Chandrayaan-3: ಚಂದ್ರನ ಅಂತಿಮ ಕಕ್ಷೆ ತಲುಪಿದ ಇಸ್ರೋ ನೌಕೆ, ಪ್ರೊಪಲ್ಷನ್ ಮತ್ತು ಲ್ಯಾಂಡರ್ ಮಾಡ್ಯೂಲ್‌ ಪ್ರತ್ಯೇಕಗೊಳ್ಳಲು ಕ್ಷಣಗಣನೆ ಆರಂಭ

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಬುಧವಾರ ಚಂದ್ರನ ಐದನೇ ಹಾಗೂ ಅಂತಿಮ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ್ದು, ಪ್ರೊಪಲ್ಷನ್ ಮತ್ತು ಲ್ಯಾಂಡರ್ ಮಾಡ್ಯೂಲ್‌ ಪ್ರತ್ಯೇಕಗೊಳ್ಳಲು ಕ್ಷಣಗಣನೆ ಆರಂಭವಾಗಿದೆ.
ಇಸ್ರೋ ಚಂದ್ರಯಾನ ನೌಕೆ
ಇಸ್ರೋ ಚಂದ್ರಯಾನ ನೌಕೆ

ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಬುಧವಾರ ಚಂದ್ರನ ಐದನೇ ಹಾಗೂ ಅಂತಿಮ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ್ದು, ಪ್ರೊಪಲ್ಷನ್ ಮತ್ತು ಲ್ಯಾಂಡರ್ ಮಾಡ್ಯೂಲ್‌ ಪ್ರತ್ಯೇಕಗೊಳ್ಳಲು ಕ್ಷಣಗಣನೆ ಆರಂಭವಾಗಿದೆ.

ಹೌದು.. ಇಸ್ರೋದ ಚಂದ್ರಯಾನ-3 ನೌಕೆಯು ಬುಧವಾರ ಚಂದ್ರನ ಐದನೇ ಹಾಗೂ ಅಂತಿಮ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ್ದು, ಆ ಮೂಲಕ ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರವಾಗಿದೆ. ಈ ಕುರಿತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದ್ದು, ಚಂದ್ರನ ಕಕ್ಷೆಗೆ ಅಂತಿಮ ಪರಿಚಲನೆಯು ಪೂರ್ಣಗೊಂಡಿದೆ (153 km x 163 km) ಎಂದು ಹೇಳಿದೆ.

ಈಗ ಲ್ಯಾಂಡರ್ ಮಾಡ್ಯೂಲ್‌ನಿಂದ ಪ್ರೊಪಲ್ಷನ್ ಮಾಡ್ಯೂಲ್ (ಉಡ್ಡಯನ ವಾಹಕ) ಪ್ರತ್ಯೇಕಿಸುವ ಸಮಯ. ಇದಕ್ಕೆ ಆಗಸ್ಟ್ 17ರಂದು ಮುಹೂರ್ತ ನಿಗದಿಯಾಗಿದೆ. ಆ ಮೂಲಕ ಪ್ರೊಪಲ್ಷನ್ ಮತ್ತು ಲ್ಯಾಂಡರ್ ಮಾಡ್ಯೂಲ್‌ ಪ್ರತ್ಯೇಕಗೊಳ್ಳಲು ಕ್ಷಣಗಣನೆ ಆರಂಭವಾಗಿದೆ ಎಂದು ತಿಳಿಸಿದೆ.

ಜುಲೈ 14ರಂದು ಉಡಾವಣೆಗೊಂಡ ಚಂದ್ರಯಾನ-3 ನೌಕೆ ಆಗಸ್ಟ್ 5ರಂದು ಚಂದ್ರನ ಕಕ್ಷೆ ಪ್ರವೇಶಿಸಿತ್ತು. ಅದಾದ ಬಳಿಕ ಸತತ ಮೂರು ಕಕ್ಷೆ ಪರಿಚಲನೆ ಮೂಲಕ (ಆಗಸ್ಟ್ 6, 9 ಹಾಗೂ 14) ಚಂದ್ರನ ಮೇಲ್ಮೈಯ ಸನಿಹಕ್ಕೆ ತಲುಪಿದೆ. ಆಗಸ್ಟ್ 23ರಂದು ಸಾಫ್ಟ್ ಲ್ಯಾಂಡಿಂಗ್ ಮೂಲಕ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಲು ಯೋಜಿಸಲಾಗಿದೆ. 

ಇಸ್ರೋ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದು, ಈವರೆಗೂ ಯೋಜನೆಯಂತೆಯೇ ಚಂದ್ರಯಾನ-3 ನೌಕೆ ಸರಾಗವಾಗಿ ಸಾಗುತ್ತಿದೆ ಎಂದು ಇಸ್ರೋ ತಿಳಿಸಿದ್ದು, ಆದರೆ ಈ ಮಿಷನ್​ ಪೂರ್ಣಗೊಳ್ಳಬೇಕಾದರೆ, ಚಂದ್ರನ ಮೇಲೆ ಮೃದುವಾಗಿ ಲ್ಯಾಂಡ್​ ಆಗಬೇಕಿರುವುದು ತುಂಬಾ ಮುಖ್ಯ. ಈ ತಿಂಗಳ 23ರಂದು ಸಾಫ್ಟ್​ ಲ್ಯಾಂಡಿಂಗ್​ಗೆ ಪ್ರಯತ್ನ ಮಾಡುತ್ತೇವೆ ಎಂದು ಇಸ್ರೋ ತಿಳಿಸಿದೆ.

