ಅಯೋಧ್ಯೆ, ಪ್ರಯಾಗರಾಜ್, ಬೆಂಗಳೂರು, ದೆಹಲಿಯಲ್ಲಿ ಹೊಸ ಅತಿಥಿ ಗೃಹ ನಿರ್ಮಾಣಕ್ಕೆ ಯೋಗಿ ಆದಿತ್ಯನಾಥ್ ಆದೇಶ
ಉತ್ತರ ಪ್ರದೇಶದ ಅಯೋಧ್ಯೆ, ಪ್ರಯಾಗರಾಜ್, ಕರ್ನಾಟಕದ ಬೆಂಗಳೂರು ಮತ್ತು ದೆಹಲಿಯಲ್ಲಿ ರಾಜ್ಯದ ಹೊಸ ಅತಿಥಿ ಗೃಹಗಳನ್ನು ನಿರ್ಮಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
Published: 08th August 2023 10:25 AM | Last Updated: 08th August 2023 10:25 AM | A+A A-

ಯೋಗಿ ಆದಿತ್ಯನಾಥ್
ಲಖನೌ: ಉತ್ತರ ಪ್ರದೇಶದ ಅಯೋಧ್ಯೆ, ಪ್ರಯಾಗರಾಜ್, ಕರ್ನಾಟಕದ ಬೆಂಗಳೂರು ಮತ್ತು ದೆಹಲಿಯಲ್ಲಿ ರಾಜ್ಯದ ಹೊಸ ಅತಿಥಿ ಗೃಹಗಳನ್ನು ನಿರ್ಮಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ರಾಜ್ಯ ಎಸ್ಟೇಟ್ ಇಲಾಖೆಯ ಕೆಲಸವನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು, ರಾಜ್ಯದ ಅತಿಥಿಗಳಿಗಾಗಿ ಪ್ರಯಾಗರಾಜ್ ಮತ್ತು ಅಯೋಧ್ಯೆಯಲ್ಲಿ ಹೊಸ ಅತಿಥಿ ಗೃಹಗಳ ಅವಶ್ಯಕತೆಯಿದೆ ಎಂದು ಹೇಳಿದರು.
ಅದೇ ರೀತಿ, ಕರ್ನಾಟಕದ ಬೆಂಗಳೂರಿನಲ್ಲಿ ಹೊಸ ರಾಜ್ಯ ಅತಿಥಿ ಗೃಹವನ್ನು ನಿರ್ಮಿಸಬೇಕು ಮತ್ತು ಅದಕ್ಕಾಗಿ ಭೂಮಿಯನ್ನು ಆದಷ್ಟು ಬೇಗ ಗುರುತಿಸಬೇಕು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ದೆಹಲಿಯಲ್ಲಿ ಯುಪಿ ಭವನ, ಯುಪಿ ಸದನ್ ಮತ್ತು ಇಂದ್ರಪ್ರಸ್ಥ ಅತಿಥಿ ಗೃಹ ಲಭ್ಯವಿದ್ದರೂ, ನಗರದಲ್ಲಿ ಮತ್ತೊಂದು ಅತಿಥಿ ಗೃಹದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಹೇಳಿದರು.
ರಾಷ್ಟ್ರ ರಾಜಧಾನಿ ದೆಹಲಿ ಪ್ರದೇಶದ ಭಾಗವಾಗಿರುವ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ಸೆಕ್ಟರ್ 148 ರಲ್ಲಿ ಸೂಕ್ತವಾದ ಭೂಮಿ ಲಭ್ಯವಿದೆ ಎಂದರು.
ಶಾಸಕರ ನಿವಾಸಗಳು ಮತ್ತು ಅತಿಥಿ ಗೃಹಗಳ ವ್ಯವಸ್ಥೆಯನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು ಕಟ್ಟಡಗಳಲ್ಲಿನ ಸೌಲಭ್ಯಗಳು ಮತ್ತು ಭದ್ರತೆಗೆ ವಿಶೇಷ ಒತ್ತು ನೀಡಿದರು.