ಶ್ರೀನಗರದಲ್ಲಿ ಜಿ20 ಸಭೆ ನಡೆಸುವ ಭಾರತದ ನಿರ್ಧಾರದ ವಿರುದ್ಧ ಅಳಲು ತೋಡಿಕೊಂಡ ಪಾಕಿಸ್ತಾನ!

ಜಮ್ಮು ಮತ್ತು ಕಾಶ್ಮೀರದಲ್ಲಿ ಜಿ-20 ಪ್ರವಾಸೋದ್ಯಮ ಕಾರ್ಯಕಾರಿ ಗುಂಪಿನ ಸಭೆಯ ಬಗ್ಗೆ ನೆರೆಯ ರಾಷ್ಟ್ರ ಪಾಕಿಸ್ತಾನ ಕೆರಳಿದ್ದು, ಈ ಸಭೆಗೆ ಸಂಬಂಧಿಸಿದಂತೆ ಭಾರತದ ನಿರ್ಧಾರಕ್ಕೆ ಪಾಕಿಸ್ತಾನ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಜಿ20 ಸಭೆ
ಜಿ20 ಸಭೆ

ಇಸ್ಲಾಮಾಬಾದ್/ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಜಿ-20 ಪ್ರವಾಸೋದ್ಯಮ ಕಾರ್ಯಕಾರಿ ಗುಂಪಿನ ಸಭೆಯ ಬಗ್ಗೆ ನೆರೆಯ ರಾಷ್ಟ್ರ ಪಾಕಿಸ್ತಾನ ಕೆರಳಿದ್ದು, ಈ ಸಭೆಗೆ ಸಂಬಂಧಿಸಿದಂತೆ ಭಾರತದ ನಿರ್ಧಾರಕ್ಕೆ ಪಾಕಿಸ್ತಾನ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 

ಭಾರತವು ತನ್ನ 'ಸ್ವಾರ್ಥ ಅಜೆಂಡಾ'ವನ್ನು ಮುಂದುವರಿಸಲು ಪ್ರಮುಖ ಅಂತಾರಾಷ್ಟ್ರೀಯ ಗುಂಪಿನ ಸದಸ್ಯತ್ವದ ಲಾಭವನ್ನು ಪಡೆಯುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಭಾರತದ ಈ ಬೇಜವಾಬ್ದಾರಿ ಕ್ರಮವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ನಿರ್ಣಯಗಳಿಗೆ ವಿರುದ್ಧವಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿದೆ.

ಇದು ಮಾತ್ರವಲ್ಲದೆ, ಮುಂದಿನ ತಿಂಗಳು ಲೇಹ್ ಮತ್ತು ಶ್ರೀನಗರದಲ್ಲಿ ಯುವ ವ್ಯವಹಾರಗಳ ಸಮಾಲೋಚನಾ ವೇದಿಕೆಯ(Y20) ಎರಡು ಸಭೆಗಳಿಗೂ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಸಮುದಾಯದ ಜವಾಬ್ದಾರಿಯುತ ಸದಸ್ಯರಾಗಿ ಕಾರ್ಯನಿರ್ವಹಿಸಲು ಭಾರತಕ್ಕೆ ಸಾಧ್ಯವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಪಾಕಿಸ್ತಾನ ಹೇಳಿದೆ. 2023ರ ಮೇ 22ರಿಂದ ಮೇ 24ರವರೆಗೆ ಜಿ-20 ಪ್ರವಾಸೋದ್ಯಮ ಕಾರ್ಯ ಗುಂಪಿನ ಸಭೆ ಶ್ರೀನಗರದಲ್ಲಿ ನಡೆಯಲಿದೆ.

ಭಾರತದ ಈ ಕ್ರಮಗಳನ್ನು ನಾವು ಖಂಡಿಸುತ್ತೇವೆ ಎಂದು ಪಾಕಿಸ್ತಾನ ಹೇಳಿದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದ ವಾಸ್ತವತೆಯನ್ನು ಮರೆಮಾಚಲು ಸಾಧ್ಯವಿಲ್ಲ. ಭಾರತದ ಇಂತಹ ಚಟುವಟಿಕೆಗಳಿಂದ ಅಂತರಾಷ್ಟ್ರೀಯ ಸಮುದಾಯದ ಗಮನವನ್ನು ಕಾಶ್ಮೀರದಿಂದ ಬೇರೆಡೆಗೆ ತಿರುಗಿಸಲು ಸಾಧ್ಯವಿಲ್ಲ ಎಂದು ನೆರೆಯ ದೇಶವೂ ಹೇಳಿದೆ.

2019ರಲ್ಲಿ ಕಣಿವೆಯಿಂದ 370ನೇ ವಿಧಿಯನ್ನು ತೆಗೆದುಹಾಕಿದ ನಂತರ, ಮೊದಲ ಬಾರಿಗೆ ಜಿ20 ಸಭೆಯಂತಹ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಭಾರತವು ಡಿಸೆಂಬರ್ 2022ರಲ್ಲಿ ಜಿ20 ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿತು. ಸೆಪ್ಟೆಂಬರ್ ಆರಂಭದಲ್ಲಿ ರಾಜಧಾನಿ ದೆಹಲಿಯಲ್ಲಿ ಜಿ-20 ಶೃಂಗಸಭೆ ನಡೆಯಲಿದೆ.

G-20 ಸದಸ್ಯ ರಾಷ್ಟ್ರಗಳು
ಭಾರತ, ಅರ್ಜೆಂಟೀನಾ, ಬ್ರೆಜಿಲ್, ಕೆನಡಾ, ಆಸ್ಟ್ರೇಲಿಯಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಮೆಕ್ಸಿಕೋ, ಯುನೈಟೆಡ್ ಕಿಂಗ್ಡಮ್, ಅಮೇರಿಕಾ, ಮತ್ತು ಯುರೋಪಿಯನ್ ಒಕ್ಕೂಟ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com