'ಯಾವುದೇ ಭಯವಿಲ್ಲದೆ ವಿಶೇಷ ಅಧಿವೇಶನದಲ್ಲಿ ಚೀನಾ ಅತಿಕ್ರಮಣದ ಬಗ್ಗೆ ಚರ್ಚಿಸಿ': ಪ್ರಧಾನಿ ಮೋದಿಗೆ ಸಂಜಯ್ ರಾವುತ್

ಲಡಾಖ್‌ನಲ್ಲಿ ಚೀನಾದ ಅತಿಕ್ರಮಣದ ಆರೋಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶಿವಸೇನೆ(ಯುಬಿಟಿ- ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಸಂಜಯ್ ರಾವುತ್ ಭಾನುವಾರ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಭಯವಿಲ್ಲದೆ ಚೀನಾದ ಬಗ್ಗೆ ಚರ್ಚಿಸಬೇಕು ಎಂದು ರಾವುತ್ ಹೇಳಿದರು.
ಸಂಜಯ್ ರಾವುತ್
ಸಂಜಯ್ ರಾವುತ್

ಮುಂಬೈ: ಲಡಾಖ್‌ನಲ್ಲಿ ಚೀನಾದ ಅತಿಕ್ರಮಣದ ಆರೋಪದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶಿವಸೇನೆ(ಯುಬಿಟಿ- ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಸಂಜಯ್ ರಾವುತ್ ಭಾನುವಾರ ವಾಗ್ದಾಳಿ ನಡೆಸಿದ್ದಾರೆ.

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಭಯವಿಲ್ಲದೆ ಚೀನಾದ ಬಗ್ಗೆ ಚರ್ಚಿಸಬೇಕು ಎಂದು ರಾವುತ್ ಹೇಳಿದರು.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಭಾರತದ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿರುವ ಬಗ್ಗೆ ಮತ್ತು ನಕ್ಷೆಯನ್ನು ಬಿಡುಗಡೆ ಮಾಡಿರುವುದರ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕರೆ ನೀಡಿದ್ದಾರೆ ಎಂದು ತಿಳಿದುಬಂದಿದೆ' ಎಂದಿದ್ದಾರೆ.

'ಯಾವುದೇ ಭಯ-ಅಂಜಿಕೆಯಿಲ್ಲದೆಯೇ ವಿಶೇಷ ಅಧಿವೇಶನದಲ್ಲಿ ಚೀನಾದ ನಡೆಯ ಬಗ್ಗೆ ಚರ್ಚಿಸಿ. ಈ ಚರ್ಚೆಯಲ್ಲಿ ನಾವು ಸರ್ಕಾರವನ್ನು ಬೆಂಬಲಿಸುತ್ತೇವೆ' ಎಂದು ರಾವುತ್ ಹೇಳಿದ್ದಾರೆ.

ಗಡಿ ವಿಚಾರದಲ್ಲಿ ಚೀನಾ ಮತ್ತೆ ಕ್ಯಾತೆ ತೆಗೆದಿದ್ದು, ಅರುಣಾಚಲ ಪ್ರದೇಶ ಹಾಗೂ ಅಕ್ಸಾಯ್ ಚಿನ್ ಪ್ರದೇಶ ತನ್ನ ಭೂಭಾಗ ಹೇಳಿಕೊಂಡಿದೆ. ಅಲ್ಲದೆ, 2023ರ ಆವೃತ್ತಿಯ ಅಧಿಕೃತ ನಕ್ಷೆಯನ್ನು ಚೀನಾದ ನೈಸರ್ಗಿಕ ಸಂಪನ್ಮೂಲ ಸಚಿವಾಲಯವು ಬಿಡುಗಡೆ ಮಾಡಿದೆ.

