ಸರಳ ರೀತಿಯಲ್ಲಿ ಕಾನೂನು ರೂಪಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ: ಪ್ರಧಾನಿ ಮೋದಿ

ನಮ್ಮ ಸರ್ಕಾರವು ಕಾನೂನುಗಳನ್ನು ಸರಳ ರೀತಿಯಲ್ಲಿ ಮತ್ತು ಗರಿಷ್ಠ ಪ್ರಮಾಣದಲ್ಲಿ ಭಾರತೀಯ ಭಾಷೆಗಳಲ್ಲಿ ರಚಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದರು.
ಅಂತರರಾಷ್ಟ್ರೀಯ ವಕೀಲರ ಸಮ್ಮೇಳನ 2023 ರ ವೇದಿಕೆಯಲ್ಲಿ ಮಾತುಕತೆ ನಡೆಸುತ್ತಿರುವ ಪ್ರಧಾನಿ ಮೋದಿ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್.
ಅಂತರರಾಷ್ಟ್ರೀಯ ವಕೀಲರ ಸಮ್ಮೇಳನ 2023 ರ ವೇದಿಕೆಯಲ್ಲಿ ಮಾತುಕತೆ ನಡೆಸುತ್ತಿರುವ ಪ್ರಧಾನಿ ಮೋದಿ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್.

ನವದೆಹಲಿ: ನಮ್ಮ ಸರ್ಕಾರವು ಕಾನೂನುಗಳನ್ನು ಸರಳ ರೀತಿಯಲ್ಲಿ ಮತ್ತು ಗರಿಷ್ಠ ಪ್ರಮಾಣದಲ್ಲಿ ಭಾರತೀಯ ಭಾಷೆಗಳಲ್ಲಿ ರಚಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದರು.

ದೆಹಲಿಯ ವಿಜ್ಞಾನ ಭವನದಲ್ಲಿ ‘ಅಂತರರಾಷ್ಟ್ರೀಯ ವಕೀಲರ ಸಮ್ಮೇಳನ 2023’ ಉದ್ಘಾಟಿಸಿದ ಪ್ರಧಾನಮಂತ್ರಿಗಳು ದೇಶದ ಸ್ವಾತಂತ್ರ್ಯ ಚಳವಳಿ ಮತ್ತು ಅದರ ಮುಂದುವರಿದ ಪ್ರಗತಿಗೆ ಗಣನೀಯ ಕೊಡುಗೆ ನೀಡಿದ ಕಾನೂನು ತಜ್ಞರಿಗೆ ಕೃತಜ್ಞತೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು,  ಭಾರತ ಸರ್ಕಾರದಲ್ಲಿ ನಾವು ಕಾನೂನನ್ನು ಎರಡು ರೀತಿಯಲ್ಲಿ ರಚಿಸಬೇಕೆಂದು ಯೋಚಿಸುತ್ತಿದ್ದೇವೆ. ಒಂದು ಕರಡು ನೀವು ಬಳಸುತ್ತಿರುವ ಭಾಷೆಯಲ್ಲಿರುತ್ತದೆ. ಎರಡನೆಯದು ಕರಡು ದೇಶದ ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿರುತ್ತದೆ. ಏಕೆಂದರೆ ಅದು ಅವರಿಗೂ ಅರ್ಥವಾಗಬೇಕು ಎಂದು ಹೇಳಿದರು.

ಇದೇ ವೇಳೆ ಕಾನೂನು ತಜ್ಞರು ಶ್ಲಾಘಿಸಿದ ಅವರು, ಇತ್ತೀಚೆಗೆ ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಪೂರೈಸಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ, ಕಾನೂನು ತಜ್ಞರು ಮಹತ್ತರ ಪಾತ್ರವಹಿಸಿದ್ದಾರೆ. ಅನೇಕ ವಕೀಲರು ತಮ್ಮ ವೃತ್ತಿ ತೊರೆದು ಸ್ವಾತಂತ್ರ್ಯ ಚಳವಳಿಯಲ್ಲಿ ಸೇರಿದ್ದಾರೆ. ಯಾವುದೇ ದೇಶದ ನಿರ್ಮಾಣದಲ್ಲಿ ಕಾನೂನು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ವರ್ಷಗಳಿಂದ, ನ್ಯಾಯಾಂಗ ಮತ್ತು ವಕೀಲರು ಭಾರತದ ಕಾನೂನು ಮತ್ತು ಸುವ್ಯವಸ್ಥೆಯ ಪೋಷಕರಾಗಿದ್ದಾರೆಂದು ತಿಳಿಸಿದರು.

ಮಹಾತ್ಮಾ ಗಾಂಧಿ, ಬಿ ಆರ್ ಅಂಬೇಡ್ಕರ್, ಜವಾಹರಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ವಕೀಲರಾಗಿದ್ದರು ಎಂದು ಸ್ಮರಿಸಿದರು.

ಭಾರತವು ಹಲವಾರು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿರುವ ಸಮಯದಲ್ಲಿ ಈ ಸಮ್ಮೇಳನ ನಡೆಯುತ್ತಿದೆ. ಇತ್ತೀಚೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿತ್ತು. ನಾರಿ ಶಕ್ತಿ ವಂದನ್ ಅಧಿನಿಯಮ್  ಭಾರತದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿ’ಗೆ ಹೊಸ ದಿಶೆ ಮತ್ತು ಶಕ್ತಿಯನ್ನು ನೀಡುತ್ತದೆ ಎಂದರು.

ಬಳಿಕ ಜಿ 20 ಶೃಂಗಸಭೆ ಮತ್ತು ಚಂದ್ರಯಾನ ಯೋಜನೆ ಯಶಸ್ವಿ ಬಗ್ಗೆಯೂ ಪ್ರಧಾನಮಂತ್ರಿಗಳು ಮಾತನಾಡಿದರು.

2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಲಾಗಿದೆ. ಈ ಉದ್ದೇಶವನ್ನು ಸಾಧಿಸಲು ಪಕ್ಷಪಾತವಿಲ್ಲದ, ಬಲವಾದ ಮತ್ತು ಸ್ವತಂತ್ರ ನ್ಯಾಯಾಂಗದ ಅಗತ್ಯವಿದೆ. ಈ ಸಮ್ಮೇಳನದ ಮೂಲಕ ನಾವೆಲ್ಲರೂ ಪರಸ್ಪರ ಕಲಿಯಬಹುದು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com