163 ಕಿ.ಮೀ ದೂರವಷ್ಟೇ
ಆಗಸ್ಟ್​ 15ರ ಮಂಗಳವಾರ ಬಾಹ್ಯಾಕಾಶ ನೌಕೆ ಮಹತ್ವದ ಫೈರಿಂಗ್​ ಆಪರೇಷನ್​ ಅನ್ನು ಯಶಸ್ವಿಯಾಗಿ ಮುಗಿಸಿದ್ದು, ನೌಕೆಯನ್ನು ಚಂದ್ರನ ಸುತ್ತ 153 ಕಿ.ಮೀ. x 163 ಕಿ.ಮೀ. ಕಕ್ಷೆಯಲ್ಲಿ ಇರಿಸಿದೆ. ಇದು ಅಂತಿಮಘಟ್ಟವಾಗಿದ್ದು, ಚಂದ್ರನ ಅಂಗಳಕ್ಕೆ ಇಳಿಯಲು ಇನ್ನೊಂದು ಹೆಜ್ಜೆ ಬಾಕಿ ಇದೆ. ಆಗಸ್ಟ್​ 1ರಂದು ಭೂಕಕ್ಷೆಯನ್ನು ತೊರೆದ ಚಂದ್ರಯಾನ ನೌಕೆ, ಆಗಸ್ಟ್​ 5ರಂದು ಚಂದ್ರನ ಕಕ್ಷೆಗೆ ಪ್ರವೇಶ ಪಡೆಯಿತು. ಅಂದಿನಿಂದ ಇಸ್ರೋ ಆರ್ಬಿಟ್​ ರಿಡಕ್ಷನ್​ ಮಾನ್ಯುವರ್ಸ್​ ಮಾಡುತ್ತಿದ್ದು, ನೌಕೆಯ ಅಂತರವನ್ನು ಕಡಿತಗೊಳಿಸುತ್ತಿದೆ. ಇತ್ತೀಚೆಗಷ್ಟೇ ಮತ್ತೊಂದು ಹಂತದ ರಿಡಕ್ಷನ್​ ಮಾನ್ಯುವರ್ಸ್​ ಅನ್ನು ಯಶಸ್ವಿಯಾಗಿ ಮುಗಿಸಿತು. ಆಗಸ್ಟ್​ 15ರಂದು ಮತ್ತೊಂದು ಹಂತದ ಪ್ರಕ್ರಿಯೆಯು ಮುಗಿಸಿದ್ದು, ಚಂದ್ರನ ಅಂಗಳಕ್ಕೆ ಇಳಿಯಲು ಇನ್ನೂ 163 ಕಿ.ಮೀ. ದೂರ ಮಾತ್ರ ಬಾಕಿ ಇದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

ನಾಳೆ ಲ್ಯಾಂಡರ್​ ಬೇರ್ಪಡೆ
ಚಂದ್ರಯಾನ-3 ನೌಕೆಯನ್ನು ಜುಲೈ 14ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟದ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಈ ಬಾಹ್ಯಾಕಾಶ ನೌಕೆಯು ಪ್ರೊಪಲ್ಸನ್​ ಮಾಡ್ಯೂಲ್​ ಮತ್ತು ಒಂದು ಲ್ಯಾಂಡರ್​ ಮಾಡ್ಯೂಲ್​ ಒಳಗೊಂಡಿದೆ. ತನ್ನ ಪ್ರಯಾಣದ ಮಹತ್ವದ ಘಟ್ಟಕ್ಕಾಗಿ ಇದೀಗ ನೌಕೆಯು ಸಿದ್ಧತೆ ನಡೆಸುತ್ತಿದೆ. ಆಗಸ್ಟ್​ 17ರಂದು ಲ್ಯಾಂಡರ್​ ಮಾಡ್ಯೂಲ್​ ಅನ್ನು ಪ್ರೊಪಲ್ಸನ್​ ಮಾಡ್ಯೂಲ್​ನಿಂದ ಬೇರ್ಪಡಿಸಲು ಸಮಯ ನಿಗದಿಯಾಗಿದೆ.