ಈ ಹಿಂದೆ, ಕಾಂಗ್ರೆಸ್ ಸಂಸದ ರೌಹುಲ್ ಗಾಂಧಿ ಅವರು ಲಡಾಖ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಚೀನಾದ ಪೀಪಲ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಪಡೆಗಳು ಭಾರತದ ಒಂದು ಇಂಚು ಭೂಮಿಯನ್ನು ವಶಪಡಿಸಿಕೊಂಡಿಲ್ಲ ಎಂಬ ಕೇಂದ್ರ ಸರ್ಕಾರದ ಹೇಳಿಕೆ ನಿಜವಲ್ಲ. ಭಾರತೀಯ ಭೂಪ್ರದೇಶವನ್ನು ಚೀನಾ ಸೈನಿಕರು ಅತಿಕ್ರಮಿಸಿದ್ದಾರೆ. ಇದು ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದ್ದರು.

'ಚೀನಾ ತಮ್ಮ ಭೂಮಿಯನ್ನು ವಶಪಡಿಸಿಕೊಳ್ಳುತ್ತಿರುವುದರ ಬಗ್ಗೆ ಇಲ್ಲಿನ ಸ್ಥಳೀಯರು ಚಿಂತಿತರಾಗಿದ್ದಾರೆ. ಚೀನಾದ ಸೈನಿಕರು ಅವರ ಗೋಮಾಳವನ್ನು ಕಿತ್ತುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ, ಪ್ರಧಾನಿ ಒಂದು ಇಂಚು ಭೂಮಿಯನ್ನು ಚೀನಾ ಅತಿಕ್ರಮಿಸಿಲ್ಲ ಎಂದು ಹೇಳುತ್ತಾರೆ. ಅವರ ಈ ಹೇಳಿಕೆ ನಿಜವಲ್ಲ. ನೀವು ಇಲ್ಲಿ ಯಾರನ್ನಾದರೂ ಈ ಬಗ್ಗೆ ಕೇಳಬಹುದು' ಎಂದು ರಾಹುಲ್ ಹೇಳಿದ್ದರು.

ರಾಹುಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಅವರ ಹೇಳಿಕೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ವ್ಯಂಗ್ಯವಾಡಿದರು.

'ರಾಹುಲ್ ಗಾಂಧಿ ಅವರು ತಮ್ಮ ಅಜ್ಜ, ಅಜ್ಜಿ ಮತ್ತು ತಂದೆಯ ಅಧಿಕಾರಾವಧಿಯಲ್ಲಿ ಭೂಮಿ ನಷ್ಟದ ಇತಿಹಾಸವನ್ನು ಪರಿಶೀಲಿಸಬೇಕು ಎಂದು ನಾನು ಭಾವಿಸುತ್ತೇನೆ. ಆ ಸಮಯದಲ್ಲಿಯೇ ನಾವು ಭೂಮಿಯನ್ನು ಕಲೆದುಕೊಂಡಿದ್ದೇವೆ. ರಾಹುಲ್ ಗಾಂಧಿ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ' ಎಂದು ಶೇಖಾವತ್ ಹೇಳಿದ್ದಾರೆ.

ಈಮದ್ಯೆ, ಮೋದಿ ಸರ್ಕಾರ ಸೆಪ್ಟೆಂಬರ್ 18 ರಿಂದ 20ರ ನಡುವೆ ವಿಶೇಷ ಅಧಿವೇಶನಕ್ಕೆ ಕರೆ ನೀಡಿದೆ. ಕಳೆದ ತಿಂಗಳು ಮುಕ್ತಾಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನವು ಹಳೆಯ ಸಂಸತ್ತಿನ ಕಟ್ಟಡದಲ್ಲಿ ನಡೆಯಿತು.

ವಿಶೇಷ ಅಧಿವೇಶನದ ಘೋಷಣೆಯು ರಾಜಕೀಯ ವಲಯಗಳಲ್ಲಿ ಅಚ್ಚರಿ ಮೂಡಿಸಿದೆ. ಈ ವರ್ಷದ ಕೊನೆಯಲ್ಲಿ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ. ಸಂಸತ್ತಿನ ಚಳಿಗಾಲದ ಅಧಿವೇಶನ ಸಾಮಾನ್ಯವಾಗಿ ನವೆಂಬರ್ ಕೊನೆಯ ವಾರದಲ್ಲಿ ಪ್ರಾರಂಭವಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com