ಪ್ರಶ್ನೆಗಾಗಿ ಲಂಚ: ಲೋಕಸಭೆಯಲ್ಲಿ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಉಚ್ಛಾಟನೆ; ಹೊರಹಾಕುವ ಅಧಿಕಾರವಿಲ್ಲ ಎಂದ ಮಹುವಾ

ತೃಣಮೂಲ ಕಾಂಗ್ರೆಸ್‌ ಸಂಸದೆ (TMC MP) ಮಹುವಾ ಮೊಯಿತ್ರಾ (Mahua Moitra) ವಿರುದ್ಧದ 'ಪ್ರಶ್ನೆಗಾಗಿ ಲಂಚ' ಪಡೆದ ಪ್ರಕರಣದ ಕುರಿತು ಲೋಕಸಭೆಯಲ್ಲಿ ನೈತಿಕ ಸಮಿತಿ ವರದಿ ಮಂಡಿಸಿದ ಬೆನ್ನಲ್ಲೇ ಅವರನ್ನು ಉಚ್ಛಾಟನೆ ಮಾಡಲಾಗಿದೆ.
ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ
ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ
Updated on

ನವದೆಹಲಿ: ತೃಣಮೂಲ ಕಾಂಗ್ರೆಸ್‌ ಸಂಸದೆ (TMC MP) ಮಹುವಾ ಮೊಯಿತ್ರಾ (Mahua Moitra) ವಿರುದ್ಧದ 'ಪ್ರಶ್ನೆಗಾಗಿ ಲಂಚ' ಪಡೆದ ಪ್ರಕರಣದ ಕುರಿತು ಲೋಕಸಭೆಯಲ್ಲಿ ನೈತಿಕ ಸಮಿತಿ ವರದಿ ಮಂಡಿಸಿದ ಬೆನ್ನಲ್ಲೇ ಅವರನ್ನು ಉಚ್ಛಾಟನೆ ಮಾಡಲಾಗಿದೆ.

ಸಂಸದೆ ಮೊಯಿತ್ರಾ ಅವರನ್ನು ಉಚ್ಚಾಟಿಸುವಂತೆ ವರದಿ ಶಿಫಾರಸು ಮಾಡಿದ್ದು, ಇದೇ ವರದಿಯನ್ನು ಲೋಕಸಭೆಯಲ್ಲಿ ಇಂದು ಮಂಡಿಸಲಾಗಿತ್ತು. ಅಂತೆಯೇ ಕೇಂದ್ರ ಸರ್ಕಾರ ಕೂಡ ಮಹುವಾ ಕುರಿತು ನೈತಿಕ ಸಮಿತಿ ವರದಿ ಶಿಫಾರಸ್ಸನ್ನು ಬೆಂಬಲಿಸಿ ಇಂದು ಲೋಕಸಭೆಯಲ್ಲಿ ತನ್ನ ನಿರ್ಣಯ ಮಂಡಿಸಿತು. ಇದರ ಬೆನ್ನಲ್ಲೇ ಸ್ಪೀಕರ್ ಓಂ ಬಿರ್ಲಾ ಅವರು ನೈತಿಕ ಸಮಿತಿ ಶಿಫಾರಸ್ಸನ್ನು ಮತದಾನದ ಮೂಲಕ ಅಂಗೀಕರಿಸಿದ್ದು, ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ ಅವರನ್ನು ಸಂಸತ್ತಿನಿಂದ ಉಚ್ಛಾಟಿಸಲಾಗಿದೆ. ಅಲ್ಲದೆ ಸದನವನ್ನು ಡಿಸೆಂಬರ್ 11ಕ್ಕೆ ಮುಂದೂಡಿದ್ದಾರೆ.

ಸಂಸದ ಮಹುವಾ ಮೊಯಿತ್ರಾ ಅವರ ನಡವಳಿಕೆಯು ಸಂಸದರಾಗಿ ಅನೈತಿಕ ಮತ್ತು ಅಸಭ್ಯವಾಗಿದೆ ಎಂಬ ಸಮಿತಿಯ ತೀರ್ಮಾನಗಳನ್ನು ಈ ಸದನ ಒಪ್ಪಿಕೊಳ್ಳುತ್ತದೆ. ಹಾಗಾಗಿ ಅವರು ಸಂಸದರಾಗಿ ಮುಂದುವರಿಯುವುದು ಸೂಕ್ತವಲ್ಲ ಎಂದು ಸ್ಪೀಕರ್ ಓಂ ಬಿರ್ಲಾ ಅವರು ಹೇಳಿದ್ದಾರೆ.