ಪ್ರೊಪಲ್ಸನ್​ ಮಾಡ್ಯೂಲ್​ನಲ್ಲಿ ಏನಿದೆ?
ಪ್ರೊಪಲ್ಸನ್​ ಮಾಡ್ಯೂಲ್​ ಪೆಟ್ಟಿಗೆಯಂತಹ ರಚನೆಯಾಗಿದ್ದು, ದೊಡ್ಡ ಸೌರ ಫಲಕ ಮತ್ತು ಅದರ ಮೇಲೆ ಒಂದು ಸಿಲಿಂಡರ್ ಇದೆ. ಬಾಹ್ಯಾಕಾಶ ನೌಕೆಯು 100 ಕಿಮೀ ಚಂದ್ರನ ಕಕ್ಷೆಯನ್ನು ತಲುಪುವವರೆಗೆ ಲ್ಯಾಂಡರ್ ಮತ್ತು ರೋವರ್ ಸಂರಚನೆಯನ್ನು ಸಾಗಿಸುವ ಜವಾಬ್ದಾರಿಯನ್ನು ಇದು ಹೊಂದಿದೆ. ಲ್ಯಾಂಡರ್​ನಿಂದ ಬೇರ್ಪಟ್ಟ ಬಳಿಕವೂ ಪ್ರೊಪಲ್ಸನ್​ ಮಾಡ್ಯೂಲ್​, ಸಂವಹನ ಉಪಗ್ರಹವಾಗಿ ಕೆಲಸ ಮಾಡಲಿದೆ.

ಲ್ಯಾಂಡರ್​ ಮಾಡ್ಯೂಲ್​ನಲ್ಲಿ ಏನಿದೆ?
ಇದೇ ಸಂದರ್ಭದಲ್ಲಿ ವಿಕ್ರಮ್​ ಹೆಸರಿನ ಲ್ಯಾಂಡರ್​ ಮಾಡ್ಯೂಲ್​, ಚಂದ್ರನ ಮೇಲ್ಮೈ ಕಡೆಗೆ ತನ್ನ ಪ್ರಯಾಣವನ್ನು ಮುಂದುವರಿಸಲಿದೆ. ನಾಲ್ಕು ಲ್ಯಾಂಡಿಂಗ್​ ಲೆಗ್ಸ್​, ತಲಾ 800 ನ್ಯೂಟನ್‌ಗಳ ನಾಲ್ಕು ಲ್ಯಾಂಡಿಂಗ್ ಥ್ರಸ್ಟರ್‌ಗಳನ್ನು ವಿಕ್ರಮ್​ ಲ್ಯಾಂಡರ್​ ಹೊಂದಿದ್ದು, ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡಿಂಗ್​ ಮಾಡುವ ರೀತಿಯಲ್ಲಿ ಲ್ಯಾಂಡರ್​ ಅನ್ನು ಸಿದ್ಧಪಡಿಸಲಾಗಿದೆ. ವಿಕ್ರಮ್​ ಲ್ಯಾಂಡರ್​ ತನ್ನೊಳಗೆ ಪ್ರಗ್ಯಾನ್ ಹೆಸರಿನ ರೋವರ್ ಅನ್ನು ಹೊತ್ತೊಯ್ದಿದ್ದು, ಯಶಸ್ವಿ ಲ್ಯಾಂಡಿಂಗ್ ಆದ ನಂತರ ಅದನ್ನು ಚಂದ್ರನ ಮೇಲೆ ನಿಯೋಜಿಸಲಾಗುತ್ತದೆ.

ಚಂದ್ರಯಾನ-2 ಮಿಷನ್​ ಲ್ಯಾಂಡಿಂಗ್​ ವೇಳೆಯೇ ವಿಫಲವಾಗಿತು. ಲ್ಯಾಂಡರ್​ ಇನ್ನೇನು ಚಂದ್ರನ ಮೇಲೆ ಇಳಿಯಬೇಕು ಅನ್ನುವಷ್ಟರಲ್ಲಿ ಪತನಗೊಂಡು ಸಂಪರ್ಕ ಕಡಿದುಕೊಂಡಿತು. ಇದರಿಂದ ಚಂದ್ರಯಾನ-2 ಯೋಜನೆ ವಿಫಲವಾಯಿತು. ಇದರಿಂದ ಪಾಠ ಕಲಿತಿರುವ ಇಸ್ರೋ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಈ ಬಾರಿ ಯಾವುದೇ ತೊಂದರೆ ಇರುವುದಿಲ್ಲ ಎಂಬ ಭರವಸೆ ವ್ಯಕ್ತಪಡಿಸಿದೆ. ನಿರ್ಣಾಯಕ ಹಂತದಲ್ಲೂ ನೌಕೆಯ ಸೆನ್ಸಾರ್​ ಮತ್ತು ಇಂಜಿನ್​ ವಿಫಲವಾದರೂ ಚಿಂತಿಸಬೇಕಾಗಿಲ್ಲ. ಏಕೆಂದರೆ ಲ್ಯಾಂಡಿಂಗ್ ಯಶಸ್ವಿಯಾಗುವ ರೀತಿಯಲ್ಲಿ ಹೊಸ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ.

ಒಂದು ವೇಳೆ ಚಂದ್ರನ ಮೇಲೆ ಭಾರತ ಸಾಫ್ಟ್​ ಲ್ಯಾಂಡ್​ ಮಾಡಿದ್ದಲ್ಲಿ, ಅಮೆರಿಕ, ಚೀನಾ, ರಷ್ಯಾ ಮತ್ತು ಫ್ರಾನ್ಸ್​ ಸಾಲಿಗೆ ಭಾರತವೂ ಸೇರಿಕೊಳ್ಳಲಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com