141 ಸಂಸದರ ಅಮಾನತು: ಮೋದಿ ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ ಎಂದ ಸೋನಿಯಾ ಗಾಂಧಿ

ವಿರೋಧಪಕ್ಷಗಳ ಸಂಸದರನ್ನು ಕಲಾಪದಿಂದ ಅಮಾನತು ಮಾಡುವ ಮೂಲಕ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಪ್ರಜಾ ಪ್ರಭುತ್ವದ ಕತ್ತು ಹಿಸುಕುತ್ತಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.
ಸಂಸತ್ ನಲ್ಲಿ ಸೋನಿಯಾ ಗಾಂಧಿ
ಸಂಸತ್ ನಲ್ಲಿ ಸೋನಿಯಾ ಗಾಂಧಿ

ನವದೆಹಲಿ: ವಿರೋಧಪಕ್ಷಗಳ ಸಂಸದರನ್ನು ಕಲಾಪದಿಂದ ಅಮಾನತು ಮಾಡುವ ಮೂಲಕ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಪ್ರಜಾ ಪ್ರಭುತ್ವದ ಕತ್ತು ಹಿಸುಕುತ್ತಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ (Winter Parliament Session) ಅಶಿಸ್ತಿನ ನಡವಳಿಕೆ ಹಿನ್ನೆಲೆ 141 ಸಂಸದರನ್ನು (MP) ಅಮಾನತುಗೊಳಿಸಿದ ಕುರಿತು ಕಾಂಗ್ರೆಸ್ ಸಂಸದೀಯ ಪಕ್ಷದ (CPP) ಮುಖ್ಯಸ್ಥೆ ಸೋನಿಯಾ ಗಾಂಧಿ (Sonia Gandhi) ಪ್ರತಿಕ್ರಿಯಿಸಿದ್ದು, ನರೇಂದ್ರ ಮೋದಿ (Narendra Modi) ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸತ್ ಭವನದ ಸೆಂಟ್ರಲ್ ಹಾಲ್‌ನ ಸಂವಿಧಾನ್ ಸದನ್‌ನಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ವಿರೋಧ ಪಕ್ಷದ 141 ಸಂಸದರನ್ನು ಸರ್ಕಾರ ಅಮಾನತುಗೊಳಿಸಿರುವುದನ್ನು ಖಂಡಿಸಿದರು. 'ಸಂಪೂರ್ಣವಾಗಿ ಸಮಂಜಸವಾದ ಮತ್ತು ನ್ಯಾಯಸಮ್ಮತವಾದ ಬೇಡಿಕೆಗೆ ಒತ್ತಾಯಿಸಿದ್ದಕ್ಕಾಗಿ ಹಿಂದೆಂದೂ ಇಷ್ಟು ವಿರೋಧ ಪಕ್ಷದ ಸಂಸದರನ್ನು ಸದನದಿಂದ ಅಮಾನತುಗೊಳಿಸಿಲ್ಲ ಎಂದು ವಾಗ್ದಾಳಿ ನಡೆಸಿದರು. ಡಿಸೆಂಬರ್ 13ರಂದು ಸಂಸತ್ ಭವನದಲ್ಲಿ ನಡೆದ ಭದ್ರತಾ ಉಲ್ಲಂಘನೆ (Security Breach) ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah)ಅವರಿಂದ ಹೇಳಿಕೆ ನೀಡುವಂತೆ ವಿಪಕ್ಷ ನಾಯಕರು ಒತ್ತಾಯಿಸಿದ್ದಾರೆ. ಭದ್ರತಾ ಲೋಪದ ಕುರಿತು ಅಮಿತ್ ಶಾ ಹೇಳಿಕೆ ಕೊಡಬೇಕಾಗಿತ್ತು' ಎಂದು ಸಂಸದರನ್ನು ಬೆಂಬಲಿಸಿದರು.  