'ಹಿಂದೆ ಅನುಸರಿಸುತ್ತಿದ್ದ ಸಂಪ್ರದಾಯಗಳ ನಕಲು ನನ್ನ ಬಳಿ ಇದೆ. ಮಾಜಿ ಸಭಾಪತಿಗಳಾದ ಸೋಮನಾಥ ಚಟರ್ಜಿ ಮತ್ತು ಪ್ರಣಬ್ ಮುಖರ್ಜಿ ಅವರು ಈ ಹಿಂದೆ ಇಲ್ಲಿದ್ದರು... ಅವರು ನೀಡಿದ ನಿಯಮಗಳು ಮತ್ತು ಸಂಪ್ರದಾಯಗಳನ್ನು ನಮ್ಮ ನಿಯಮಗಳೆಂದು ಪರಿಗಣಿಸಲಾಗಿದೆ. ಸಮಿತಿಯ ಮುಂದೆ ಆರೋಪಗಳಿರುವ ಸದಸ್ಯರಿಗೆ ಮಾತನಾಡಲು ಸಾಕಷ್ಟು ಸಮಯ ನೀಡಲಾಗಿದೆ ಎಂದು ಸೋಮನಾಥ್ ಚಟರ್ಜಿ ಹೇಳಿದ್ದರು... ಹಿಂದಿನ ಸ್ಪೀಕರ್‌ಗಳು ಅನುಸರಿಸಿದ ಸಂಪ್ರದಾಯಗಳನ್ನು ಮುಂದಿನ ಸಭಾಪತಿಗಳು ಅನುಸರಿಸುವ ಸಂಪ್ರದಾಯವನ್ನು ಈ ಸದನ ಹೊಂದಿದೆ. ಸಂಸದೆ ಮಹುವಾ ಮೊಯಿತ್ರಾ ಅವರ ನಡವಳಿಕೆಯು ಸಂಸದರಾಗಿ ಅನೈತಿಕ ಮತ್ತು ಅಸಭ್ಯವಾಗಿದೆ ಎಂಬ ಸಮಿತಿಯ ತೀರ್ಮಾನಗಳನ್ನು ಈ ಸದನವು ಒಪ್ಪಿಕೊಳ್ಳುತ್ತದೆ. ಹಾಗಾಗಿ ಅವರು ಸಂಸದೆಯಾಗಿ ಮುಂದುವರಿಯುವುದು ಸೂಕ್ತವಲ್ಲ ಎಂದು ಓಂ ಬಿರ್ಲಾ ಹೇಳಿದರು.

"ಎಥಿಕ್ಸ್ ಕಮಿಟಿಗೆ ಹೊರಹಾಕುವ ಅಧಿಕಾರವಿಲ್ಲ: ಮಹುವಾ ಆಕ್ರೋಶ
ಇನ್ನು ಉಚ್ಛಾಟನೆ ನಿರ್ಧಾರವನ್ನು ವಿರೋಧಿಸಿರುವ ಟಿಎಂಸಿಯ ಉಚ್ಛಾಟಿತ ಸಂಸದೆ ಮಹುವಾ ಮೋಯಿತ್ರಾ, ಎಥಿಕ್ಸ್ ಕಮಿಟಿಗೆ ಹೊರಹಾಕುವ ಅಧಿಕಾರವಿಲ್ಲ. ಇದು ನಿಮ್ಮ(ಬಿಜೆಪಿ) ಅಂತ್ಯದ ಆರಂಭ" ಎಂದು ಕಿಡಿಕಾರಿದ್ದಾರೆ. 

'ನನ್ನನ್ನು ಬಾಯಿ ಮುಚ್ಚಿಸುವ ಮೂಲಕ ಅದಾನಿ ಸಮಸ್ಯೆಯನ್ನು ಹೋಗಲಾಡಿಸಬಹುದು ಎಂದು ಈ ಮೋದಿ ಸರ್ಕಾರ ಭಾವಿಸಿದ್ದರೆ, ಅದು ತಪ್ಪು. ನೀವು ಬಳಸಿದ ತರಾತುರಿ ಮತ್ತು ಸರಿಯಾದ ಪ್ರಕ್ರಿಯೆಯ ದುರುಪಯೋಗವು ನಿಮಗೆ ಅದಾನಿ ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತದೆ. ನಿಮ್ಮ ತಪ್ಪುಗಳನ್ನು ಪ್ರಶ್ನಿಸುವ ಒಂಟಿ ಮಹಿಳಾ ಸಂಸದರ ಬಾಯಿ ಮುಚ್ಚಿಸಲು ನೀವು ಎಷ್ಟು ಕಾಲ ಕಿರುಕುಳ ನೀಡುತ್ತೀರಿ ಎಂದು ಕಿಡಿಕಾರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com