ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆಗೆ ಬೆದರಿಕೆ ಕರೆ; ಪುಣೆಯ 42 ವರ್ಷದ ವ್ಯಕ್ತಿಯ ಬಂಧನ
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಹಾನಿ ಮಾಡುವುದಾಗಿ ಬೆದರಿಕೆ ಒಡ್ಡಿದ ಆರೋಪದ ಮೇಲೆ ಪುಣೆಯ 42 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
Published: 11th April 2023 12:09 PM | Last Updated: 11th April 2023 12:10 PM | A+A A-

ಏಕನಾಥ್ ಶಿಂಧೆ
ಪುಣೆ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಹಾನಿ ಮಾಡುವುದಾಗಿ ಬೆದರಿಕೆ ಒಡ್ಡಿದ ಆರೋಪದ ಮೇಲೆ ಪುಣೆಯ 42 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಮುಂಬೈನ ಆಸ್ಪತ್ರೆಯೊಂದರಲ್ಲಿ ವಾರ್ಡ್ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿರುವ ಆರೋಪಿ ರಾಜೇಶ್ ಅಗ್ವಾನೆ ಸೋಮವಾರ ರಾತ್ರಿ ಮದ್ಯದ ಅಮಲಿನಲ್ಲಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಬೆದರಿಕೆಯೊಡ್ಡಿದ್ದಾನೆ ಎಂದು ಅವರು ಹೇಳಿದರು.
ಸೋಮವಾರ ರಾತ್ರಿ, ಪೊಲೀಸ್ ನಿಯಂತ್ರಣ ಕೊಠಡಿ ಸಂಖ್ಯೆ 112 ಕ್ಕೆ ಕರೆ ಮಾಡಿದ ವ್ಯಕ್ತಿ, ವೈದ್ಯಕೀಯ ನೆರವು ಕೋರಿದ್ದಾರೆ. ಬಳಿಕ 108 (ಆಂಬ್ಯುಲೆನ್ಸ್ ಸೇವಾ ಸಂಖ್ಯೆ) ಕ್ಕೆ ಕರೆ ಮಾಡಲು ತಿಳಿಸಲಾಗಿದೆ. ಬಳಿಕ ಆ ವ್ಯಕ್ತಿ ಮತ್ತೆ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದು, ಮುಖ್ಯಮಂತ್ರಿಗೆ ಹಾನಿ ಮಾಡುವುದಾಗಿ ಬೆದರಿಯೆಯೊಡ್ಡಿದ್ದಾನೆ ಎಂದು ಪುಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆ ವ್ಯಕ್ತಿ ಮದ್ಯಪಾನ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಇದನ್ನೂ ಓದಿ: ಹಿಂಡಲಗಾ ಜೈಲಿನಿಂದ ನಿತಿನ್ ಗಡ್ಕರಿಗೆ ಬೆದರಿಕೆ ಹಾಕಿದ್ದ ಕೈದಿಯನ್ನು ಮಹಾರಾಷ್ಟ್ರಕ್ಕೆ ಕರೆದೊಯ್ದ ನಾಗ್ಪುರ ಪೊಲೀಸರು
'ವ್ಯಕ್ತಿ ಫೋನ್ ಮಾಡಿದಾಗ ಅಲ್ಲೇ ಇದ್ದ ಆತನ ಹೆಂಡತಿ, ಆ ವ್ಯಕ್ತಿ ಕುಡಿದಿದ್ದಾನೆ ಮತ್ತು ಆತ ಏನು ಹೇಳುತ್ತಿದ್ದಾನೆಂಬುದು ಆತನಿಗೆ ತಿಳಿದಿಲ್ಲ ಮತ್ತು ಆತನ ಹೇಳಿಕೆಗಳನ್ನು ನಿರ್ಲಕ್ಷ್ಯಿಸುವಂತೆ ಕಂಟ್ರೋಲ್ ರೂಂ ಅಧಿಕಾರಿಗಳಿಗೆ ವಿನಂತಿಸಿದರು' ಎಂದು ಅಧಿಕಾರಿ ಹೇಳಿದರು.
ಪುಣೆಯ ವಾರ್ಜೆ ಪ್ರದೇಶದಿಂದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.