"ವಿರೋಧ ಪಕ್ಷದ ಸದಸ್ಯರನ್ನು ಸದನದಿಂದ ಅಮಾನತು ಮಾಡಿರುವುದು ಸರಿಯಲ್ಲ. ಡಿಸೆಂಬರ್​ 13ರಂದು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರಿ ಭದ್ರತಾ ಲೋಪ ಉಂಟಾಗಿದೆ. ಲೋಕಸಭೆ ಕಲಾಪ ನಡೆಯುತ್ತಿದ್ದ ಸಮಯದಲ್ಲಿ ಇಬ್ಬರು ಯುವಕರು ಸದನದೊಳಗೆ ನುಗ್ಗಿ ಕಲಾಪಕ್ಕೆ ತೀವ್ರ ಅಡ್ಡಿ ಉಂಟು ಮಾಡಿರುವುದು ಅಕ್ಷಮ್ಯ ಮತ್ತು ಸಮರ್ಥನೀಯವಲ್ಲ. ಪ್ರಧಾನಿ ರಾಷ್ಟ್ರವನ್ನು ಉದ್ದೇಶಿಸಿ ಮತ್ತು ಘಟನೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನಾಲ್ಕು ದಿನಗಳನ್ನು ತೆಗೆದುಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಸಂಸತ್ತಿನ ಹೊರಗೆ ಪ್ರಕ್ರಿಯಿಸಿದ್ದಾರೆ. ಹೀಗೆ ಮಾಡುವ ಮೂಲಕ ಅವರು ತಮ್ಮ ತಿರಸ್ಕಾರ ಮನೋಭಾವವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಸದನದ ಘನತೆಗಾಗಿ ಮತ್ತು ನಮ್ಮ ದೇಶದ ಜನರ ಬಗ್ಗೆ ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ ಎಂದರು.

"ಈ ಬಾರಿಯ ಚಳಿಗಾಲದ ಅಧಿವೇಶನವು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಮಸೂದೆಗಳನ್ನು ಅಂಗೀಕರಿಸಿದೆ. ಜವಾಹರಲಾಲ್ ನೆಹರು ಅವರಂತಹ ಮಹಾನ್ ದೇಶಭಕ್ತರ ಮಾನಹಾನಿಗಾಗಿ ಇತಿಹಾಸವನ್ನು ತಿರುಚಲಾಗುತ್ತಿದೆ. ಐತಿಹಾಸಿಕ ಸತ್ಯಗಳನ್ನು ತಿರುಚುವ ನಿಟ್ಟಿನಲ್ಲಿ ಅವಿರತ ಪ್ರಚಾರವನ್ನು ನಡೆಸಲಾಗುತ್ತಿದೆ. ಈ ಪ್ರಯತ್ನಗಳಲ್ಲಿ ಪ್ರಧಾನಿ ಮತ್ತು ಗೃಹ ಸಚಿವರು ಸ್ವತಃ ನೇತೃತ್ವ ವಹಿಸಿದ್ದಾರೆ. ಆದರೆ, ನಾವು ಹೆದರುವುದಿಲ್ಲ, ನಾವು ಸತ್ಯವನ್ನು ಹೇಳಲು ಯಾವತ್ತೂ ಹಿಂಜರಿಯುವುದಿಲ್ಲ. ನಾವು ಸತ್ಯ ನುಡಿಯುವ ಕಾರ್ಯವನ್ನು ಮುಂದುವರಿಯುತ್ತೇವೆ" ಎಂದು ಸೋನಿಯಾ ಗಾಂಧಿ ಕಿಡಿಕಾರಿದರು.

"ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ವಿಧಾನಸಭಾ ಚುನಾವಣಾ ಫಲಿತಾಂಶಗಳು ನಮ್ಮ ಪಕ್ಷಕ್ಕೆ ತುಂಬಾ ನಿರಾಶಾದಾಯಕವಾಗಿದೆ. ನಮ್ಮ ಕಳಪೆ ಪ್ರದರ್ಶನದ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅಗತ್ಯವಿರುವ ಪಾಠಗಳನ್ನು ಪಡೆಯಲು ಕಾಂಗ್ರೆಸ್ ಅಧ್ಯಕ್ಷರು ಈಗಾಗಲೇ ಮೊದಲ ಸುತ್ತಿನ ವಿಮರ್ಶೆಗಳನ್ನು ಮಾಡಿದ್ದಾರೆ. ನಮ್ಮ ಸಂಘಟನೆಗಾಗಿ, ನಾವು ಅಗಾಧ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಆದರೂ ನಮ್ಮ ಸ್ಥೈರ್ಯ ಮತ್ತು ದೃಢತೆ ನಮ್ಮನ್ನು ಕಾಪಾಡುತ್ತದೆ ಎಂಬ ವಿಶ್ವಾಸ ನನಗಿದೆ'' ಎಂದು ಸಿಪಿಪಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com