ಬಾರಾಬಂಕಿ: ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಮೂರು ಅಂತಸ್ಥಿನ ಕಟ್ಟಡ ಕುಸಿದುಬಿದ್ದಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 12 ಮಂದಿಯನ್ನು ರಕ್ಷಿಸಲಾಗಿದೆ.
ಬಾರಾಬಂಕಿಯ ಫತೇಪುರ್‌ನಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ಕಟ್ಟಡ ಕುಸಿದು ಬಿದ್ದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿಗ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಈ ವರೆಗೂ 12 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಅವಶೇಷಗಳಡಿ ಇನ್ನೂ ಮೂವರು ಸಿಲುಕಿರುವ ಶಂಕೆಗಳಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾರಾಬಂಕಿಯಲ್ಲಿ ಕಟ್ಟಡ ಕುಸಿತದ ಬಗ್ಗೆ ಇಂದು ಮುಂಜಾನೆ 3.10 ಕ್ಕೆ ನಮಗೆ ಮಾಹಿತಿ ಬಂದಿತ್ತು. ಕಟ್ಟಡದಲ್ಲಿದ್ದ 16 ಜನರ ಪೈಕಿ 12 ಜನರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ. ಮೂರ್ನಾಲ್ಕು ಮಂದಿ ಇನ್ನು ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಿಸಿರುವ 12 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಸ್‌ಡಿಆರ್‌ಎಫ್ ತಂಡ ಸ್ಥಳದಲ್ಲಿದ್ದು, ಎನ್‌ಡಿಆರ್‌ಎಫ್ ತಂಡ ಶೀಘ್ರದಲ್ಲೇ ಆಗಮಿಸಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಘಟನೆಯಲ್ಲಿ ಮೃತಪಟ್ಟವರ ಹಾಗೂ ಗಾಯಾಳುಗಳ ಪಟ್ಟಿಯನ್ನು ಬಾರಾಬಂಕಿ ಆಡಳಿತ ಮಂಡಳಿಯು ಬಿಡುಗಡೆ ಮಾಡಿದೆ.
Advertisement