಡ್‌ನಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಕೊನೆಗೆ ತಪ್ಪಿತಸ್ಥ ವೈದ್ಯನನ್ನು ಅಮಾನತು ಮಾಡಿದ ಸರ್ಕಾರ, ಮತ್ತಷ್ಟು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

 ಮೃತನನ್ನು ಪ್ರಕಾಶ್ ಮಿಶ್ರಾ (41) ಎಂದು ಗುರುತಿಸಲಾಗಿದ್ದು, ಇವರು ಬಿಜೆಪಿಯ ಮಾಜಿ ಸಂಸದ ಭೈರೋನ್ ಪ್ರಸಾದ್ ಮಿಶ್ರಾ ಪುತ್ರ. ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ ಮಿಶ್ರಾ ಅವರನ್ನು ಸೋಮವಾರ ರಾತ್ರಿ 11 ಗಂಟೆಗೆ ಎಸ್‍ಜಿಪಿಜಿಐ ತುರ್ತು ವಿಭಾಗಕ್ಕೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಬೆಡ್ ಕೊರತೆಯಿಂದಾಗಿ ತುರ್ತು ಚಿಕಿತ್ಸೆ ಸಿಗಲಿಲ್ಲ. ಹೀಗಾಗಿ ಆಸ್ಪತ್ರೆಗೆ ಹೋದ ಸ್ವಲ್ಪ ಸಮಯದ ಬಳಿಕ ಮಗ ಮೃತಪಟ್ಟಿರುವುದಾಗಿ ಪ್ರಸಾದ್ ಮಿಶ್ರಾ ದೂರಿದ್ದಾರೆ. ಅಲ್ಲದೆ ಮಗನ ಶವದೊಂದಿಗೆ ತುರ್ತು ವಾರ್ಡ್‍ನ ಹೊರಗೆ ಪ್ರತಿಭಟನೆ ಮಾಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ ಎಂದು ಪ್ರಸಾದ್ ಮಿಶ್ರಾ ಗೋಳಾಡಿದರು. ನನ್ನ ನಂತರ ಸುಮಾರು 20-25 ಜನರು ಚಿಕಿತ್ಸೆ ಪಡೆದರು. ನಾನು ಪ್ರತಿಭಟನೆಗೆ ಕುಳಿತಾಗ ಎಲ್ಲರೂ ವೈದ್ಯನ ಬಗ್ಗೆ ದೂರು ನೀಡುತ್ತಿದ್ದರು. ಆ ವೈದ್ಯನಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಆಸ್ಪತ್ರೆ ಮುಖ್ಯಸ್ಥ ಡಾ.ಆರ್.ಕೆ.ಮಾನ್ ಮಾತನಾಡಿ, ಆಸ್ಪತ್ರೆಗೆ ದಾಖಲಿಸಿದಾಗ ರೋಗಿಯನ್ನು ಐಸಿಯುಗೆ ಕರೆದೊಯ್ಯಲು ವೈದ್ಯರು ಹೇಳಿದರು. ಆದರೆ ಅಲ್ಲಿ ಬೆಡ್ ಗಳು ಲಭ್ಯವಿಲ್ಲ ಎಂದು ರೋಗಿ ಕಡೆಯವರಿಗೆ ತಿಳಿಸಿದ್ದಾರೆ. ಯಾಕೆ ಬೆಡ್ ಇಲ್ಲ ಎಂದು ಹೇಳಿದರೋ ತಿಳಿದಿಲ್ಲ. ಈ ಸಂಬಂಧ ನಾವು ಸಮಿತಿಯನ್ನು ರಚಿಸಿದ್ದೇವೆ. ನಾವು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಸದ್ಯ ವೈದ್ಯರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.

ಘಟನೆಯ ಕುರಿತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿ, ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಆಸ್ಪತ್ರೆಯ ತಪ್ಪಲ್ಲ. ಆದರೆ ಇದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಪ್ಪು. ಆಸ್ಪತ್ರೆಗೆ ಏಕೆ ಬಜೆಟ್ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com